ಕಲಬುರಗಿ: ಕನ್ನಡ ಭಾಷೆಯಲ್ಲಿನ ವೈವಿದ್ಯತೆ ಮತ್ತು ಬೆಳವಣಿಗೆಗೆ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರವಿದೆ. ಅವರು ರಚಿಸಿದ ಸಾಹಿತ್ಯ ಮತ್ತು ಗೀತೆಗಳ ಮೂಲಕ ಕನ್ನಡ ಬಾಷೆಯಲ್ಲಿನ ಭಾವನೆಗಳ ಜೊತೆಗೆ ಕನ್ನಡಿಗರ ಮನಸುಗಳು ಬೆರೆತಿರುವ ಕಾರಣದಿಂದ ಸ್ವಾಭಿಮಾನಿ ಕನ್ನಡಿಗರಾದ ನಾವುಗಳು ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತರಾಗಿದ್ದೇವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮಂಭಾಗದಲ್ಲಿ ಕರ್ನಾಟಕ ಸಂಭ್ರಮ-೫೦ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಡಿಯಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ತಾಯಿ ಶ್ರೀ. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಮೈಸೂರು ರಾಜ್ಯವು ಕರ್ನಾಟಕವೆಂದು ಮರುನಾಮಕರಣಗೊಂಡು ನ. 1, 2023ಕ್ಕೆ ಐವತ್ತು ವರ್ಷಗಳು ಪೂರ್ಣಗೊಂಡಿವೆ. ಅಂದಿನಿಂದ ರಾಜ್ಯದಲ್ಲಿ ಕನ್ನಡ ಭಾಷೆ ಮೇರು ಭಾಷೆಯಾಗಿ ಬೆಳೆದಿದೆ ಎಂದರು.
ರಾಜ್ಯದಲ್ಲಿ ಕನ್ನಡ ಬಾಷೆ, ನೆಲ, ಜಲ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ಪರಿಸರ ಸಂಪನ್ಮೂಲಗಳು ಎಲ್ಲೆಡೆ ಸಮೃದ್ಧಿಯಾಗಿ ಹರಡಿಕೊಂಡಿದೆ. ಶರಣರು, ಕವಿಗಳು, ಸಾಹಿತಿಗಳು, ಕಲಾವಿದರು ಸೇರಿದಂತೆ ಕನ್ನಡ ಪ್ರೇಮಿಗಳು ಮತ್ತು ಹೋರಾಟಗಾರರ ಪರಿಶ್ರಮ ಮತ್ತು ಸಾಧನೆಯನ್ನು ಕನ್ನಡಿಗರಾದ ನಾವುಗಳು ಸ್ಮರಿಸಬೇಕಿದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸುಂದರ ಪರಿಸರದಲ್ಲಿ ಸಾಧು-ಸಂತರು, ದಾಸರು-ಶಿವಶರಣರು, ಕವಿ-ಸಾಹಿತಿಗಳ ಕನ್ನಡ ಸೇವೆಯಿಂದ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿಯಿದೆ. ಇಂತಹ ಸಮೃದ್ಧ ನಾಡಿನಲ್ಲಿ ಜನಿಸಿರುವುದು ಕನ್ನಡಿಗರ ಅದೃಷ್ಟವಾಗಿದೆ. ನ 1 ರಂದು ನಾವೆಲ್ಲರೂ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡಾಂಭೆಗೆ ಗೌರವಾಪೂರ್ವಕವಾಗಿ ಗೀತೆ ಗಾಯನದ ಮೂಲಕ ನುಡಿನಮನ ಸಲ್ಲಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಗೀತೆಗಳನ್ನು ರಚಿಸಿ ಕನ್ನಡ ಕಂಪನ್ನು ಎಲ್ಲಡೆ ಪಸರಿಸಿರುವ ಕವಿ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ರಚಿತ ‘ಎಲ್ಲಾದರು ಇರು ಎಂತಾದರು ಇರು’, ದ.ರಾ. ಬೇಂದ್ರೆಯವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ ಅವರ ‘ಹೊತ್ತಿತೋ ಹೊತ್ತಿತೋ ಕನ್ನಡದ ದೀಪ’, ಚನ್ನವೀರ ಕಣವಿಯವರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’, ಗೀತೆಗಳನ್ನು ಸಂಗೀತ ವಿಭಾಗದ ಡಾ. ಲಕ್ಷ್ಮಿಶಂಕರ ಜೋಷಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ವೇದಿಕೆಯಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ ಲಕ್ಷ್ಮಣ ಉಪಸ್ಥಿತರಿದ್ದರು. ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯದ ಡೀನ್ ಪ್ರೊ. ಬಿ. ವಿಜಯ, ಪರೀಕ್ಷಾ ವಿಬಾಗದ ವಿಶೇಷಾಧಿಕಾರಿ ಪ್ರೊ. ಬಸವರಾಜ ಸಣ್ಣಕ್ಕಿ, ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ. ಹೆಚ್.ಟಿ. ಪೋತೆ, ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳ ಅಂಬೇಕರ್, ಐಕ್ಯೂಎಸಿ ನಿರ್ದೇಶಕ ಪ್ರೊ. ಕೆರೂರು, ಗಣಿತ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಎನ್ ಗಾಯಕವಾಡ, ಪ್ರೊ. ವಿ. ಎಂ. ಜಾಲಿ, ಪ್ರೊ. ಟಿ. ಶಂಕ್ರಪ್ಪ, ಡಾ. ನಿಂಗಣ್ಣ ಸೇರಿದಂತೆ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಹಾಗೂ ವಿಶ್ವವಿದ್ಯಾಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಕೆ. ಲಿಂಗಪ್ಪ ಸ್ವಾಗತಿಸಿ ನಿರ್ವಹಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಎನ್. ಜಿ. ಕಣ್ಣೂರು ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.