ವಾಡಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಅನಿರೀಕ್ಷಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿರುವ ಜೆಸ್ಕಾಂ ಅಧಿಕಾರಿಗಳ ಕ್ರಮವನ್ನು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷ ಖಂಡಿಸಿದೆ.
ಶುಕ್ರವಾರ ಸ್ಥಳೀಯ ಜೆಸ್ಕಾಂ ಶಾಖಾಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಲೋಡ್ ಶೆಡ್ಡಿಂಗ್ ಕೈಬಿಡುವಂತೆ ಆಗ್ರಹಿಸಿರುವ ಎಸ್‍ಯುಸಿಐ (ಸಿ) ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಜನತೆಗೆ ಮಾಹಿತಿ ನೀಡದೆ ಪ್ರತಿದಿನ ಎರಡು ತಾಸು ಏಕಾಏಕಿ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿರುವುದು ಸರಿಯಲ್ಲ. ಇದರಿಂದ ಪಟ್ಟಣದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗ್ರಾಮೀಣ ಭಾಗದಲ್ಲೂ ರೈತರು ಸಂಕಷ್ಟ ಎದುರಿಸುವಂತಾಗಿದೆ. ವ್ಯಾಪಾರ, ವಹಿವಾಟು, ಆಸ್ಪತ್ರೆ, ಕೈಗಾರಿಕೆ, ಗಣಿಗಾರಿಕೆ ಹೀಗೆ ಅನೇಕ ರೀತಿಯಲ್ಲಿ ಜನರಿಗೆ ಅನಾನುಕೂಲ ಉಂಟಾಗುತ್ತಿದೆ. ವಿದ್ಯುತ್ ಕಡಿತ ಕುರಿತು ಯಾವುದೇ ವೇಳಾಪಟ್ಟಿ ಬಿಡುಗಡೆ ಮಾಡದೆ ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೋಡ್‍ಶೆಡ್ಡಿಂಗ್ ಕೈಬಿಡಬೇಕು. ಜನರಿಗೆ ನಿರಂತರವಾಗಿ ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಲೋಡ್ ಶೆಡ್ಡಿಂಗ್ ಮುಂದು ವರೆಸಿದರೆ ಜನರನ್ನು ಸಂಘಟಿಸಿ ಜೆಸ್ಕಾಂ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜೆಸ್ಕಾಂ ಶಾಖಾಧಿಕಾರಿ ರೇವಣಸಿದ್ಧಪ್ಪ ಹೊನಗುಂಟಿ ಮನವಿಪತ್ರ ಸ್ವೀಕರಿಸಿದರು. ಜೆಸ್ಕಾಂ ಸಿಬ್ಬಂದಿ ಅಂಬ್ರೀಶ ಬಡಿಗೇರ, ಎಸ್‍ಯುಸಿಐ ಮುಖಂಡರಾದ ಶರಣು ಹೇರೂರ, ಗೌತಮ ಪರ್ತೂರಕರ, ಚಂದ್ರಕಾಂತ ಪಗಲಾಪುರ, ದತ್ತು ಹುಡೇಕರ, ಸಾಯಿನಾಥ ಚಿಟೇಲಕರ್, ಅವಿನಾಶ ಒಡೆಯರಾಜ್, ಅಲ್ಲಾದಿನ್, ವಿಜಯಕುಮಾರ ನಿಯೋಗದಲ್ಲಿ ಇದ್ದರು.