ರಾಯಚೂರು: ಕಲಿಕಾ ಭಾಗ್ಯ ಯೋಜನೆಯಡಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನ ಮಾಡಿದ್ದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಟಿಯುಸಿಐ ತೀವ್ರವಾಗಿ ಖಂಡಿಸಿದೆ.
ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ 1ನೇ ತರಗತಿಯ ಮಕ್ಕಳಿಗೆ 5 ಸಾವಿರ ರೂಪಾಯಿಯಿಂದ 60 ಸಾವಿರದ ವರೆಗೆ ಆಯಾ ತರಗತಿಯ ಅನುಗುಣವಾಗಿ ಪಿಹೆಚ್ ಡಿ, ಎಂ ಫೀಲ್ ವರೆಗೆ ಸಹಾಯಧನ ನೀಡಲಾಗುತ್ತಿತ್ತು. ಆದರೆ ಕಾರ್ಮಿಕ ಇಲಾಖೆಯು ಅಕ್ಟೋಬರ್ 30ರಂದು ಹೊರಡಿಸಿದ ಆದೇಶದಂತೆ 1,100ರಿಂದ 11 ಸಾವಿರಕ್ಕೆ ಇಳಿಕೆ ಮಾಡಿದ್ದು ಸರಿಯಲ್ಲ. ಇದು ಕಾರ್ಮಿಕರ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಆರ್ಥಿಕ ಹೊರೆಯಾಗುವುದು ಹಾಗೂ ಉನ್ನತ ಶಿಕ್ಷಣದಿಂದ ವಂಚಿತಗೊಳಿಸುವ ಹುನ್ನಾರವಾಗಿದೆ ಎಂದು ಟಿಯುಸಿಐ ಆರೋಪಿಸಿದೆ.
ಕಟ್ಟಡ, ಕಾರ್ಮಿಕ ಇಲಾಖೆಗೆ ಸಂಗ್ರಹವಾಗುವ ಸೆಸ್ ಹಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪ್ರಸ್ತುತ ಮೂಲಗಳ ಪ್ರಕಾರ 10,263ಕೋಟಿಗೂ ಹೆಚ್ಚು ಮೊತ್ತ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ಇದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇದರಿಂದ ಅನೇಕ ಸೌಲಭ್ಯ ನೀಡುತ್ತಿದ್ದೂ 6,700 ಕೋಟಿಗೂ ಹೆಚ್ಚು ಮೊತ್ತ ಉಳಿಯಲಿದೆ. ಇಷ್ಟಾದರೂ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನದ ಮೊತ್ತ ಕಡಿಮೆ ಮಾಡಿರುವುದು ಯಾಕೆ ಎಂದು ರಾಜ್ಯ ಸರ್ಕಾರ ತಿಳಿಸಬೇಕಿದೆ.
ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಬದ್ಧ ಎಂದು ತಮ್ಮ ಭಾಷಣಗಳಲ್ಲಿ ಹೇಳುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಕಡಿತಗೊಳಿಸುವಂತಹ ನಿರ್ಧಾರ ಕೈಗೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಜಿ. ಅಮರೇಶ್, ಆರ್ ಹುಚ್ ರೆಡ್ಡಿ , ಅಜೀಜ್ ಜಾಗೀರ್ದಾರ್, ಸೈಯದ್ ಅಬ್ಬಾಸ್ ಅಲಿ, ನಿರಂಜನ್, ಶಿವಯ್ಯ ,ಲಕ್ಷ್ಮಣ, ಆನಂದ, ನಬೀಸಾಬ್ ಇದ್ದರು.