ಸುರಪುರ:ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಒಂದು ಶಿಕ್ಷಾರ್ಹ ಅಪರಾಧವಾಗಿದ್ದು ಯಾರುಕೂಡ ಬಾಲ ಕಾರ್ಮಿಕರನ್ನು ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ಜಿಲ್ಲಾ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಸಮಿತಿ ಗೌರವ ಕಾರ್ಯದರ್ಶಿಗಳಾದ ನ್ಯಾ. ರವೀಂದ್ರ ಹೊನಾಲೆ ತಿಳಿಸಿದರು.
ನಗರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ,ತಾಲೂಕು ಆಡಳಿತ,ತಾಲೂಕ ಪಂಚಾಯತ್,ಕಾರ್ಮಿಕ ಇಲಾಖೆ,ಆರೋಗ್ಯ ಇಲಾಖೆ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಪೊಲೀಸ್ ಇಲಾಖೆ ಇರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ,ಕಿಶೋರ ಕಾರ್ಮಿಕ ವಿರೋಧಿ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿ,ಯಾರಾದರು ಬಾಲ ಕಾರ್ಮಿಕರನ್ನು ಅಥವಾ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು,25 ರಿಂದ 50 ಸಾವಿರ ರೂಪಾಯಿ ವರೆಗೆ ದಂಡ,5 ವರ್ಷಗಳ ಜೈಲು ಶಿಕ್ಷೆ ಆಗಲಿದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ್ ಮಾತನಾಡಿ,ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರು ಕೈ ಜೋಡಿಸಬೇಕು,ಇದಕ್ಕೆ ಸಾರ್ವಜನಿಕರು ಕೂಡ ಎಲ್ಲಿಯಾದರು ಬಾಲ ಕಾರ್ಮಿಕರು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣ ದಿಂದ ಮುಖ್ಯ ರಸ್ತೆಗಳ ಮೂಲಕ ಮಹಾತ್ಮ ಗಾಂಧಿ ವೃತ್ತದ ವರೆಗೆ ಜಾಗೃತಿ ಜಾಥಾ ನಡೆಸಿ ಎಲ್ಲ ಅಂಗಡಿಗಳ ಮಾಲೀಕರಿಗೂ ಭಿತ್ತಿ ಪತ್ರಗಳ ನೀಡುವ ಮೂಲಕ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಿವಾಣಿ ನ್ಯಾಯಾಧೀಶರಾದ ನ್ಯಾ:ಮಾರುತಿ ಕೆ,ಪಿ.ಐ ಆನಂದ ವಾಘಮೊಡೆ,ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ ನಾಯಕ,ಜಿಲ್ಲಾ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಸಮಾಜ ಕಲ್ಯಾಣಾಧಿಕಾರಿ ಶೃತಿ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ಸಿಡಿಪಿಓ ಅನಿಲ್ ಕಾಂಬ್ಳೆ,ಸಿಆರ್‍ಪಿ ಖಾದರ ಪಟೇಲ್, ನ್ಯಾಯಾಂಗ ಇಲಾಖೆಯ ಭೀಮು ಬನಸೊಡೆ,ಕಾರ್ಮಿಕ ಸಂಘಟನೆಯ ಮುಬೀನ್ ದಖನಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.