ವಾಡಿ: ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ಬೆಳಗ್ಗೆ ಶಾಲಾ ಕಾಲೇಜುಗಳಿಗೆ ಹೋಗಲು ಪರದಾಡುತ್ತಿದ್ದ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಕೊನೆಗೂ ಬಸ್ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಮಕ್ಕಳ ಕೂಗು ಕೇಳಿಸಿಕೊಂಡಿದೆ.
ರಾಷ್ಟ್ರೀಯ ಹೆದ್ದಾರಿ-150ಕ್ಕೆ ಹೊಂದಿಕೊಂಡಿರುವ ಹಳಕರ್ಟಿ ಗ್ರಾಮಕ್ಕೆ ಕಲಬುರಗಿ ಡಿಪೋ ದಿಂದ ಬುಧವಾರ ನೂತನ ಬಸ್ ಬಿಡುಗಡೆ ಮಾಡಲಾಗಿದ್ದು, ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಬಸ್ ಅನ್ನು ಗ್ರಾಮಕ್ಕೆ ಸ್ವಾಗತಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿದರು. ಒಗ್ಗಟ್ಟಿನ ಹೋರಾಟದ ಘೋಷಣೆಗಳನ್ನು ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಹಳಕರ್ಟಿ ಗ್ರಾಮವು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿದೆ. ಯಾದಗಿರಿ-ಕಲಬುರಗಿ ನಡುವೆ ಹಲವು ಬಸ್‍ಗಳು ಸಂಚರಿಸುತ್ತವೆ. ಆದರೆ ಹಳಕರ್ಟಿ ಗ್ರಾಮದಲ್ಲಿ ಬಸ್ ನಿಲುಗಡೆ ನಿರಾಕರಿಸಲಾಗಿತ್ತು. ಕೆಲವು ಬಸ್‍ಗಳಿಗೆ ನಿಲುಗಡೆ ನೀಡಿದ್ದರೂ ಜನರು ಭರ್ತಿಯಾಗಿದ್ದಾರೆ ಎಂಬ ಕಾರಣಕ್ಕೆ ನಿಲ್ಲಿಸುತ್ತಿರಲಿಲ್ಲ. ಇದರಿಂದ ಹಳಕರ್ಟಿ ಗ್ರಾಮದಿಂದ ವಾಡಿ ಪಟ್ಟಣ ಸೇರಿದಂತೆ ಕಲಬುರಗಿ, ಶಹಾಬಾದ ನಗರಗಳ ಶಾಲಾ ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಿತ್ತು. ಸಾರಿಗೆ ಸಂಸ್ಥೆಯ ಈ ಧೋರಣೆ ಖಂಡಿಸಿ ಹಲವು ಬಾರಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ಮಾಡಲಾಗಿತ್ತು. ಸಾರಿಗೆ ಇಲಾಖೆಯ ಜಿಲ್ಲಾ ಕಚೇರಿಯ ಮುಂದೆಯೂ ಧರಣಿ ನಡೆಸಲಾಯಿತು. ಕಳೆದ ಒಂದು ವರ್ಷದಿಂದ ಹೋರಾಟ ನಿರಂತರವಾಗಿತ್ತು.
ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಸಾರಿಗೆ ಅಧಿಕಾರಿಗಳು, ಅ.4 ರಿಂದ ಹಳಕರ್ಟಿ-ಕಲಬುರಗಿ ಮಧ್ಯೆ ಬಸ್ ಸೌಕರ್ಯ ಒದಗಿಸಿದ್ದಾರೆ. ಬೆಳಗ್ಗೆ 8:30ಕ್ಕೆ, ಮದ್ಯಾಹ್ನ 1:00 ಗಂಟೆಗೆ ಮತ್ತು ಸಾಯಂಕಾಲ 4:00 ಗಂಟೆಗೆ ಬಸ್ ಹಳಕರ್ಟಿಯಿಂದ ವಾಡಿ ಮಾರ್ಗವಾಗಿ ಕಲಬುರಗಿ ತೆರಳಲಿದೆ ಎಂದು ವಿವರಿಸಿದರು. ಯಾವುದೇ ನೆಪ ಹೇಳದೆ ಪ್ರತಿದಿನವೂ ಬಸ್ ಗ್ರಾಮಕ್ಕೆ ಆಗಮಿಸಬೇಕು. ಸಮಯ ಪಾಲನೆ ಮಾಡದಿದ್ದರೆ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಎಐಡಿಎಸ್‍ಒ ಕಾರ್ಯದರ್ಶಿ ಗೋವಿಂದ ಯಳವಾರ, ಮುಖಂಡರಾದ ಶಿವುಕುಮಾರ ಆಂದೋಲಾ, ಸಿದ್ದಾರ್ಥ ತಿಪ್ಪನೋರ, ಶರಣು ಹಣಿಕೇರಿ, ಶಾಂತಕುಮಾರ, ಸಿದ್ಧರಾಜ ಮದ್ರಿ, ಭೀಮಣ್ಣ ಮಾಟ್ನಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.