ಕಲಬುರಗಿ; ತನಗಾದ ಅನ್ಯಾಯವನ್ನು ಸಹಿಸುವನು ಹೃದಯವಂತ, ಬೇರೆಯವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವವನು ಸಂಸ್ಕಾರವಂತ, ಮಾನವೀಯ ಮೌಲ್ಯಗಳು ಹೊಂದಿರುವ ಜೀವನ ಮನುಷ್ಯನ ಸಂತೃಪ್ತಿಗೆ ಕಾರಣವಾಗುತ್ತದೆ ಎಂದು ಚಿಣಮಗೇರಿಯ ಪೂಜ್ಯರಾದ ಶ್ರೀ ವೀರ ಮಹಾಂತ ಶಿವಾಚಾರ್ಯರು ಹೇಳಿದರು.
ಶುಕ್ರವಾರ ತಾಲೂಕಿನ ಹತಗುಂದಿ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ “ಭಾಗ್ಯವಂತಿ ಪುರಾಣ” ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಾ ಹತಗುಂದಿಯ ಶಿವಲೀಲಾ ತಾಯಿಯವರು ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಭಕ್ತರ ಹೃದಯ ಮಂದಿರದಲ್ಲಿ ನೆಲೆಸಿದ್ದಾರೆಂದು ಆಶೀರ್ವಚನ ನೀಡಿದರು.
ಸತತವಾಗಿ ಐದು ದಿನಗಳಿಂದ ಸುಸ್ಕಲಿತವಾಗಿ ಪುರಾಣವನ್ನು ಹೇಳುತ್ತಿರುವ ಪುರಾಣಪಟುಗಳಾದ ಶ್ರೀ ಸಂಗಮೇಶ ಶಾಸ್ತ್ರಿ ಮಾಶಾಳ ಅವರು ಮಾತನಾಡುತ್ತಾ ಮನುಷ್ಯನ ಕೆಟ್ಟ ಕರ್ಮಗಳನ್ನು ಮಾಡಿ ಒಳಿತಾಗಲಿ ಎಂದು ಬಯಸಿದರೆ ಒಳ್ಳೆಯದಾಗುವುದಿಲ್ಲ. ಅವನು ಮಾಡಿದ ಕರ್ಮ ಆತನು ಅನುಭವಿಸಲೆಬೇಕು. ಅದಕ್ಕಾಗಿ ನಾವೆಲ್ಲರೂ ಪುಣ್ಯದ ಕಾರ್ಯ ಮಾಡಿ ಶರಣರು ಸಂತರು, ಮಹಾಂತರಂತೆ ಒಳ್ಳೆಯ ಕಾರ್ಯ ಮಾಡಿ ಅಮರವಾಗಬೇಕು. ಸಾಮಾನ್ಯ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ, ಮತ್ತೊಬ್ಬರಿಗೆ ಕೇಡನ್ನು ಬಯಸದವರು ಪವಾಡ ಮಾಡಬಹುದು ಎನ್ನುವುದಕ್ಕೆ ಘತ್ತರಗಿ ಭಾಗ್ಯವಂತಿಯೇ ಸಾಕ್ಷಿ ಎಂದು ಮಾರ್ಮಿಕವಾಗಿ ನುಡಿದರು.
ಕಡಕೋಳದ ಪೂಜ್ಯರದ ರುದ್ರಮನಿ ಶಿವಾಚಾರ್ಯರು, ನಿಂಬರ್ಗಾದ ಪೂಜ್ಯರಾದ ಶಿವಲಿಂಗ ದೇವರು, ಯಳವಂತಗಿ ಗ್ರಾಮದ ಸಿದ್ದಾರೂಡ ಮಠದ ಪೂಜ್ಯರಾದ ಪೂರ್ಣಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗೊಬ್ಬುರದ ಶಿವಪುತ್ರಪ್ಪ ಸಾಧು ಮಹಾರಾಜ, ನಾಗೇಂದ್ರಪ್ಪ ಪಾಟೀಲ ಕುಮಸಿ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ಹತಗುಂದಿ ಭಾಗ್ಯವಂತಿ ದೇವಸ್ಥಾನದ ಆರಾಧಕರಾದ ಮಾತೆ ಶಿವಲೀಲಾ ತಾಯಿಯವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಸಂಗೀತ ಕಲಾವಿದರಾದ ಸಂಗಮೇಶ ನೀಲಾ, ಲಕ್ಷ್ಮಣ ಹೇರೂರ, ಆಂಜನೇಯ ಗುತ್ತೇದಾರ, ಮಲ್ಲಿನಾಥ ಭೂಪಾಲ ತೆಗನೂರ, ಮಡಿವಾಳ ನಂದೂರ, ಮಹಾಂತಯ್ಯ ಗೊಬ್ಬುರ ಸೇರಿದಂತೆ ಅನೇಕ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಭಾಗದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಯವರು ಆಧ್ಯಾತ್ಮಿಕದ ಹಾಸ್ಯ ಚಟಾಕಿಗಳೊಂದಿಗೆ ಗ್ರಾಮೀಣ ಭಾಗದ ಹಲವಾರು ಉದಾಹರಣೆಗಳನ್ನು ತೆಗೆದುಕೊಂಡು ನೆರೆದವರನ್ನು ಬಿದ್ದು ಬಿದ್ದು ನಗಿಸುವುದರೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಹತಗುಂದಿ, ಯೆಳವಂತಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಹಲವಾರು ಜನ ಭಾಗವಹಿಸಿದ್ದರು.