ಶಹಾಬಾದ: ಮಕ್ಕಳು ಯೋಗ, ಧ್ಯಾನ, ಪೌಸ್ಟಿಕ ಆಹಾರ, ಸ್ವಚ್ಛತೆ ಬಗ್ಗೆ ಗಮನ ಹರಿಸಿದರೆ ಯಾವುದೇ ರೋಗಗಳಿಗೆ ತುತ್ತಾಗದೆ ಆರೋಗ್ಯದಿಂದ ಇರಬಹುದು ಎಂದು ಆರ್‍ಬಿಎಸ್‍ಕೆ ವೈದ್ಯ ಡಾ. ಮಹ್ಮದ್ ಮತೀನ್ ಅಲಿ ಹೇಳಿದರು.
ಅವರು ನಗರದ ಗಂಗಮ್ಮ.ಎಸ್.ಮರಗೋಳ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಮಕ್ಕಳು ಆರೋಗ್ಯವನ್ನು ಪ್ರೀತಿಸಬೇಕು. ಪರಿಸರ ಸ್ವಚ್ಛವಾಗಿಡಬೇಕು ಹಾಗೂ ಶುದ್ಧವಾದ ನೀರು, ಆಹಾರ, ಗಾಳಿಯನ್ನು ಸೇವಿಸುತ್ತಾ ಬಂದರೆ ಸಧೃಡ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.
ಡಾ.ಶ್ವೇತಾ ನಿಂಬಾಲಕರ್ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವ ಹಾಗೇ ಎಲ್ಲಾ ಭಾಗ್ಯಗಳನ್ನು ಪಡೆಯಲು ಮೊದಲು ನಮ್ಮ ಆರೋಗ್ಯ ಚೆನ್ನಾಗಿರಬೇಕು.ಅದಕ್ಕಾಗಿ ಸ್ವಚ್ಛತೆ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು.ಹಸಿರು ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.ಹೊರಗಡೆಯಿಂದ ಮನೆಗೆ ಬಂದಾಗ ಕಾಲು ತೊಳೆಯುವುದು ಹಾಗೂ ಊಟದ ಸಮಯದಲ್ಲಿ ಕೈಕಾಲುಗಳನ್ನು ಸರಿಯಾದ ರೀತಿಯಲ್ಲಿ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.ಇದರಿಂದ ಆದಷ್ಟು ರೋಗವನ್ನು ತಡೆಗಟ್ಟಬಹುದಲ್ಲದೇ ಎಣ್ಣೆ ಪದಾರ್ಥ, ಕರಿದ ಪದಾರ್ಥ ಹಾಗೂ ಬೇಕರಿ ಪದಾರ್ಥಗಳಿಂದ ದೂರವಿರಬೇಕೆಂದು ತಿಳಿಸಿದರು.
ಮುಖ್ಯಗುರುಳಾದ ನಂದಾ, ದೈಹಿಕ ಶಿಕ್ಷಕಿ ಶಿವಗಂಗಾ, ಆರ್‍ಬಿಎಸ್‍ಕೆ ತಂಡದ ಶಿವಲೀಲಾ ಇತರರು ಇದ್ದರು.