ಬೆಂಗಳೂರು; ದೇಶದ ಭವಿಷ್ಯ ರೂಪಿಸಲು ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸುವುದರ ಜೊತೆಗೆ ಸದೃಢವಾಗಿ, ಬಲಿಷ್ಟರನ್ನಾಗಿ ಬೆಳಸಬೇಕು. ಇದು ಎಲ್ಲಾ ಪಾಲಕರ ಹಾಗೂ ಶಿಕ್ಷಕರ ಜವಬ್ದಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು ತಿಳಿಸಿದರು.
ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜವಾಹರ ಬಾಲಭವನದಲ್ಲಿ “ಮಕ್ಕಳ ದಿನಾಚರಣೆ – 2023” ಅಂಗವಾಗಿ ಹಮ್ಮಿಕೊಳ್ಳಲಾದ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಪ್ರಶಸ್ತಿ ಪಡೆದ ಎಲ್ಲಾ ಮಕ್ಕಳಿಗೆ, ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಚಿವರು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳು ಸಕಾಲದಲ್ಲಿ ಎಲ್ಲರಿಗೂ ತಲಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ತಮ್ಮ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ, ಸಾಹಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಅಡೆ – ತಡೆ ಬಂದರೂ ಎದುರಿಸುವಂತಹ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಭವಿಷ್ಯಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಎಲ್ಲರೂ ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದು ನಮ್ಮ ದೇಶವು ಇಡೀ ವಿಶ್ವದಲ್ಲಿ ಮಂಚೂಣಿಯಲ್ಲಿ ಸಾಗುತ್ತಿದೆ. ಕೆಲವೇ ವರ್ಷಗಳಲ್ಲಿ ವಿಶ್ವ ಗುರು ಆಗುವುದು ನಿಶ್ಚಿತ. ಮಕ್ಕಳೇ ದೇಶದ ಭವಿಷ್ಯ. ಮಕ್ಕಳು ಓದುವುದರ ಜೊತೆಗೆ ಶಿಸ್ತು ಪಾಲನೆ, ಗುರು ಹಿರಿಯಲ್ಲಿ ಭಕ್ತಿ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು. ಬೇರೆಯವರಿಗೆ ಉಪದೇಶ ಹೇಳುವುದು ಸುಲಭ. ಆದರೆ ಅದನ್ನು ನಾವು ಪಾಲಿಸಬೇಕಾದಲ್ಲಿ ಎಷ್ಟು ಕಷ್ಟ ಎಂಬುದು ತಿಳಿಯುತ್ತದೆ. ಆದ್ದರಿಂದ ನಿರ್ದಿಷ್ಟ ಗುರಿ ಮತ್ತು ಚಿಂತನೆಗಳನ್ನು ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಧೈರ್ಯ ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರರ ಪ್ರಾಣವನ್ನು ಅಪಾಯದಿಂದ ರಕ್ಷಿದಂತಹ ಮಕ್ಕಳಾದ ಕೊಡಗು ಜಿಲ್ಲೆ, ವಿರಾಜಪೇಟೆ ಅಂಚೆಯ ನೋತ್ಯಗ್ರಾಮದ ಮಾಸ್ಟರ್ ಅರ್ಜುನ್ ಸಾರ್. ವೈ.ಡಿ ಮತ್ತು ತುಮಕೂರು ಜಿಲ್ಲೆ ಶಿರಾ ತಾಲ್ಲೂಕು, ಹುಲಿಕುಂಟೆ ಹೋಬಳಿ ರಾಗಲ ಹಳ್ಳಿಯ ಮಾಸ್ಟರ್ ಆರ್. ಸಿ. ಗೌಡ ಇವರಿಗೆ “ಹೊಯ್ಸಳ ಶೌರ್ಯ ಪ್ರಶಸ್ತಿ” ಹಾಗೂ ತುಮಕೂರು ಜಿಲ್ಲೆಯ ಊರುಕೆರೆ ಅಂಚೆಯ ಕುಚ್ಚಂಗಿಪಾಳು ಗ್ರಾಮದ ಕುಮಾರಿ ಶಾಲು ಅವರಿಗೆ “ಕೆಳದಿ ಚೆನ್ನಮ್ಮ ಶೌರ್ಯ” ಪ್ರಶಸ್ತಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿದ ಬೆಳಗಾವಿ ಜಿಲ್ಲೆ ಸೋಮವಾರ ಪೇಟೆಯ ಬೆಳಗಾವಿ ಡಿಸ್ಟ್ರಿಕ್ಟ್ ರೋಲರ್ ಅಸೋಸಿಯೇಷನ್, ಬೀದರ್ ಜಿಲ್ಲೆ ಮರಖಲದ ಬೊಮ್ಮಗೊಂಡೇಶ್ವರ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್(ರಿ), ಉಡಪಿ ಜಿಲ್ಲೆ ಕಾರ್ಕಾಳದ ಕಕ್ಕುಂದೂರಿನ ಶ್ರೀ ಗುರು ರಾಘವೇಂದ್ರ ಸೇವ ಟ್ರಸ್ಟ್, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಾಪೂಜಿ ಎಜುಕೇಷನಲ್ ಸೊಸೈಟಿ (ರಿ) ಮತ್ತು ಗದಗ ಜಿಲ್ಲೆಯ ಶ್ರೀ ಕಾಳಿದಾಸ ಶಿಕ್ಷಣ ಸಮಿತಿ (ರಿ) ಇವರಿಗೆ “ರಾಜ್ಯ ಪ್ರಶಸ್ತಿ” ಹಾಗೂ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲುಕಿನ ಶಿರಗುಪ್ಪಿಯ ಪರುಶುರಾಮ ಮ ದಿವಾನದ, ಬಳ್ಳಾರಿ ಜಿಲ್ಲೆಯ ಗಾಂಧಿನಗರದ ಶ್ರೀಮತಿ ರಜನಿ ಲಕ್ಕಾ, ಮಂಡ್ಯ ಜಿಲ್ಲೆ ಗಾಂಧಿನಗರದ ಶ್ರೀಮತಿ ಹೆಚ್. ಆರ್. ಕನ್ನಿಕಾ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಲೋಕರಾಜು ಇವರಿಗೆ “ವ್ಯಕ್ತಿ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ”ಗಳನ್ನು ಪ್ರದಾನ ಮಾಡಿದರು.
ಅಲ್ಲದೆ ಬಾಲಭವನದಿಂದ ಹಮ್ಮಿಕೊಳ್ಳಲಾದ ಚಿತ್ರ ಕಲೆ, ಸಂಗೀತ, ಜಾನಪದ ಇನ್ನಿತರೆ ಕ್ಷೇತ್ರಗಳಲ್ಲಿ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳಿಗೆ “ಕಲಾಶ್ರೀ ಪ್ರಶಸ್ತಿ” ಪ್ರದಾನ ಮಾಡಿದರು. ನಂತರ “ಬಾಲಮಂದಿರ ಕಥಾ ಚಂದಿರ” ಪುಸ್ತಕವನ್ನು ಬಿಡುಗಡೆ ಮಾಡುವುದರ ಜೊತೆಗೆ ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕರ ನೇಮಕಾತಿಗಾಗಿ ರೂಪಿಸಲಾದ ತಂತ್ರಾಂಶವನ್ನು ಲೊಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಜಿ.ಸಿ. ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆಯ ನಿರ್ದೇಶಕರಾದ ಶ್ರೀಮತಿ ಅರ್ಚನಾ ಎಂ.ಎಸ್. ಮಹಿಳ ಅಭಿವೃದ್ಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪುಷ್ಪಲತಾ, ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಸೇರಿದಂತೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.