ಚಿತ್ತಾಪುರ; ತಾಲ್ಲೂಕಿನ ಲಾಡ್ಲಾಪುರ ಗ್ರಾಮದ ಸುಮಾರು ೨೫ಕ್ಕೂ ಅಧಿಕ ರೈತರಿಗೆ ಹಿಂಗಾರು ಹಂಗಾಮಿಗಾಗಿ ಉತ್ತಮ ತಳಿಯ ಶೇಂಗಾ ಬೀಜ ನೀಡುತ್ತೇವೆಂದು ನಂಬಿಸಿ ಮಿಲ್ ಮಾಲೀಕರು ಮೋಸ ಮಾಡಿದ್ದು ಮಿಲ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಕಲಿ ಶೇಂಗಾ ಬೀಜ ನೀಡಿ ಮೋಸ ಮಾಡಿದ ಮಿಲ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ ಭಗವಾನರೆಡ್ಡಿ, ಮಳೆಯ ತೀವ್ರ ಕೊರತೆಯಿಂದ ಬರಗಾಲದ ಬೇಗೆಗೆ ನರಳಿ ಹೋಗುತ್ತಿರುವ ರೈತ ಸಮುದಾಯಕ್ಕೆ ಕಳಪೆ ಬೀಜ, ಕಳಪೆ ರಾಸಾಯನಿಕ ಗೊಬ್ಬರ ಗಾಯದ ಮೇಲೆ ಬರೆ ಎಳೆಯುತ್ತಿದೆ. ರೈತರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡಲಾಗುತ್ತಿದೆ. ಲಾಡ್ಲಾಪುರ ಗ್ರಾಮದ ಸುಮಾರು 50 ರೈತರಿಗೆ 13200 ಪ್ರತಿ ಕ್ವಿಂ ಗೆ ಹಣ ಪಡೆದು ಕಳಪೆ ಬೀಜ ನೀಡಿದ್ದು ಅತ್ಯಂತ ಗಂಭೀರ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಬೇಕು. ನಕಲಿ ಬೀಜ ಪೂರೈಕೆ ಮಾಡುವುದು ಎಂದರೆ ಅವರ ಒಂದು ವರ್ಷದ ಇಡೀ ಆದಾಯ ಕಸಿದು ಕೊಂಡಂತಾಗಿದ್ದು ಸಾಲ ಮಾಡಿ ಬೀಜ ಖರೀದಿಸಿ ಬೀದಿಗೆ ಬಿದ್ದಿದ್ದಾರೆ. ನಕಲಿ ಬಿಲ್ ಜೊತೆಗೆ ನಕಲಿ ಶೇಂಗಾಬೀಜ ನೀಡಿ ಅನ್ಯಾಯ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ರಾಯಚೂರು ಪಟ್ಟಣದ ಮನ್ಸಲಾಪುರ ರಸ್ತೆ ಮಾರ್ಗದ ‘ಫತಾಹ ಇಂಡಸ್ಟ್ರೀ’ ಎಂಬ ಹೆಸರಿನ ಶೇಂಗಾ ಮಿಲ್ ನವರ ಮೇಲೆ ಕ್ರಿಮಿನಲ್ ಮೂಕದ್ದಮೆ ಹಾಕಿ ಜೈಲಿಗೆ ಅಟ್ಟಬೇಕು ಎಂದು ಅಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ ಮಾತನಾಡಿ – ಒಳ್ಳೆ ಇಳುವರಿ ಬೀಜ ಎಂದು ನಂಬಿಸಿ ನಕಲಿ ಕಳಪೆ ಮಟ್ಟದ ಬೀಜಗಳನ್ನು ನೀಡಿರುವ ಪೂರೈಕೆದಾರರ ಮಾತು ನಂಬಿ ಅವರು ಕೇಳಿದಷ್ಟು ಹಣ ನೀಡಿ ಬೀಜ ಖರೀದಿಸಿರುವ ರೈತರು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ನಂತರ ಅರಳದೇ ಮಣ್ಣಿನಲ್ಲಿ ಕೊಳೆತು ಹೋಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಕಳಪೆ ಶೇಂಗಾಬೀಜ ಪೂರೈಸಿದ ಮಿಲ್ ಮಾಲೀಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಿ ಅವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಇಂತಹ ನಕಲಿ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ನೀಡುತ್ತಿದ್ದು ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಅಂತವರನ್ನು ಜೈಲಿಗೆ ಅಟ್ಟಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಿತ್ತಾಪುರ ತಾಲ್ಲೂಕು ಉಪಾಧ್ಯಕ್ಷ ಗುಂಡಣ್ಣ ಎಂ ಕೆ, ರೈತ ಮುಖಂಡರಾದ ವಿಶ್ವನಾಥ, ಶ್ರೀದೇವಿ ಮಲ್ಕಂಡಿ, ರೈತರಾದ ಗೌಡಪ್ಪ ಕಚಾಪುರ, ಮರೆಪ್ಪ ಗಂಜಿ, ಶರಣಪ್ಪ ಗಂಜಿ, ನಾಗಪ್ಪ ನಾಯ್ಕೋಡಿ, ಅನಿಲಗೌಡ, ಕಚಾಪುರ, ಶಿವಕುಮಾರ ಊಟಿ ಸಹಿತ ಹಲವರಿದ್ದರು.