ವಾಡಿ: ಸಮಾಜದಲ್ಲಿನ ತಾರತಮ್ಯ ಹೊಗಲಾಡಿಸಿ ಸಾಮಾಜಿಕ ಸಾಮರಸ್ಯ ಬೆಳೆಸಲು ಶ್ರಮಿಸಿದ ಮಹಾನ ಪುರುಷ ಕನಕದಾಸರು ಎಂದು ಎಸ್ ಸಿ ಮೂರ್ಚಾದ ತಾಲ್ಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ 536ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, ಜಾತಿ ಪದ್ಧತಿ, ತಾರತಮ್ಯಗಳನ್ನು ಅಲ್ಲಗಳೆದು ಲೋಕಕ್ಕೆ ಹಿತಕಾರಿಯಾಗಿ ಬಾಳಿದರು. ಅವರ ತತ್ವ ಸಿದ್ಧಾಂತ ನಮಗೆಲ್ಲ ದಾರಿದೀಪವಾಗಿವೆ ಎಂದರು.
ಜಿಲ್ಲಾ ಕಾರ್ಯಕಾರಣಿ ಸದಸ್ಯ ಯಮನಪ್ಪ ನವನಳ್ಳಿ ಮಾತನಾಡಿ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿರದೇ ಇಡೀ ಮನುಕುಲದ ಉದ್ಧಾರಕ್ಕಾಗಿ ಬಡಿದಾಡಿದ್ದಾರೆ.ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಸಮರ ಸಾರಿದ ಅವರು ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ಆದರ್ಶ ನಮಗೆಲ್ಲರಿಗೂ ಬದುಕುವ ಪಾಠ ಕಲಿಸುತ್ತವೆ ಎಂದರು.
ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿ ಕನಕದಾಸರು ಒಂದು ಜನಾಂಗದ ಪ್ರತಿನಿಧಿಯಾಗದೆ, ಒಂದು ತತ್ವದ ಪ್ರತಿನಿಧಿಯಾಗಿ ಮಾನವೀಯತೆ ಅಂತಃಕರಣ, ನಿಷ್ಕಲ್ಮಷ ಪ್ರೇಮ ಇವುಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಯಾವ ಮತವನ್ನೂ ಬಿಡದೆ ಯಾವ ಮತಕ್ಕೂ ಅಂಟಿಕೊಳ್ಳದೇ ಸಕಲ ತತ್ವಗಳನ್ನೂ ಮೀರಿ ನಿರ್ದಿಗಂತವಾಗಿ ಬೆಳೆದು ಮಹಾನ್ ದಾಸರು. ಅವರ ತತ್ವಗಳು ಸಂದೇಶಗಳು ಮಾನವ ಜಗತ್ತಿಗೆ ಪ್ರಸ್ತುತವಾಗಿವೆ. ಕನಕದಾಸರ ಜಯಂತಿಯ ನಿಮಿತ್ತ ಕೇವಲ ಅವರ ಭಾವಚಿತ್ರಕ್ಕೆ ಪೂಜಿಸದೆ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದರು.
ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ರವಿ ನಾಯಕ ಸ್ವಾಗತಿಸಿದರು.
ಮುಖಂಡರಾದ ರಾಮಚಂದ್ರ ರಡ್ಡಿ,ವಿಠಲ ನಾಯಕ ಕನಕ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟಿಮನಿ ಮುಖಂಡರಾದ ಭೀಮರಾವ ದೊರೆ, ಹರಿ ಗಲಾಂಡೆ,ಅರ್ಜುನ ಕಾಳೆಕರ,ಶರಣಗೌಡ ಚಾಮನೂರ, ಕಿಶನ ಜಾಧವ,ಪ್ರಕಾಶ ಪುಜಾರಿ,ಮಹೇಂದ್ರ ಕುಮಾರ ಪುಜಾರಿ,ರಿಚರ್ಡ್ ಮಾರೆಡ್ಡಿ, ಜಯಂತ ಪವಾರ,ಪ್ರದೀಪ ಸುಳೆ,ಮಲ್ಲಿಕಾರ್ಜುನ ಸಾತಖೇಡ,ಪ್ರೇಮ ರಾಠೊಡ, ಅಯ್ಯಣ್ಣ ದಂಡೋತಿ,ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ, ಬನಶಂಕರ ಮುಸ್ಟೂರ, ದೇವೇಂದ್ರ ಪಂಚಾಳ,ಚಂದ್ರಶೇಖರ ಬೆಣ್ಣೂರಕರ್, ಬಸವರಾಜ ಪಗಡಿಕರ,ಚಂದ್ರಾಮ ರಾಜೋಳ್ಳಿ,ಮಹೇಶ ಕುರಕುಂಟ,ಈಶ್ವರ ಹೆರೋರ,ಸಂಜಯ ಕುಮಾರ,ಪ್ರೇಮ ತೆಲ್ಕರ ಸೇರಿದಂತೆ ಅನೇಕರು ಇದ್ದರು.