ರಾಜುಗೌಡ, ರೇವೂರ್, ಯತ್ನಾಳ್ ಸಂಪುಟಕ್ಕೆ ಸೇರಿಸದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ ಬೆದರಿಕೆ

0
70

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸುರಪುರ ಶಾಸಕ ರಾಜುಗೌಡ (ನರಸಿಂಹ ನಾಯಕ್), ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಹಾಗೂ ವಿಜಯಪೂರ್ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಹೋದಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹೋರಾಟವನ್ನು ಆರಂಭಿಸಬೇಕಾಗುತ್ತದೆ ಎಂದು ಕರ್ನಾಟಕ ನವ ನಿರ್ಮಾಣ ವೇದಿಕೆಯ ಸುರಪುರ ಘಟಕದ ಅಧ್ಯಕ್ಷ ಶಿವರಾಜ್ ಬಿಲಕೇರಿ ಅವರು ಇಲ್ಲಿ ಎಚ್ಚರಿಸಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈದ್ರಾಬಾದ್ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್, ಜೆಡಿ(ಎಸ್) ಹಾಗೂ ಬಿಜೆಪಿ ಮೂರು ಪಕ್ಷಗಳು ಇಲ್ಲಿಯವರೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಕಡೆಗಣಿಸುತ್ತಿರುವುದರಿಂದ ಈ ಭಾಗ ಹಿಂದುಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಬಿಜೆಪಿ ಸರ್ಕಾರದಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ಕೇವಲ ಒಂದು ಸಚಿವ ಸ್ಥಾನ ಕೊಡಲಾಗಿದೆ. ಉಳಿದಂತೆ ಪ್ರಭಾವಿ ಶಾಸಕ ಹಾಗೂ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಒಮ್ಮೆ ಸಚಿವರಾಗಿದ್ದ ಸುರಪುರ ಶಾಸಕ ರಾಜುಗೌಡ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು. ಅದೇ ರೀತಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರನ್ನೂ ಸಹ ಕಡೆಗಣಿಸಲಾಗಿದೆ. ವಿಜಯಪೂರ್ ನಗರ ಕ್ಷೇತ್ರದ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಪ್ರಭಾವಿ ಶಾಸಕರನ್ನೂ ಸಹ ಸಂಪುಟದಿಂದ ಹೊರಗಿಡಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಭಾವಿ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು. ಅದನ್ನು ಬಿಟ್ಟು ತಮಗೆ ಬೇಕಾದ ಹಾಗೆ ಸಚಿವರನ್ನಾಗಿ ಮಾಡಿದರೆ ಈ ಭಾಗ ಎಂದಿಗೂ ಅಭಿವೃದ್ಧಿ ಆಗದು. ಆದ್ದರಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜುಗೌಡ, ದತ್ತಾತ್ರೇಯ್ ಪಾಟೀಲ್ ರೇವೂರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸೇರಿಸಿಕೊಳ್ಳಬೇಕು ಎಂದು ಅವರು ಗಡುವು ನೀಡಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಪಾಟೀಲ್, ಆಕಾಶ್ ಕಟ್ಟಿಮನಿ, ಆನಂದ್ ಪಾಟೀಲ್, ವಿಶ್ವನಾಥರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here