ಭ್ರೂಣಹತ್ಯೆ ತಡೆಗಟ್ಟಲು ಕಾನೂನು ಬದಲಾವಣೆ, ಕಠಿಣ ಕ್ರಮ, ವಿಶೇಷ ನೀತಿ ರಚನೆ, ಐಪಿಸಿ ತಿದ್ದುಪಡಿಗೆ ಕ್ರಮ

0
12

ಬೆಂಗಳೂರು / ಬೆಳಗಾವಿ; ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಾನೂನಾತ್ಮಕ ರಕ್ಷಣೆ, ಸಮಾನ ಹಕ್ಕು, ಸಾಮಾಜಿಕ ನ್ಯಾಯ ದೊರಕುವಂತೆ ಸರ್ಕಾರಗಳು ಕ್ರಮ ವಹಿಸಿವೆ. ಭ್ರೂಣಹತ್ಯೆ ಒಂದು ಸಾಮಾಜಿಕ ಪಿಡುಗು ಆಗಿ ಮಹಿಳೆಯರನ್ನು ಶೋಷಣೆ ಮಾಡುತ್ತಿದೆ. ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮತ್ತು ಇದರಲ್ಲಿನ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಲು ಅನುವಾಗುವಂತೆ ಈಗಿರುವ ಕಾನೂನುಗಳಿಗೆ ಮತ್ತು ಐ.ಪಿ.ಸಿ ತಿದ್ದುಪಡಿ ಮಾಡಿ, ಈ ಭ್ರೂಣಹತ್ಯೆಯನ್ನು ತಡೆಗಟ್ಟಲು ವಿಶೇಷವಾದ ಮತ್ತು ಸಮಗ್ರವಾದ ಹೊಸ ನೀತಿಯನ್ನು ರೂಪಿಸಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ್ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ವಿಧಾನಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ ಅವರು ಪ್ರಸ್ತಾಪಿಸಿದ ರಾಜ್ಯದಲ್ಲಿ ಭ್ರೂಣಹತ್ಯೆ ತಡೆಗಟ್ಟುವ ಕುರಿತ ವಿಷಯಕ್ಕೆ ಉತ್ತರಿಸಿ ಮಾತನಾಡಿದರು.

Contact Your\'s Advertisement; 9902492681

ಆರೋಗ್ಯ ಇಲಾಖೆಯು 1994ರಲ್ಲಿ ರಚನೆಗೊಂಡಿರುವ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯನ್ವಯ ಲಿಂಗ ಪತ್ತೆಯನ್ನು ನಿμÉೀಧಿಸಿದೆ. ಆದರೂ ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. 2002 ರಿಂದ 2023ರ ಆರೋಗ್ಯ ಇಲಾಖೆಯ ಈ ಕುರಿತ ವರದಿಯನ್ನು ನೋಡಿದಾಗ ಕೇವಲ 100 ಪ್ರಕರಣಗಳು ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಇದರಿಂದ ತಿಳಿದು ಬರುತ್ತದೆ. ಕಳೆದ ವರ್ಷ 1000ಕ್ಕೆ 947 ಇದ್ದ ಲಿಂಗಾನುಪಾತ ಪ್ರಸಕ್ತ ವರ್ಷ 929ಕ್ಕೆ ಇಳಿದಿದೆ. ಈ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸುವ ಮತ್ತು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವವರನ್ನು ಕಠಿಣವಾಗಿ ಶಿಕ್ಷಿಸುವ ಕ್ರಮವಾಗಬೇಕು ಎಂದು ಹೇಳಿದರು.

ಸರ್ಕಾರವು ಭ್ರೂಣಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಈ ಕುರಿತು ಸಿ.ಐ.ಡಿ. ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖಾ ವರದಿಯನ್ನು ಪಡೆಯಲು ಸರ್ಕಾರ ಕ್ರಮವಹಿಸಲಿದೆ. ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಲಾಗಿದೆ. ರಾಜ್ಯದಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಗ್ರಾಮಮಟ್ಟದಿಂದ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕುರಿತು ದೀರ್ಘಕಾಲಿನ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಲಿಂಗ ಪತ್ತೆ ಮತ್ತು ಭ್ರೂಣಹತ್ಯೆಯಂತಹ ಅಪರಾಧ ಮಾಡುವವರ ಮೇಲೆ ಮತ್ತು ಮಾಡಿಸುವವರ ಮೇಲೆ ಇಬ್ಬರೂ ಮೇಲೂ ಸೂಕ್ತ ಕ್ರಮವಾಗಬೇಕು. ಈ ಕುರಿತು ವಿಶೇಷ ನೀತಿ ರೂಪಿಸುವ ಕಾನೂನನ್ನು ರಚಿಸಲಾಗುವುದು. ಮತ್ತು ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕಾನೂನು ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಆರೋಗ್ಯ ಇಲಾಖೆ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲಿದೆ.

ಟಾಸ್ಕ್‍ಪೋರ್ಸ್ ರಚಿಸಿ ನಿರಂತರ ನಿಗಾ ವಹಿಸಲಿದೆ. ರಾಜ್ಯಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಿದೆ. ಮತ್ತು ಉಪ ವಿಭಾಗ ಮಟ್ಟದಲ್ಲಿ ತಪಾಸಣಾ ಸಮಿತಿಗಳನ್ನು ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳ ಪರಿಶೀಲನೆ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಜಾರಿಗೆ ನಿರಂತರ ನಿಗಾ ವಹಿಸಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಮಂಡ್ಯ, ಮೈಸೂರು, ಬೆಂಗಳೂರು ಭ್ರೂಣಪತ್ತೆ ಮತ್ತು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಿ ಕ್ರಮವಹಿಸಲಾಗಿದೆ ಮತ್ತು ನಿನ್ನೆ ದಿನ ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವರದಿಯಾಗಿರುವ ಭ್ರೂಣಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಆರೋಗ್ಯ ಇಲಾಖೆ ತಕ್ಷಣ ಕ್ರಮವಹಿಸಿದೆ ಎಂದು ಸಚಿವರು ತಿಳಿಸಿದರು.

ಮುಂದಿನ ಅಧಿವೇಶನದಲ್ಲಿ ಕಾನೂನು ರಚನೆ: ಭ್ರೂಣಹತ್ಯೆ ವಿಷಯ ಚರ್ಚೆಯಲ್ಲಿ ಭಾಗವಹಿಸಿದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸಕ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ ಅವರು ಮಾತನಾಡಿ, ಭ್ರೂಣಹತ್ಯೆ ಮಹಾಪಾಪ. ಈ ಕೃತ್ಯವನ್ನು ತಡೆಗಟ್ಟಲು ಸರ್ಕಾರವು ಮುಂದಿನ ಅಧಿವೇಶನದಲ್ಲಿ ವಿಶೇಷ ಕಾನೂನು ರೂಪಿಸಿ ಜಾರಿಗೊಳಿಸಲಿದೆ ಎಂದು ಹೇಳಿದರು.
ಚರ್ಚೆಯಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಶರತ ಬಚ್ಚೇಗೌಡ, ಶಶಿಕಲಾ ಜೊಲ್ಲೆ, ನರೇಂದ್ರಸ್ವಾಮಿ, ಡಾ. ಮಂಥನಗೌಡ, ಡಾ. ಶ್ರೀನಿವಾಸ ಸೇರಿದಂತೆ ಸದನದ ಸದಸ್ಯರು ಭಾಗವಹಿಸಿ ತಮ್ಮ ಸಲಹೆ, ಅಭಿಪ್ರಾಯ ತಿಳಿಸಿದರು.

ಹೊಸ ತಾಲ್ಲೂಕು ಕೇಂದ್ರಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ;  ರಾಜ್ಯದಲ್ಲಿ ಘೋಷಣೆಯಾದ ಹೊಸ ತಾಲ್ಲೂಕು ಕೇಂದ್ರಗಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಇಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗುರುವಾರ ವಿಧಾನ ಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹೊಸದಾಗಿ ಘೋಷಣೆಯಾದ ತಾಲ್ಲೂಕು ಕೇಂದ್ರಗಳ ಬಹಳಷ್ಟು ಆಸ್ಪತ್ರೆಗಳು ತಾಲ್ಲೂಕು ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಸಿಲ್ಲ. ಇದರೊಂದಿಗೆ ರಾಜ್ಯದಲ್ಲಿ 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಹೊಂದಿವೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಹಣಕಾಸಿ ಲಭ್ಯತೆ ನೋಡಿಕೊಂಡು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಾಗುವುದು ಎಂದರು.

ದೇವದುರ್ಗ ಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ : ಶಾಸಕಿ ಕೆ.ಕರೆಮ್ಮ ಅವರ ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಂದಿನ ವರ್ಷದ ಆಯವ್ಯಯದಲ್ಲಿ ದೇವದುರ್ಗ ಪಟ್ಟಣದಲ್ಲಿ ಹೊಸದಾಗಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ಇದರೊಂದಿಗೆ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವುದಕ್ಕೂ ಸಮ್ಮತಿಸಿದರು.

ಇದೇ ವೇಳೆ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ತೀರ್ಥಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕೆ 35 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಅವಶ್ಯಕತೆಗೆ ಅನುಸಾರವಾಗಿ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಹೇಳಿದರು.

ತಾಳಿಕೋಟೆ ಆಸ್ಪತ್ರೆ ಮೇಲ್ದರ್ಜೆಗೆ: ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ತಾಳಿಕೋಟೆ ತಾಲ್ಲೂಕು ಕೇಂದ್ರವಾಗಿ 7 ವರ್ಷಗಳಾಗಿವೆ. ಈಗಲೂ ತಾಳಿಕೋಟೆ ಅಸ್ಪತ್ರೆ ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಕೆಯಾಗಿಲ್ಲ. ಕೂಡಲೇ ತಾಳಿಕೋಟೆ ನಗರದಲ್ಲಿ 30 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಸಚಿವರಲ್ಲಿ ಅವರಲ್ಲಿ ಕೇಳಿದರು. ಇದಕ್ಕೆ ಸ್ಪಂದಿಸಿದ ಸಚಿವ ದಿನೇಶ್ ಗುಂಡೂರಾವ್ ತಾಳಿಕೋಟೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here