ಕಲಬುರಗಿ: ಜಿಲ್ಲೆಯ ಜೇವರ್ಗಿ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಜೆಬಿಸಿ., ಎಂಬಿಸಿ ಹಾಗೂ ಎಸ್ಬಿಸಿ, ಮಲ್ಲಾಬಾದ್ ಲಿಫ್ಟ್ 1,2,3, ಕಾಲುವೆಗಳ ವಾರಾಬಂಧಿ ದಿನಾಂಕದಲ್ಲಿ ಸೂಕ್ತ ಬದಲಾವಣೆ ಮಾಡುವ ಕುರಿತು ಬೆಂಗಳೂರಲ್ಲಿ ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಕೆಕೆಆರ್‌ಡಿಬಿ ಅದ್ಯಕ್ಷರು, ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಹಾಗೂ ಸಣ್ಣ ಕೈಗಾರಿಕೆ ಕಾತೆ ಸಚಿವರು ಹಾಗೂ ಶಹಾಪುರ ಸಾಸಕರಾದ ಶರಣಬಸಪ್ಪ ದರ್ಶನಾಪೂರ ಸುದೀರ್ಘವಾಗಿ ಚರ್ಚಿಸಿ ರೈತರ ಹೆಚ್ಚುವರಿ ನೀರಿನ ಬೇಡಿಕೆಯ ಬಗ್ಗೆ ಗಮನ ಸೆಳೆದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಈ ಪ್ರದೇಶದಲ್ಲಿ ಬಿಸಿಲಿ ತಾಪ ಹೆಚ್ಚಾಗಿ ಉಷ್ಣತೆಯಲ್ಲಿ ತೀವ3 ಹೆಚ್ಚಳ ಕಂಡು ಬಂದಿದೆ. ಇದಲ್ಲದೆ ಮಳೆಯ ಕೊರತೆಯಿಂದಾಗಿ ಭೂಮಿಯಲ್ಲಿನ ತೇವಾಂಶವೂ ಒಣಗಿ ಹೋಗಿದೆ. ಹೀಗಾಗಿ ಈಗಾಗಲೇ ಬೆಳೆದು ನಿಂತಿರುವ ತೊಗರಿ, ಹತ್ತಿ ಫಶಲು ಹೂ ಬಿಡುವ ಹಂತದಲ್ಲಿ ನೀರಿನ ಕೊರತೆ ಕಾಡುತ್ತಿದೆ.
ಈ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ನೀರಿನ ಬೇಡಿಕೆಯನ್ನು ಪರಿಹರಿಸಲು ಈಗಿರುವ ಕಾಲುವೆಗಳ ನೀರು ಬಿಡುವ ವಾರಾಬಂದಿಯನ್ನು ಹೊಸ ದಿನಾಂಕಗಳೊಂದಿಗೆ ಮರು ಹೊಂದಾಣಿಕೆ ಮಾಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಭೆಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹಾಗೂ ಸಚಿವರಾದ ಶರಣಬಸಪ್ಪ ದರ್ಶನಾಪುರ ಇಬ್ಬರೂ ಸೇರಿಕೊಂಡು ಸಿಎಂ ಸಿದ್ದರಾಮಯ್ಯನವರ ಗಮನ ಸೆಳೆದರು.
ಕೃಷ್ಣಾ ಅಚ್ಚು ಪ್ರದೇಶದಲ್ಲಿನ ಜೇವರ್ಗಿ, ಶಹಾಪುರ ಭಾಗದಲ್ಲಿರುವ ಮೇಲೆ ಹೇಳಿದ ಕಾಲುವೆಗಳ ಪ್ರದೇಶದಲ್ಲಿ ತಲೆ ದೋರಿರುವ ಈ ಸಮಸ್ಯೆಗೆ ತಾವು ಸೂಕ್ತ ಪರಿಹಾರ ನೀಡುವುದಾಗಿ ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ರಾಜಕೀಯ ಸಲಹೆಗಾರ ಗೋವಿಂದರಾಜು ಇದ್ದರು.