ಕಲಬುರಗಿ; 2023-24ನೇ ಸಾಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ದೇವದಾಸಿ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಮಹಿಳೆಯರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಉದ್ಯೋಗಿನಿ ಯೋಜನೆ (ಶಾಸಕರ ಆಯ್ಕೆ ಸಮಿತಿ): ಈ ಯೋಜನೆಯಡಿ ಮಹಿಳೆಯರು ವಿವಿಧ ಆದಾಯೋತ್ಪನ್ನ ಚಟುವಟಿಕೆ ಹಾಗೂ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು 3 ಲಕ್ಷ ರೂ. ಗಳವರೆಗಿನ ಸಾಲ ಹಾಗೂ ಸಹಾಯಧನ ಸೌಲಭ್ಯ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸಾಲದ ಶೇ.50 ರಷ್ಟು ಗರಿಷ್ಟ 1,50,000 ರೂ.ಗಳ ವರೆಗಿನ ಸಹಾಯಧನ ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 30 ರಷ್ಟು ಗರಿಷ್ಟ 90,000 ರೂ. ಗಳ ಬ್ಯಾಂಕ ಎಂಡ ಸಹಾಯಧನವನ್ನು ನೀಡಲಾಗುತ್ತದೆ. ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು. ಅರ್ಹ ಫಲಾನುಭವಿಗಳನ್ನು ಮತಕ್ಷೇತ್ರವಾರು ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು.
ಜಿಲ್ಲಾ ಆಯ್ಕೆ ಸಮಿತಿ ಯೋಜನೆಗಳು: ಚೇತನ, ಧನಶ್ರೀ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಹಾಗೂ ದೇವದಾಸಿ ಪುನರ್ವಸತಿ ಈ ಯೋಜನೆಗಳಡಿ 18 ವರ್ಷ ಮೇಲ್ಪಟ್ಟ ದಮನಿತ ಮಹಿಳೆಯರು, 60 ವರ್ಷದೊಳಗಿನ ಹೆಚ್.ಐ.ವಿ. ಸೋಂಕಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು 30,000 ರೂ.ಗಳ ಆರ್ಥಿಕ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಅರ್ಹ ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಹ ಮಹಿಳಾ ಫಲಾನುಭವಿಗಳು ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗ¼ಲ್ಲಿ ಸೇವಾಸಿಂಧು ಜಾಲತಾಣ https://sevasindhu.karnataka.gov.in ದಲ್ಲಿ ಆನ್‍ಲೈನ್ ಮೂಲಕ 2023ರ ಡಿಸೆಂಬರ್ 22 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಭಂಧಪಟ್ಟ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.