ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ನಮ್ಮ ಗುರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

0
9

ಬೆಂಗಳೂರು; ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕವನ್ನಾಗಿಸುವುದು ನಮ್ಮ ಸರ್ಕಾರದ ಗುರಿಯಾಗಿದ್ದು, ವೈದ್ಯರು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ“ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ, ಅನೀಮಿಯಾ ವಿದ್ಯಾರ್ಥಿಗಳಿಗೆ ಸಾಂಕೇತಿಕಾಗಿ ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಕಾರ್ಯಕ್ರಮಕ್ಕೆ 185.74 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

Contact Your\'s Advertisement; 9902492681

ಮಕ್ಕಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕ ಪುರುಷರು-ಮಹಿಳೆಯರು ಹಾಗೂ ಹಿರಿಯರು ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ನುರಿತ ತಂಡದ ವೈದ್ಯರಿಂದ ರಕ್ತ ಪರೀಕ್ಷೆ ಮಾಡಿ, ಅನೀಮಿಯಾದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ನಮಗೆ ಅನೇಕ ಕಾರಣಗಳಿಂದ ಆರೋಗ್ಯ ಹದಗೆಟ್ಟು ಕೆಲವು ರೋಗಗಳಿಗೆ ತುತ್ತಾಗುತ್ತೇವೆ. ಕೆಲವು ರೋಗಳನ್ನು ಪ್ರಯತ್ನದಿಂದ ತಡೆಗಟ್ಟಲು ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಪೌಷ್ಠಿಕ ಆಹಾರ ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸಮಾಜದಲ್ಲಿ ಅನಕ್ಷರತೆ ಮತ್ತು ಬಡತನವಿದ್ದು, ಬಡತನ ಇರುವವರಿಗೆ ಪೌಷ್ಠಿಕ ಆಹಾರ ಸಿಗುವುದು ಕಷ್ಟ. ಆರ್ಥಿಕವಾಗಿ ಸಬಲರಾದರೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸಾಧ್ಯವಾಗುತ್ತದೆ. ಇದನ್ನು ಅರಿತ ಸರ್ಕಾರ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಚುಕ್ಕಿ ನೀಡಲಾಗುವುದು ಎಂದರು.

ಅನಕ್ಷರತೆಯ ಕಾರಣದಿಂದಲೂ ಸಹ ಬಹಳಷ್ಟು ಪೌಷ್ಠಿಕ ಆಹಾರ ಪಡೆಯಲು ಕಷ್ಟವಾಗುತ್ತಿದೆ. ಉತ್ತರ ಕರ್ನಾಟಕದವರು ಜೋಳದ ರೊಟ್ಟಿ ಕಾರ, ನಮ್ಮಲ್ಲಿ ಮುದ್ದೆ ಸಾರು ತಿಂದು ಹಾಗೆ ಇರುತ್ತಾರೆ. ಇದರಿಂದ ಅವರಿಗೆ ಪೌಷ್ಠಿಕ ಆಹಾರ ಎಲ್ಲಿ ಸಿಗುತ್ತದೆ. ಇದಕ್ಕೆ ಜ್ಞಾನದ ಕೊರತೆಯು ಕಾರಣವಾಗಿದೆ. ರಕ್ತಹೀನತೆ ಇದ್ದರೆ ಮಕ್ಕಳಿಗೆ ಓದಲು ಸಹ ಸಾಧ್ಯವಾಗುವುದಿಲ್ಲ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೊದಲ ಹಂತದಲ್ಲಿ ಶಾಲಾ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹಾಲುಣಿಸುವ ತಾಯಂದಿರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ರಕ್ತ ಹೀನತೆಯನ್ನು ತಪಾಸಣೆ ನಡೆಸಿ, ನಂತರ ಉಳಿದವರಿಗೆ ತಪಾಸಣೆ ನಡೆಸಲಾಗುವುದು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ದಿನೇಶ್ ಗುಂಡೂರಾವ್ ಅವರು, ಜನಸಾಮಾನ್ಯರ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಲು “ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ” ಎಂಬ ಮಹತ್ವಕಾಂಕ್ಷೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅನೀಮಿಯಾ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲದೆ, ಅನೀಮಿಯಾ ವ್ಯಾಪಕವಾಗಿರುವುದರಿಂದ ಅದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ. ನಮ್ಮ ರಕ್ತದಲ್ಲಿ ಹಿಮೊಗ್ಲೋಬಿನ್ ಕಡಿಮೆಯಾದರೆ, ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವುದರಿಂದ ಅನೀಮಿಯಾ ಮುಕ್ತ ರಾಜ್ಯವನ್ನಾಗಿಸಲು ಪಣತೊಡಲಾಗಿದೆ ಎಂದರು.

ರಾಜ್ಯದಲ್ಲಿ 6 ತಿಂಗಳಿಂದ 5 ವರ್ಷದೊಳಗಿನ ಮಕ್ಕಳನ್ನು ಸರ್ವೆ ಮಾಡಲಾಗಿ ಶೇ.65 ರಷ್ಟು ಮಕ್ಕಳು, 15 ರಿಂದ 49 ವರ್ಷದೊಳಗಿನ ಶೇ 47.8 ರಷ್ಟು ಮಹಿಳೆಯರು ಅನೀಮಿಯಾದಿಂದ ಬಳಲುತ್ತಿರುವುದು ಕಂಡು ಬಂದಿದೆ. ಪ್ರಥಮ ಹಂತವಾಗಿ ಡಿಸೆಂಬರ್ ತಿಂಗಳಿನಲ್ಲಿ ಶಾಲಾ ಮಕ್ಕಳನ್ನು, ಫೆಬ್ರವರಿಯೊಳಗೆ 5ರಿಂದ 9 ಹಾಗೂ 10 ರಿಂದ 19 ವರ್ಷದೊಳಗೆ ಸುಮಾರು 1 ಕೋಟಿ 70 ಲಕ್ಷ ಮಕ್ಕಳಿಗೆ ಹಾಗೂ ಏಪ್ರಿಲ್ ಮಾಹೆಯೊಳಗೆ 5 ವರ್ಷದೊಳಗಿನ ಸುಮಾರು 52 ಲಕ್ಷ ಮಕ್ಕಳನ್ನು, ತಪಾಸಣೆ ನಡೆಸಲಾಗುವುದು. ಇಂದು ಸಾಂಕೇತಿಕವಾಗಿ 1,062 ವಿದ್ಯಾರ್ಥಿಗಳಿಗೆ ರಕ್ತ ಪರೀಕ್ಷೆ ಮಾಡಲಾಗಿ, ಇವರಲ್ಲಿ 569 ವಿದ್ಯಾರ್ಥಿಗಳು ರಕ್ತಹೀನತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ರಾಜ್ಯದಲ್ಲಿನ ಜನತೆಗಾಗಿ ಹಮ್ಮಿಕೊಂಡಿರುವ ಮುಖ್ಯಮಂತ್ರಿಗಳ ಈ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯು ಜೊತೆಯಾಗಿ ಕೆಲಸ ವಿರ್ವಹಿಸುತ್ತದೆ. ಮುಖ್ಯಮಂತ್ರಿಗಳ ಆಶಯವಾಗಿರುವ ಸಂವೃದ್ಧಿ ಕರ್ನಾಟಕವನ್ನು ಆರೋಗ್ಯವಂತ ಕರ್ನಾಟಕವನ್ನಾಗಿಸುವುದು ನಮ್ಮ ಧ್ಯೇಯವಾಬೇಕು. ಸಿರಿಧಾನ್ಯಗಳಿಂದ ಮತ್ತು ತರಕಾರಿಗಳಿಂದ ಉತ್ತಮ ರೀತಿಯ ಪೌಷ್ಠಿಕ ಆಹಾರ ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಬಿ.ಎಸ್. ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here