ಮಹಾದಾಸೋಹಿ ಶರಣಬಸವೇಶ್ವರಿಂದ ಕಾಯಕ, ದಾಸೋಹ, ಪ್ರಸಾದ, ಸಂಸ್ಕೃತಿಯನ್ನು ಜನಪದರು ಪಾಲಿಸಿ ಧನ್ಯರಾದರೆಂದು ಮಹಾದೇವಿ ಕನ್ಯಾಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಶ್ರೀದೇವಿ ಮಹಾದೇವಮಠ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.
ಒಬ್ಬಳು ಶರಣಬಸವರ ಮಹಾಮನೆಗೆ ಬಂದಾಗ ಶರಣರು ಅವಳಿಗೆ ವಿಭೂತಿ ಕೊಡುತ್ತಾರೆ. ಅದೇನು ಮಹಾ ಎನ್ನುವಂತೆ ಭಾವಿಸಿ ಅಲ್ಲಿರುವ ಒಂದು ಕಟ್ಟೆಯ ಮೇಲಿಟ್ಟು ಮನೆಗೆ ಹೊರಟಳು. ಮನೆ ಮುಟ್ಟಿರಲಿಲ್ಲ ಮೈತುಂಬಾ ತೊನ್ನುರೋಗ , ಮೈಯೆಲ್ಲ ಬಿಳುಚಿಕೊಂಡಿರುತ್ತದೆ. ನಡೆದುದ್ದೆಲ್ಲವನ್ನು ಮನೆಯವರ ಮುಂದೆ ಹೇಳುತ್ತಾಳೆ. ಅವಳ ಗೆಳತಿಯೊಬ್ಬಳು ಅವಳನ್ನು ಶರಣರ ಹತ್ತಿರ ಕರೆದುಕೊಂಡು ಹೋಗುತ್ತಾಳೆ. ಕಟ್ಟಿಯ ಮೇಲಿಟ್ಟ ವಿಭೂತಿಯನ್ನು ಮೈಯೆಲ್ಲ ಹಚ್ಚಿಕೊಂಡಾಗ ತಕ್ಷಣವೇ ತೊನ್ನುರೋಗ ಮಾಯವಾಗುತ್ತದೆ.
ಮಹಾದಾಸೋಹಿ ಶರಣಬಸವರ ಮನೆಗೆ ಒಬ್ಬಾತ ಏನೇನೂ ತೆಗೆದುಕೊಂಡು ಬಂದ. ಅದನ್ನೆಲ್ಲಾ ಶರಣರಿಗೆ ನಾನು ಕೊಡುತ್ತಿದ್ದೇನೆ ಎಂಬ ಅಹಂಕಾರದಿಂದ ತಂದಿದ್ದೇನೆ ಎಂದು ಜಂಭಕೊಚ್ಚಿಕೊಂಡು ಒಳಗೊಯ್ಯುವಂತೆ ತಿಳಿಸಿದ. ಆದರೆ ಶರಣರು ’ ಒಯ್ಯುತ್ತಾರಪ್ಪಾ ನೀವು ಪ್ರಸಾದ ಪಡೆಯಿರಿ’ ಎಂದು ಹೇಳಿದ್ದರೂ ಆ ಶ್ರೀಮಂತ ಕೇಳಿ ಕೇಳದಂತೆ ತನ್ನೂರಿಗೆ ಹೊರಟೆಬಿಟ್ಟ. ಮನೆಗೆ ಹೋಗಿ ನೋಡುತ್ತಾನೆ. ಶರಣರಿಗೆ ಕೊಟ್ಟ ಸಾಮಾನುಗಳು ತನಗಿಂತಲೇ ಮೊದಲು ಅಲ್ಲಿ ಬಂದು ಕುಳಿತಿವೆ. ತಕ್ಷಣವೇ ಆ ಸಾಹುಕಾರನಿಗೆ ತನ್ನ ದುರ್ನಡತೆ ನೆನಪಾಯಿತು. ಶರಣರಲ್ಲಿ ಬಂದು ತನ್ನ ತಪ್ಪಿನ ಅರಿವಾಗಿ ಅವರಿಗೆ ಶರಣಾದನು. ಅಹಂಕಾರ ಬಿಟ್ಟು ಒಳ್ಳೆಯ ಮನುಷ್ಯನಾದನು.
ಗೆಳತಿಯರಿಲ್ಲಬ್ಬರು ಶರಣಬಸವರ ಅಪ್ಪಟ ಭಕ್ತರು . ಹಾಡುವದರಲ್ಲಿ ಎತ್ತಿದ ಕೈ. ಶರಣರು ಅವರನ್ನು ಕರೆಯಿಸಿ ಆಗಾಗ ಹಾಡಿಸುತ್ತಿದ್ದರು. ಶರಣರು ಅವರಿಗೆ ಮದುವೆ ಮಾಡಿಸಿ ಸನ್ಮಾರ್ಗದಲ್ಲಿ ನಡೆಯಲು ತಿಳಿಸುತ್ತಾರೆ.
ಶರಣಬಸವರು ಸೊಲ್ಲಾಪುರ ಶಿವಯೋಗಿ ಸಿದ್ಧರಾಮ ದರ್ಶನಕ್ಕೆಂದು ಹೋಗುತ್ತಾರೆ. ಬರಿಗಾಲಿನಿಂದ ಶರಣರು ನಡೆಯುತ್ತಾ ಸಿದ್ಧರಾಮ ಶಿವಯೋಗಿಗಳ ಗುಡಿಗೆ ಬರುತ್ತಾರೆ. ರಾತ್ರಿ ಆಗುತ್ತದೆ, ದರ್ಶನ ಆಗುವ ತನಕ ಪೂಜೆ ಪ್ರಸಾದವಿಲ್ಲ. ಜೊತೆಯಲ್ಲಿದ್ದ ಭಕ್ತರೆಲ್ಲರು ಚಿಂತೆಯಲ್ಲಿದ್ದಾಗ ಶರಣರು’ ಹುಚ್ಚಪ್ಪಗಳಿರಾ, ನನ್ನ ಭಕ್ತಿ ಸತ್ಯವಾಗಿದ್ದರೆ ಗುಡಿಯೊಳಗಿನ ಶಿವಯೋಗಿಗಳು ತಾನಾಗಿಯೇ ದರ್ಶನ ಕೊಡುತ್ತಾರೆ’ ಎನ್ನುವಷ್ಟರಲ್ಲಿ ಬಾಗಿಲುಗಳೆಲ್ಲ ತೆರೆದವು. ನೇರವಾಗಿ ಶರಣಬಸವರು ತಮ್ಮ ಭಕ್ತರೊಂದಿಗೆ ಒಳಗೆ ಹೋಗಿ ಶಿವಯೋಗಿಗಳ ದರ್ಶನ ಮಾಡುವರು. ಅದೆಷ್ಟೊ ಗಂಟೆ ಗರ್ಭಗುಡಿಯಲ್ಲಿ ಕುಳಿತುಬಿಟ್ಟರು. ಇಬ್ಬರೂ ಮಹಾಶರಣರ ನಡುವೆ ನಡೆದ ಮಾತುಗಳು ಸುತ್ತಮುತ್ತಲಿನವರಿಗೆ ಕೇಳಿಸದೆ ಹೋದವು.
ಶರಣಬಸವರ ಮಹಾಮನೆಯಲ್ಲಿ ಒಬ್ಬ ಹೆಣ್ಣುಮಗಳು ಏನು ಮಾಡದೇ ತಾನಲ್ಲೆ ಉಂಡು ಮನೆಗೆ ಮುಚ್ಚಿ ಒಯ್ಯುತ್ತಿದ್ದಳು. ಅದೆಷ್ಟೊ ವರ್ಷ ಹೀಗೆ ಆಯಿತು. ಕದ್ದು ತಿಂದು ತಿನ್ನುವದರಲ್ಲಿ ಆಕೆಗೆ ಬಹಳ ತೃಪ್ತಿ. ಮುಂದೆ ಆಕೆಯ ಮೈಯೊಳಗಿನ ರಕ್ತ ಕೆಟ್ಟು ಮಹಾರೋಗಕ್ಕೆ ತುತ್ತಾಗುತ್ತಾಳೆ. ವೈದ್ಯರಲ್ಲಿಗೆ ತೋರಿಸಿದಾಗ ನಿನ್ನ ರಕ್ತ ಕೆಟ್ಟಿದೆ ಬಹಳ ದಿನ ಉಳಿಯುವುದಿಲ್ಲವೆಂದು ಹೇಳಿದರು. ಮುಂದೆ ಅವಳಿಗೆ ತನ್ನ ತಪ್ಪಿನ ಅರಿವಾಗಿ ಶರಣರಲ್ಲಿ ಹೋಗಿ ತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ಶರಣರು ಅವಳಿಗೆ ವಿಭೂತಿ ಹಚ್ಚಿ ಹರಿಸಿದಾಗ ಅವಳ ರೋಗ ಅಳಿಯುತ್ತದೆ. ಮುಂದೆ ಕದ್ದು ತಿನ್ನುವುದನ್ನು ಬಿಟ್ಟು ಒಳ್ಳೆಯವಾಗಿ ಬಾಳುತ್ತಾಳೆ ಎಂದು ಶರಣಬಸವರ ಶಿವಲೀಲೆಗಳನ್ನು ಹೇಳಿದರು.