ಕಲಬುರಗಿ; ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಕಾಡವನಾಳ ಗ್ರಾಮದ ಜನತೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸರಕಾರಿ ಕೆಂಪು ಬಸ್ಸಿನ ಮುಖ ಕಂಡಿದ್ದಾರೆ, ತಮ್ಮೂರಿಗೆ ಭಾನುವಾರ ಬೆಳಗಿನ ಹೊತ್ತು ಕೆಂಪು ಬಸ್ಸು ಹಾರ್ನ್ ಬಾರಿಸುತ್ತ ಬಂದು ನಿಂತಾಗ ಊರಿಗೇ ಊರೇ ಸಂಭ್ರಮಿಸಿದೆ. ಕಾಡನಾಳ ಊರಲ್ಲಿ ಇದು ಇತಿಹಾಸ ನಿರ್ಮಿಸಿತು ಎಂದು ಜನ ಕುಣಿದು ಕುಪ್ಪಳಿಸಿದ್ದಾರೆ.
ಕಲಬುರಗಿ ಸೆರಗಲ್ಲಿದ್ದರೂ ಕೂಡಾ ಬಸ್ ಸವಲತ್ತಿಂದ ವಂಚಿತವಾಗಿದ್ದ ಕಾಡನಾಳ ಊರಿಗೆ ಭಾನುವಾರ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲರ ನೇತೃತ್ವನದಲ್ಲಿ ಬಸ್ ಸಂಚಾರ ಆರಂಭವಾಯ್ತು.
ಕಲಬುರಗಿ ಸೂಪರ್ ಮಾರ್ಕೆಯ್ನಿಂದ ಓಡುವ ಬಸ್ಸು ಕಾಡನಾಳದಿಂದ ಮೇಳಕುಂದಾ ಬಿ, ಇಲ್ಲಿಂದ ಮೇಳಕುಂದಾ ಕೆ ಮೂಲಕ ಹಡಗಿಲ್ ಹಾರುತಿ ಮಾರ್ಗವಾಗಿ ಸಂಚರಿಸುತ್ತ ಕಲಬುರಗಿ ಬಂದು ಸೇರಲಿದೆ. ನಿತ್ಯ ಸಂಚರಿಸುವ ಈ ಬಸ್ ಸೇವೆಗೆ ಶಾಸಕರಾದ ಅಲ್ಲಂಪ್ರಭು ಪಾಟೀಲರು ಭಾನುವಾರ ಹಸಿರು ನಿಶಾನೆ ತೋರಿಸಿದ್ದಾರೆ.
ಕಾಡನಾಳ ಊರಲ್ಲಿ ಜನರಂತೂ ಬಸ್ಸು ಕಂಡಾಕ್ಷಣ ಜೈಕಾರ ಘೋಷಣೆ ಮಾಡಿದ್ದ ನೋಟಗಳು ಕಂಡಿವೆ. ಶಾಸಕರಾದ ಅಲ್ಲಂಪ್ರಭು ಪಾಟೀಲು ಕಾಡನಾಳದಿಂದಲೇ ಸದರಿ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕರಾದ ಅಲ್ಲಂಪ್ರಭು ಪಾಟೀಲರು ಮೇಳಕುಂದಾ (ಬಿ), ಮೇಳಕುಂದಾ (ಕೆ), ವಯಾ ಪಟ್ಟಣ ಮಾರ್ಗವಾಗಿಯೂ ಕಲಬುರಗಿಗೆ ಸಂಪರ್ಕಿಸುವಂತೆ ಹೊಸದಾದ ಬಸ್ ಸೇವೆಗೂ ಹಸಿರು ನಿಶಾನೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕರು ಮೇಳಕುಂದಾ (ಬಿ) ನಿಂದ ಮೇಳಕುಂದಾ (ಕೆ) ವರೆಗಿನ 1. 50 ಕೋಟಿ ರು ವೆಚ್ಚದ ರಸ್ತೆ ಯೋಜನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಮುಖಂಡರಾದ ಬೀಮರಾಯ, ತಾಪಂ, ಗ್ರಾಪಂ ಸದಸ್ಯರು, ರವಿಕುಮಾರ್ ಸೇರಿದಂತೆ ಅನೇಕ ಪ್ರಮುಖರು, ಊರಿನ ಜನತೆ ಹಾಜರಿದ್ದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.