ಜವಳಗೇರಾ ನಾಡಗೌಡರ ಹೆಚ್ಚುವರಿ ಭೂಮಿ ಹಂಚಿಕೆಗೆ ಒತ್ತಾಯಿಸಿ ಸಿಂಧನೂರಿನಲ್ಲಿ ರಸ್ತೆತಡೆ ಚಳುವಳಿ ಅ. 17ಕ್ಕೆ

0
17

ಸಿಂಧನೂರು; ತಾಲ್ಲೂಕ ಜವಳಗೇರಾ ನಾಡಗೌಡ (ಭಾರಿ ಜಮೀನ್ದಾರ)ರ ಅಕ್ರಮ ವಶದಲ್ಲಿರುವ ಸಿಂಧನೂರು ಸ.ನಂ.೪೧೯ ಹಾಗೂ ಸುಲ್ತಾನಪೂರು ಸ.ನಂ.೧೮೫ ಒಟ್ಟು ೬೨.೩೭ ಎಕರೆ ಹೆಚ್ಚುವರಿ ಭೂಮಿಯನ್ನು ಕೂಡಲೇ ಭೂರಹಿತರಿಗೆ ವಿತರಿಸಬೇಕೆಂದು, ಹಾಗೂ ಅಕ್ರಮ ಸಾಗುವಳಿದಾರರಾದ  ರಾಜಶೇಖರ ನಾಡಗೌಡ ಹಾಗೂ ಚಂದ್ರ ಭೂಪಾಲ ನಾಡಗೌಡ ಇವರುಗಳು ಮೇಲೆ ಭೂಕಬಳಿಕೆ ಪ್ರತಿಬಂಧಕ ಕಾಯ್ದೆ-೨೦೧೨ ರನ್ವಯ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ ೧೭ ರಂದು ಸಿಂಧನೂರು ಗಾಂಧಿ ವೃತ್ತದಲ್ಲಿ ಬೃಹತ್ ರಸ್ತೆತಡೆ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಾಲಿ ಬ್ಯೂರೊ ಸದಸ್ಯ ಆರ್.ಮಾನಸಯ್ಯ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಭೂಮಿಯ ವಿತರಣೆಗೆ ಒತ್ತಾಯಿಸಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ(ಎಐಕೆಕೆಎಸ್)ಗಳು ಕಳೆದ ಒಂದು ವರ್ಷದಿಂದ ಹೋರಾಟ ಮುಂದುವರೆಸಿವೆ. ಸ.ನಂ. ೪೧೯ ರಲ್ಲಿಯೇ ಬಿಡಾರ ಹೂಡಿ ಕಳೆದ ಆರು ದಿನಗಳಿಂದ ಹಗಲು ರಾತ್ರಿ ಧರಣಿ ಮುಂದುವರೆದಿದೆ. ಸ್ಥಳಕ್ಕೆ ಸಿಂಧನೂರು ತಹಶೀಲ್ದಾರರು ಹಾಗೂ ಲಿಂಗಸೂಗೂರು ಸಹಾಯಕ ಆಯುಕ್ತರು ಬೇಟಿ ನೀಡಿದ್ದಾರೆ. ಆದರೆ, ಭೂಮಾಲೀಕರ ಮೇಲೆ ಕ್ರಮ ಜರುಗಿಸಲು ತಯಾರಿಲ್ಲ. ಭೂಮಿ ಹಂಚಲು ತಯಾರಿಲ್ಲ. ತಾಲೂಕ ಆಡಳಿತ ಜಿಲ್ಲಾಧಿಕಾರಿಗಳ ಮಾರ್ಗದರ್ಶನಕ್ಕಾಗಿ ಕಾಯುತ್ತಿದೆ. ಆದರೆ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಮಾರ್ಗದರ್ಶನ ನೀಡಲು ತಯಾರಿಲ.್ಲ ಒಂದೆಡೆ ಭೂಮಾಲೀಕರು ಮತ್ತೊಂದೆಡೆ ಕಂದಾಯ ಇಲಾಖೆಯ ಅಧಿಕಾರಿಗಳು ದೇವರಾಜು ಅರಸು ಅವರ ಪ್ರತಿಷ್ಠಿತ ಭೂಸುಧಾರಣೆಯನ್ನು ಬುಡಮೇಲು ಮಾಡಿರುತ್ತಾರೆ. ಇವರ ವಿರುದ್ದ ನಮ್ಮ ಚಳವಳಿ ಮುಂದುವರೆಯಲಿದೆ. ಜಮೀನಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯ ಜೊತೆ ರಸ್ತೆತಡೆ ಚಳವಳಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

Contact Your\'s Advertisement; 9902492681

40 ವರ್ಷ ಕೋಮದಲ್ಲಿರುವ ಭೂನ್ಯಾಯ ಮಂಡಳಿ!?; ಜವಳಗೇರದ ಜಮೀನುದಾರರು ೧೯೭೪ರಲ್ಲಿ ೯ ಘೋಷಣಾ ಪತ್ರಗಳನ್ನು ಸಲ್ಲಿಸಿರುತ್ತಾರೆ. ಪ್ರತಿಯೊಂದು ಘೋಷಣಾ ಪತ್ರದಲ್ಲಿ ೫೦೦ ರಿಂದ ೭೦೦ ಎಕರೆ ಭೂಮಿ ತೋರಿಸಿರುತ್ತಾರೆ. ಈ ಪೈಕಿ ಸಿದ್ದಲಿಂಗಮ್ಮ ಗಂ/ ವೆಂಕಟರಾವ್ ಎಂಬುವವರು ತಮ್ಮ ಘೋಷಣಾ ಪತ್ರದಲ್ಲಿ ೧೧೨೩-೩೨ ಎಕರೆ ತೋರಿಸಿರುತ್ತಾರೆ. ಇವರಿಗೆ ಮಕ್ಕಳು ಇರುವುದಿಲ್ಲ. ಈ ಘೋಷಣಾ ಪತ್ರದ ಮೇಲೆ ಭೂನ್ಯಾಯ ಮಂಡಳಿ ಸಿಂಧನೂರು ಇವರು ವಿಚಾರಣೆ ನಡೆಯಿಸಿ ದಿ: ೫-೧೧-೧೯೮೧ ರಂದು ಜವಳಗೇರಾ, ಶಿವ ಜವಳಗೇರಾ, ಕೊಂಗನಾಯಕ ಹಟ್ಟಿ, ದೇವರಗುಡಿ, ಬಾದರ್ಲಿ, ಕುನ್ನಟಗಿ, ಸುಲ್ತಾನಪೂರ, ಸಿಂಧನೂರು, ಬೆಳಗುರ್ಕಿ, ಜಂಗಮರಹಟ್ಟಿ, ಪಗಡದಿನ್ನಿ, ದಿಬ್ಬನಖೇಡ ಹಾಗೂ ತುರಕಟ್ಟಿ ಗ್ರಾಮಗಳ ೧೦೬೯-೩೨ ಎಕರೆ ಜಮೀನನ್ನು ಹೆಚ್ಚುವರಿ ಎಂದು ತೀರ್ಪು ನೀಡಿದೆ. ತೀರ್ಪು ನೀಡಿದ ೪ ತಿಂಗಳಲ್ಲಿ ಸದರಿ ಭೂಮಿಯನ್ನು ಕಬ್ಜಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ, ಸದರಿ ಭೂಮಿಯನ್ನು ಭೂಹೀನರಿಗೆ ಹಂಚದೆ ಹೆಚ್ಚುವರಿಯಾದ ಈ ಭೂಮಿಯನ್ನು ಮಾಜಿ ಜಮೀನ್ದಾರರ ವಶಕ್ಕೆ ನೀಡಲಾಗಿದೆ. ಇದು ಕರ್ನಾಟಕದ ಭೂಸುಧಾರಣೆಯ ಇತಿಹಾಸದಲ್ಲಿಯೆ ಅತ್ಯಂತ ಕಾನೂನು ಬಾಹೀರ ಬುಡಮೇಲು ಹಗರಣವಾಗಿದೆ ಎಂದು ಆರೋಪಿಸಿದರು.

ಅಂದಿನಿಂದ ಇಂದಿನ ವರೆಗೆ (೧೯೮೧ ರಿಂದ ೨೦೨೨) ಇದನ್ನು ಯಾರು ಪ್ರಶ್ನೆ ಮಾಡಿಲ್ಲ. ನಾವು ಹೋರಾಟ ಆರಂಭಿಸಿದ ಮೇಲೆ, ಸದರಿ ಭೂನ್ಯಾಯ ಮಂಡಳಿಯ ತೀರ್ಪಿಗೆ ದಿ: ೧೪-೧೧-೧೯೮೪ರಲ್ಲಿ ಬೆಂಗಳೂರು ಹೈಕೋರ್ಟ್ ತಡೆಯಾಜ್ಞೆ ನೀಡಿ, ಸದರಿ ಪ್ರಕರಣವನ್ನು ಮರು ವಿಚಾರಣೆ ಮಾಡಲು ಸಿಂಧನೂರು ಭೂನ್ಯಾಯ ಮಂಡಳಿಗೆ ಹೈಕೋರ್ಟ್ ಆದೇಶ ಮಾಡಿದೆ ಎಂಬ ಕಥೆ ಕಟ್ಟಿ ಹೇಳುತ್ತಿದ್ದಾರೆ. ಹೈಕೋರ್ಟ್ ತೀರ್ಪಿನ ಕೆಲವು ಹಾಳೆಗಳೇ ಇಲ್ಲ. ಇದು ನೂರಕ್ಕೆ ತೊಂಬತ್ತರಷ್ಟು ನಕಲಿ ಎಂದು ಕಂಡು ಬಂದಿದೆ. ಅಲ್ಲದೆ, ೧೯೮೪ ರಿಂದ ಇಲ್ಲಿಯವರೆಗೆ ಅಂದರೆ, ೪೦ ವರ್ಷಗಳ ಕಾಲ ವಿಚಾರಣೆಯೆ ಇಲ್ಲ ಏಕೆ? ೪೦ ವರ್ಷ ಭೂನ್ಯಾಯ ಮಂಡಳಿಯು ಈ ಪ್ರಕರಣವನ್ನು ಏಕೆ ಮರೆಯಿತು? ಇದು ಭೂಸುಧಾರಣೆಯ ಬುಡಮೇಲು ಕೃತ್ಯವಲ್ಲವೇ? ಕಳೆದ ೪೦ ವರ್ಷಗಳಿಂದ ಹೆಚ್ಚುವರಿಯಾದ ೧೧೨೩-೩೨ ಎಕರೆ ಭೂಮಿಯನ್ನು ಮಾಜಿ ಭೂಮಾಲೀಕರಿಗೆ ಬಿಟ್ಟುಕೊಟ್ಟ ಅಧಿಕಾರಿಗಳ ಮೇಲೆ ಯಾವ ಕ್ರಮ? ಕರ್ನಾಟಕ ಭೂಸುಧಾರಣೆಯು ಈ ರೀತಿಯಲ್ಲಿಯೇ ವಿಫಲವಾಗಿದೆ ಎಂದು ಇದು ಸಾಬೀತು ಪಡಿಸುದಿಲ್ಲವೇ? ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಮ್ಮ ಸಿಂಧನೂರು ಭೂ ಸಂಘರ್ಷ ಚಳವಳಿ ಮುಂದುವರೆದಿದೆ ಎಂದು ತಿಳಿಸಿದರು.

ಕಂದಾಯ ಸಚಿವರು, ಸಿಂಧನೂರು ಶಾಸಕರು ಈ ಕೂಡಲೇ ಕ್ರಮ ಜರುಗಿಸಲು ರಾಜ್ಯ ಸರಕಾರದಿಂದ ಆದೇಶ ಹೊರಡಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಸಿಪಿಐ(ಎಂಎಲ್)ರೆಡ್ ಸ್ಟಾರ್ ಜಿಲ್ಲಾ ಕಾರ್ಯದರ್ಶಿ ಎಂ.ಡಿ, ಅಮೀರ ಅಲಿ, ಕರ್ನಾಟಕ ರೈತ ಸಂಘ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಸಿಪಿಐಎಂಎಲ್ ರೆಡ್ ಸ್ಟಾರ್ ತಾಲೂಕ ಕಾರ್ಯದರ್ಶಿ ಆರ್ ಹುಚ್ಚ್ ರೆಡ್ಡಿ, ಪಕ್ಷದ ಮುಖಂಡ ಅಜೀಜ್ ಜಾಗೀರ್ದಾರ್, ರೈತ ಮುಖಂಡ ಸಂತೋಷ್ ದಿನ್ನಿ ಸೇರಿ ಹಲವರು ಭಾಗವಹಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here