ಕಲಬುರಗಿ: ಸಿಎಂ ಸಿದ್ದರಾಮಯ್ಯ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಇದು ನಿಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುತ್ತದೆ ಎಂದು ವೀರಶೈವ- ಲಿಂಗಾಯಿತ ಸ್ವಾಭಿಮಾನ ಬಳಗ ವಿಶ್ವನಾಥ ಪಾಟೀಲ್ ಗವನಳ್ಳಿ, ಎಂ.ಎಸ್. ಪಾಟೀಲ್ ನರಿಬೋಳ ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವೀರಶೈವ-ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಹಾಗೂ ಕಿರುಕುಳ ಹೆಚ್ಚಳವಾಗುತ್ತಿದ್ದು, ಇದು ನಿಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲೂ ವೀರಶೈವ ಲಿಂಗಾಯತ ಸಮಾಜದ ಅಧಿಕಾರಿಗಳ ಮೇಲೆ ಕಿರುಕುಳದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆಯಲ್ಲಿ ಲಿಂಗಾಯತ ನೌಕರರ ಮೇಲೆ ಹಲ್ಲೆ ನಡೆದು ತಿಂಗಳಾದರೂ ಇಲ್ಲಿವರೆಗೂ ಹಲ್ಲೆಕೋರರನ್ನು ಬಂಧಿಸಿಲ್ಲ. ಅದೇರೀತಿ ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಎಸಗಲಾಗಿದ್ದು, ಇಲ್ಲಿವರೆಗೂ ದುಷ್ಕರ್ಮಿಗಳನ್ನು ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಲಿಂಗಾಯತ ಸಮುದಾಯದಲ್ಲಿ ಬೆಂಬಲ ಹೆಚ್ಚಾಗಿದೆ. ಆದರೆ, ಇದೀಗ ಲಿಂಗಾಯತ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು ಅಕ್ಷಮ್ಯ. ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ಕಿರುಕುಳ ಮರುಕಳಿಸಿದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿಸೆಂಬರ್‍ನಲ್ಲಿ ದಾವಣಗೆರೆಯಲ್ಲಿ ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧಿವೇಶನಕ್ಕೆ ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಕೈ ಬಲಪಡಿಸಿ ಸಮಾಜದ ಒಳಿತಿಗಾಗಿ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ದ ಎಂಬುದಾಗಿ ತಿಳಿಯಪಡಿಸಲಾಗುವುದು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸ್ವಾಭಿಮಾನ ಬಳಗದ ಸಂಚಾಲಕರಾದ ಸೋಮಶೇಖರ ಟೆಂಗಳಿ, ರಾಜುಗೌಡ ನಾಗನಹಳ್ಳಿ, ಮಲ್ಲಿಕಾರ್ಜುನ ಸಾರವಾಡ, ಪ್ರಕಾಶ ಪಾಟೀಲ್ ಹೀರಾಪುರ, ಮಲ್ಲಿಕಾರ್ಜುನ ನಾಗನಹಳ್ಳಿ ಸೇರಿ ಇತರರಿದ್ದರು.