ಕಲಬುರಗಿ; ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

0
18

ಕಲಬುರಗಿ; ಕನ್ನಡ ರಾಜ್ಯೋತ್ಸವ ದಿನಾಚರಣೆಗೆ ಸೀಮಿತವಾಗದೇ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕನ್ನಡತನವೆಂಬುದು ಜನಜೀವನದಲ್ಲಿ ಸಮನ್ವಯವಾಗಬೇಕಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಬುಧವಾರ ಕಲಬುರಗಿ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚಣೆ ಸಲ್ಲಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ನಾಡು-ನುಡಿ ಕಟ್ಟುವುದರ ಜೊತೆಗೆ ಮುಂದಿನ ಪೀಳಿಗೆಗೆ ಸುಸ್ಥಿರ ನಾಡನ್ನು ಬಳುವಳಿಯಾಗಿ ನೀಡುವ ಮಹತ್ವದ ಜವಾಬ್ದಾರಿ ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಕವರ್ ಬಳಕೆ ತ್ಯಜಿಸಿ ಪರಿಸರ ಸಂರಕ್ಷಣೆಗೆ ಎಲ್ಲರು ಮುಂದಾಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಘೋಷ್ಯವಾಕ್ಯದೊಂದಿಗೆ “ಕರ್ನಾಟಕ ಸಂಭ್ರಮ-50” ಅಭಿಯಾನವನ್ನು ಇಡೀ ವರ್ಷ ಆಚರಿಸಲು ಸರ್ಕಾರ ನಿರ್ಧರಿಸಿದೆ. ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಲಬುರಗಿ ಜಿಲ್ಲೆಯಲ್ಲಿ ವಿನೂತನವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹಲವು ಶತಮಾನಗಳ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ಭಾರತದ ಚರಿತ್ರೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಸ್ಥಾನವಿದೆ. ಹಿಂದು, ಮುಸ್ಲೀಂ, ಜೈನ್ ಹಾಗೂ ಬೌದ್ಧ ಈ ನಾಲ್ಕೂ ಧರ್ಮಗಳು ಸಾಂಸ್ಕøತಿವಾಗಿ ಹಾಗೂ ಸಾಹಿತ್ಯಾತ್ಮಕವಾಗಿ ಬೆಸೆದುಕೊಂಡ ಕಲಬುರಗಿ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಈ ಪ್ರದೇಶ ಬಹುಕಾಲ ಹೈದರಾಬಾದ್ ನಿಜಾಮ್ ಆಡಳಿತದಲ್ಲಿದ್ದು ಕನ್ನಡ ಭಾಷೆಗೆ ಮಾನ್ಯತೆ ಇರಲಿಲ್ಲವಾದರೂ ಇಲ್ಲಿನ ಕನ್ನಡಿಗರಲ್ಲಿನ ಭಾಷಟಭಿಮಾನದಿಂದ ಇಂದು ಕಲಬುರಗಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಎಲ್ಲ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ ಎಂದರು.

ಸಮಾನತೆಯ ಹೊಸಹಾದಿಯಲ್ಲಿ ಸಾಗಿದ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಅನುಗುಣವಾದ ಶಾಂತಿ, ಸಮಾನತೆಯಲ್ಲಿ ನಂಬಿಕೆಯಿರಿಸಿಕೊಂಡು, ಸಹೋದರತೆಯ ಮನೋಭಾವದಿಂದ ಸೌಹಾರ್ದತೆಯ ಬದುಕನ್ನು ನಡೆಸುತ್ತಿರುವ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕ ರೂಪುಗೊಂಡಿದೆ ಎಂದು ಸಚಿವರು ನುಡಿದರು.

ಕ್ರಿ.ಪೂ 3ನೇ ಶತಮಾನದಲ್ಲೇ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಕನ್ನಡ ಪದ ಬಳಕೆಯಾಗಿತ್ತು. ಕದಂಬ ಸಾಮ್ರಾಜ್ಯದಲ್ಲಿ ಮೊದಲ ಬಾರಿ ರಾಜ್ಯ ಭಾಷೆಯಾಗಿ ಕನ್ನಡ ಬಳಕೆಯಾಗಿತ್ತು. ಕ್ರಿ.ಶ 8ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕದ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ “ಕವಿರಾಜಮಾರ್ಗ” ರಚಿಸಿ ಕನ್ನಡಕ್ಕೆ ಮೊದಲ ಗ್ರಂಥವನ್ನು ನೀಡಿದ್ದ ನೆಲ ಇದಾಗಿದೆ. 10ರಿಂದ-12ನೇ ಶತಮಾನದಲ್ಲಿ ಅನೇಕ ಬಸವಾದಿ ಶರಣದ ವಚನ ಸಾಹಿತ್ಯ ಚಳುವಳಿ ನಾಡಿನಲ್ಲಿ ಸಮಾನತೆಯ ಸಂದೇಶ ಪಸರಿಸಲು ಕಾರಣವಾಗಿ ನಾಡಿನ ಉಜ್ವಲ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸ್ವತಂತ್ರ ಭಾರತದಲ್ಲಿ ಮೈಸೂರು ರಾಜ್ಯದ ನಕ್ಷೆ ಸೃಷ್ಟಿಸಲು, ಕರ್ನಾಟಕ ಏಕೀಕರಣಕ್ಕೆ ದುಡಿದ ಎಲ್ಲಾ ಕನ್ನಡ ಮನಸ್ಸುಗಳಿಗೆ ನನ್ನ ಅನಂತಾನಂತ ಪ್ರಣಾಮಗಳನ್ನು ಅರ್ಪಿಸಲು ಇಚ್ಛಿಸುತ್ತೇನೆ ಎಂದರು.

ಹಿಂದಿನ ಸರ್ಕಾರದ ಕೆಟ್ಟ ಆಡಳಿತದಿಂದ ಮನನೊಂದಿದ್ದ ಕನ್ನಡಿಗರು ನಾಡಿನ ಶ್ರೇಯೋಭಿವೃದ್ಧಿಗೆ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕನ್ನಡಿಗರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಜನರ ಉನ್ನತಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ವ ಜನಾಂಗದ ಸರ್ವೋಯದಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ದಾರಿದೀಪವಾಗಿವೆ ಎಂದರು.

“ಶಕ್ತಿ” ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ 229.79 ಲಕ್ಷ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ. ಯೋಜನೆ ಪರಿಣಾಮ ಪ್ರಯಾಣಿಕರ ದಟ್ಟಣೆ ಹೆಚ್ಚಿದರಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 250 ಬಸ್ ಖರೀದಿಸಲಾಗುತ್ತಿದೆ. “ಅನ್ನ ಭಾಗ್ಯ” ಯೋಜನೆಯಡಿ ಜಿಲ್ಲೆಯಲ್ಲಿ 62,821 ಅಂತ್ಯೋದಯ ಪಡಿತರ ಚೀಟಿಯ 2,40,139 ಮಂದಿಗೆ ಮತ್ತು 5,07,672 ಆದ್ಯತಾ ಪಡಿತರ ಚೀಟಿಯ 17,21,890 ಮಂದಿಗೆ ಉಚಿತ 5 ಕೆ.ಜಿ. ಪಡಿತರ ನೀಡಲಾಗುತ್ತಿದೆ. ಇನ್ನುಳಿದಂತೆ 5 ಕೆ.ಜಿ. ಅಕ್ಕಿ ಬದಲಾಗಿ ಪ್ರತಿ ಸದಸ್ಯರಿಗೆ ತಲಾ 170 ರೂ. ಗಳಂತೆ ಕಲಬುರಗಿ ಜಿಲ್ಲೆಯಲ್ಲಿ ಅಕ್ಟೋಬರ್-2023 ಮಾಹೆಗೆ ಅರ್ಹ 4,67,542 ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 27.65 ಕೋಟಿ ರೂ. ಜಮೆ ಮಾಡಲಾಗಿದೆ ಎಂದರು.

“ಗೃಹ ಜ್ಯೋತಿ” ಯೋಜನೆಯಡಿ ಜಿಲ್ಲೆಯಲ್ಲಿ 5,18,056 ಗ್ರಾಹಕರು ಉಚಿತ ವಿದ್ಯುತ್ ಲಾಭ ಪಡೆಯುತ್ತಿದ್ದಾರೆ. ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ಜಿಲ್ಲೆಯಲ್ಲಿ 5,89,105 ಮಹಿಳೆಯರನ್ನು ಗುರುತಿಸಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ 168.39 ಕೋಟಿ ರೂ.ಗಳನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಲು ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿ ʼಅಕ್ಷರ ಆವಿಷ್ಕಾರʼ ಯೋಜನೆ ರೂಪಿಸಿದ್ದು, ಈ ಭಾಗದಲ್ಲಿ ಖಾಲಿ ಉಳಿದಿರುವ 2618 ಪ್ರಾಥಮಿಕ ಶಾಲೆ, ಮತ್ತು ಪ್ರೌಢ ಶಾಲೆ ಶಿಕ್ಷಕರ ಹುದ್ದೆ ಭರ್ತಿಗೆ 18.34 ಕೋಟಿ ರೂ. ಅನುದಾನ ನೀಡಿದೆ. ಇದರಿಂದ ಮುಂದಿನ ದಿನದಲ್ಲಿ ಶಿಕ್ಷಣ ಸುಧಾರಣೆ ಆಶಾಭಾವನೆ ಹೊಂದಿದ್ದೇವೆ ಎಂದರು.

ಪ್ರಸಕ್ತ 2023ರ ಜೂನ್ ಮಾಹೆಯಲ್ಲಿ ಶೇ.43ರಷ್ಟು ಮಳೆ ಕೊರತೆ ಮತ್ತು ಜುಲೈ ತಿಂಗಳಿನಲ್ಲಿ ಶೇ.93ರಷ್ಟು ಹೆಚ್ಚಿನ ಮಳೆ ಕಾರಣ 10,531 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, 14.21 ಕೋಟಿ ರೂ. ಪರಿಹಾರ ಧನವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ವರುಣನ ಅವಕೃಪೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 11 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬರ ನಿರ್ವಹಣೆ ಕಾರ್ಯಗಳು ಪ್ರಗತಿಯಲ್ಲಿವೆ. ಬರಗಾಲದಿಂದ ಜಿಲ್ಲೆಯಲ್ಲಿ 2.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಹಾನಿ ಮೊತ್ತ 1,755.23 ಕೋಟಿ ರೂ. ಎಂದು ಅಂದಾಜಿಸಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ 257.11 ಕೋಟಿ ರೂ. ಇನ್ಪುಟ್ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.

ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ʼಅರಿವು ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ರಾಜ್ಯದಾದ್ಯಂತ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ “ಕೂಸಿನ ಮನೆ” ಶಿಶುಪಾಲನಾ ಕೇಂದ್ರಗಳು ತೆರೆಯಲಾಗುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ 209 ಕೇಂದ್ರ ಸ್ಥಾಪನೆಯ ಕಾರ್ಯ ವಿವಿಧ ಹಂತಗಳಲ್ಲಿದೆ. ಗ್ರಾಮೀಣ ಭಾಗದ ಮಹಿಳೆಯರು ಈ ಕೇಂದ್ರಗಳಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೂಲಿ ಕೆಲಸಕ್ಕೆ ಹೋಗಬಹುದಾಗಿದ್ದು, ಮಹಿಳೆಯರ ಆರ್ಥಿಕ ಅಭಿವೃದ್ಧಿ ನಿರೀಕ್ಷಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 108 ಗ್ರಾಮಗಳನ್ನು ಗುರುತಿಸಲಾಗಿದೆ. ನರೇಗಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 2023-24ನೇ ಸಾಲಿಗೆ 62 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಇದ್ದು, 43.28 ಲಕ್ಷ ಮಾನವ ದಿನ ಸೃಜಿಸಿ 2.70 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ ಎಂದರು.

ಸಿ.ಎಸ್.ಆರ್ ನಿಧಿಯಡಿ 5 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ, ಎಚ್.ಐ.ವಿ., ಸ್ಯಾಚುರೇಚನ್, ಇ.ಸಿ.ಜಿ, ಡೆಂಗ್ಯೂ, ಮಲೇರಿಯಾ ಮುಂತಾದ 50ಕ್ಕೂ ಹೆಚ್ಚು ರಕ್ತ ತಪಾಸಣೆಗಳ ವರದಿಯನ್ನು 10 ನಿಮಿಷದಲ್ಲಿಯೇ ಒದಗಿಸುವ ʼಹೆಲ್ತ್ ಎ.ಟಿ.ಎಂʼ ಜಿಲ್ಲೆಯ 25 ಕಡೆ ಪ್ರಾಯೋಗಿಕವಾಗಿ ಸ್ಥಾಪನೆಗೊಂಡಿದ್ದು, ಕಳೆದ 2 ತಿಂಗಳಲ್ಲಿ 13,516 ಜನರು ಉಚಿತ ಆರೋಗ್ಯ ತಪಾಸಣೆಗೆ ಒಳಪಡುವ ಮೂಲಕ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಪುಣ್ಯ,ಪ್ರವಾಸಿ ಕ್ಷೇತ್ರ ಅಭಿವೃದ್ಧಿ: ಜಿಲ್ಲೆಯ ಶ್ರೀ ದತ್ತಾತ್ರೇಯನ ಪುಣ್ಯಕ್ಷೇತ್ರ ಗಾಣಗಾಪೂರ, ಬೌದ್ಧ ಧರ್ಮದ ನೆಲೆಯಾಗಿರುವ ಸನ್ನತಿ, ಕಲಬುರಗಿ ಗುರುದ್ವಾರ, ರಾಷ್ಟ್ರಕೂಟರ ಆಳ್ವಿಕೆಯ ಮಳಖೇಡ್ ಕೋಟೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಖಾಲಿ ಹುದ್ದೆ ಭರ್ತಿಗೆ ಕ್ರಮ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯು ಈಗಾಗಲೆ ಸಭೆಗಳನ್ನು ನಡೆಸಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ, ಮುಂಬಡ್ತಿ ಮೂಲಕ ಭರ್ತಿ ಮಾಡುವಂತೆ ಎಲ್ಲಾ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಕಲಾ ತಂಡಗಳ ಭವ್ಯ ಮೆರಣಿಗೆ: ಸಚಿವ ಪ್ರಿಯಾಂಕ್ ಖರ್ಗೆ ಅವರು ಡೊಳ್ಳು ಬಾರಿಸುವ ಮೂಲಕ ಕಲಾ ತಂಡಗಳ ಭವ್ಯ ಮೆರಣಿಗೆಗೆ ಚಾಲನೆ ನೀಡಿದರು. ಬೀಸು ಕಂಸಾಳೆ, ಡೊಳ್ಳು ಕುಣಿತ, ಹೆಜ್ಜೆ ಮೇಳದೊಂದಿಗೆ ಕಲಾವಿದರು ಹಾಡುತ್ತಾ, ಕುಣಿಯುತ್ತ ಹೆಜ್ಜೆ ಹಾಕಿದರು. ನೂರಾರು ಸಂಖ್ಯೆಯಲ್ಲಿ ಮಕ್ಕಳು ಕೈಯಲ್ಲಿ ಕನ್ನಡ ಧ್ವಜ, ಭಿತ್ತಿಪತ್ರ ಹಿಡಿದು ಕನ್ನಡಾಂಬೆಗೆ ಜೈಕಾರ ಹಾಕಿದರು. ನಗರೇಶ್ವರ ಶಾಲೆಯಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ವರೆಗೆ ನಡೆದು ಮೆರವಣಿಗೆ ಸಂಪನ್ನಗೊಂಡಿತ್ತು. ಇನ್ನು ಕೆ.ಕೆ.ಆರ್.ಟಿ.ಸಿ., ಜೆಸ್ಕಾಂ, ತೋಟಗಾರಿಕೆ, ಕೃಷಿ, ಆರೋಗ್ಯ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ ಇಲಾಖೆಯಿಂದ ಆಯಾ ಇಲಾಖೆಯ ಯೋಜನೆ, ಕನ್ನಡ ನಾಡು-ನುಡಿ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರ ಮೆರವಣಿಗೆ ಜನಮನ ಸೆಳೆದವು.

ಮರುಬಳಕೆ ಬ್ಯಾಗ್ ವಿತರಣೆ: ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಕಲಬುರಗಿ ಅಭಿಯಾನ ಅಂಗವಾಗಿ ಮರುಬಳಕೆಯ ಬ್ಯಾಗ್‍ಗಳನ್ನು ಮಕ್ಕಳಿಗೆ ವಿತರಣೆ ಮಾಡುವ ಮೂಲಕ ಸಚಿವ ಪ್ರಿಯಾಂಕ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕನ್ನಡದಿಂದ ಕರ್ನಾಟಕ ರೂಪುಗೊಂಡ ಬಗೆಯನ್ನೂ ಸಾರಿ ಹೇಳುವಂತೆ ವಿಶಿಷ್ಟ ರೀತಿಯಲ್ಲಿ ಈ ಬ್ಯಾಗ್ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ನಾಡಿನ ಇತಿಹಾಸವನ್ನು ಮುನ್ನೆಲೆಗೆ ತರುವ ಹಾಗೂ ಸುಸ್ಥಿರ ಹಾಗೂ ಸ್ವಚ್ಛ ಕಲಬುರಗಿಗೆ ರಹದಾರಿ ಹಾಕುವ ಎರಡೂ ಉದ್ದೇಶಗಳನ್ನು ಹೊಂದಲಾಗಿದೆ.

ಕನ್ನಡಾಂಬೆಗೆ ಗೀತ ಗಾಯನದ ನಮನ: ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ‌ ನಮ್ಮ ಚೆಲುವ ಕನ್ನಡ ನಾಡು”, ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು”, ದ.ರಾ.ಬೇಂದ್ರೆ ಅವರ “ಒಂದೇ ಒಂದೇ ಕರ್ನಾಟಕವೊಂದೇ”, ಸಿದ್ದಯ್ಯ ಪುರಾಣಿಕ ಅವರ “ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ” ಹಾಗೂ ಚನ್ನವೀರ ಕಣವಿ ಅವರ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಹಾಡುಗಳನ್ನು ಸಂಗೀತ ಶಿಕ್ಷಕರು, ಕಲಾವಿದರು ಹಾಡುವ ಮೂಲಕ ಕನ್ನಡಾಂಬೆಗೆ ಗೀತ ಗಾಯನದ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ, ಚಂದ್ರಶೇಖರ ಪಾಟೀಲ ಗುಮನಾಬಾದ, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಮಹನಗರ ಪಾಲಿಕೆ ಮೇಯರ್ ವಿಶಾಲ ಎಸ್. ಧರ್ಗಿ, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಆಕಾಶ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here