ಕಲಬುರಗಿ: ಕೇಂದ್ರದ ಬಿಜೆಪಿ ಸರಕಾರ ಬಂದಾಗಿನಿಂದ ಜಾರಿ ನಿರ್ದೆಶನಾಲಯವನ್ನು ವಿಪಕ್ಷಗಳ ವಿರುದ್ಧ ಬಳಸುವ ಅಸ್ತ್ರವಾಗಿ ಬಳಸಿಕೊಳುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಅವರು ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿತ್ತು, ಈಗ ಕರ್ನಾಟಕದಲ್ಲೂ ಕೇಂದ್ರ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷ ದುರ್ಬಲ ಮಾಡುವ ಕೆಲಸ ಮಾಡುತ್ತಿದೆದ್ದು, ಕೆಲವು ದಿನಗಳ ಹಿಂದೆ ಕೂಡ ಕೊಲೆ ಆರೋಪಿಯ ಹೇಳಿಕೆ ಮೇರೆಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಹರಿಹಾಯ್ದರು.
ಸಿಬಿಐ, ಐಟಿ, ಇಡಿ ಎಲ್ಲವನ್ನೂ ಬಳಸಿ ಬ್ಲ್ಯಾಕ್‍ಮೇಲ್ ತಂತ್ರ ಮಾಡುತಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಎಂದು ಎಲ್ಲಿಯೂ ಕಂಡು ಬಂದಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿರವಾಗುತ್ತಿದೆ. ಹೀಗಾಗಿ ವಿಪಕ್ಷಗಳನ್ನು ನಿಯಂತ್ರಣದಲ್ಲಿ ಇಡಬೇಕೆಂದು ಈ ರೀತಿ ಕೇಂದ್ರದ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ, ದಿನೇಶ್ ಗುಂಡೂರಾವ್ ನಮ್ಮ ಅಧ್ಯಕ್ಷರಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಸೂಚನೆಯನ್ನೂ ನೀಡಿಲ್ಲ. ಈ ಕುರಿತು ಹೈಕಮಾಂಡ್‍ನಿಂದ ಯಾವುದೇ ಮಾಹಿತಿಯೂ ಬಂದಿಲ್ಲ, ಇದು ಮಾಧ್ಯಮದ ಸೃಷ್ಟಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಳಗ್ಗೆ ಮಾಧ್ಯಮಗಳ ಜೊತೆ ಡಿ.ಕೆ ಶಿವಕುಮಾರ್ ಅವರು ಮಾತನಾಡಿ, ನಾನೇನೂ ತಪ್ಪು ಮಾಡಿಲ್ಲ, ರೇಪು ಮಾಡಿಲ್ಲ, ದುಡ್ಡು ಕದ್ದಿಲ್ಲ. ರಾಜಕೀಯವಾಗಿ ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಲು ಅವರನ್ನು ಹಿಡಿದಿಟ್ಟಿದ್ವಿ. ಹೀಗಾಗಿ ಈಗ ಬೇಕಾದಷ್ಟು ಅನುಭವಿಸುತ್ತಿದ್ದೇವೆ. ಪರವಾಗಿಲ್ಲ ಎಲ್ಲವನ್ನೂ ನಾವು ಫೇಸ್ ಮಾಡಬೇಕು ಎಂದಿದ್ದರು. ಏನಾದರೂ, ಯಾರಿಗಾದರೂ ಒಳ್ಳೆಯದು ಮಾಡಲು ಹೊರಟಾಗ ಈ ರೀತಿ ಆಗುತ್ತದೆ. ಗುರುವಾರ ನಾವು ಹಾಕಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಸದ್ಯಕ್ಕೆ ನಾನು ಪ್ಲೈಟ್ ಬುಕ್ ಮಾಡಿದ್ದು, ದೆಹಲಿಗೆ ಹೋಗುತ್ತಿದ್ದೇನೆ. ಲಾಯರ್ ನಾ ಮೀಟ್ ಮಾಡಬೇಕು ಎಂದು ಹೇಳಿದ್ದರು.
ಗುರುವಾರ ರಾತ್ರಿ 9.40ಕ್ಕೆ ನನಗೆ ಸಮನ್ಸ್ ಕೊಟ್ಟು ಒಂದು ಗಂಟೆಗೆ ಬರಬೇಕು ಎಂದು ನೋಟಿಸ್ ನೀಡಿದ್ದಾರೆ. ಅದೇನೋ ರಾತ್ರಿ ಬಂದು ತುರ್ತಾಗಿ ವಿಚಾರಣೆಗೆ ಬನ್ನಿ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಪ್ರೆಸ್ ಮೀಟ್ ಮಾಡಿ ಮಾತಾಡೇ ದೆಹಲಿಗೆ ಹೋಗುತ್ತೇನೆ. ನನಗೆ ಒಂದೆರಡು ಗಂಟೆ ಪರ್ಸನಲ್ ಕಮಿಟ್ ಮೆಂಟ್ ಕೆಲಸ ಇದೆ. ಆದ್ದರಿಂದ ಹೋಗುತ್ತಿದ್ದೇನೆ. ನನ್ನ ಯಾರೂ ಫಾಲೋ ಮಾಡಬೇಡಿ ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದರು.