ಕಲಬುರಗಿ: ಪರಿಸರದ ಸ್ವಚ್ಛತೆ ಕಾಪಾಡುವುದು, ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಮಾಲಿನ್ಯದ ನಿಯಂತ್ರಣ, ಸಾಂಕ್ರಾಮಿಕ ರೋಗಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದಕ್ಕೆ ಶ್ರಮಿಸುವುದು, ಎಲ್ಲರಲ್ಲಿ ಪರಿಸರ ಕಾಳಜಿ ಮೂಡಿಸುವುದು ಸೇರಿದಂತೆ ಮುಂತಾದ ಉತ್ತಮ ಪರಿಸರ ನಿರ್ಮಾಣದ ಕಾರ್ಯಗಳನ್ನು ಮಾಡುವ ಮೂಲಕ ಎನ್.ಎಸ್.ಎಸ್ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಪರಮ ಪೂಜ್ಯ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಜೇವರ್ಗಿ ತಾಲೂಕಿನ ಚಿಗರಹಳ್ಳಿ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಸಮುದಾಯ ಭವನದಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನವಾದ ಮಂಗಳವಾರ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ವಿಜ್ಞಾನ ಶಿಕ್ಷಕ ಪಂಕಜ ಪಾಟೀಲ, ವಿವಿಧ ಮಾಲಿನ್ಯಗಳಿಂದ ಪರಿಸರ ತತ್ತರಿಸಿ ಹೋಗಿದೆ. ಮಾಲಿನ್ಯ ನಿಯಂತ್ರಣ ನೀತಿ-ನಿಯಮಗಳು, ಸರ್ಕಾರ, ಪರಿಸರ ಪ್ರೇಮಿಗಳಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಸ್ವಚ್ಛತೆಯನ್ನು ಕಾಪಾಡುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಮಾಲಿನ್ಯ ನಿಯಂತ್ರಣ ಮಾಡಬೇಕು. ಎಲೆಕ್ಟ್ರಿಕ್ ವಾಹನಗಳ ಬಳಕಗೆ ಆದ್ಯತೆ, ವೈಯಕ್ತಿಕ ವಾಹನದ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವುದು, ರಾಸಾಯನಿಕಗಳ ಬಳಕೆ ನಿಷೇಧಿಸುವುದು ಸೇರಿದಂತೆ ಇನ್ನಿತರರ ಕ್ರಮಗಳಿಂದ ಪರಿಸರ ಸಂರಕ್ಷಣೆಯಾಗಲು ಸಾಧ್ಯವಿದೆ ಎಂದರು.
ಉಪನ್ಯಾಸಕ, ಪರಿಸರ ಪ್ರೇಮಿ ಶಂಕ್ರೆಪ್ಪ ಹೊಸದೊಡ್ಡಿ ಮಾತನಾಡಿ, ಪರಿಸರ ಮಾಲಿನ್ಯ ತಡೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ, ವನಮಹೋತ್ಸವ, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ, ಇ-ತಾಜ್ಯ ಪುನರ್ಬಳಕೆ, ಆಹಾರ ಪದಾರ್ಥಗಳನ್ನು ಹಾಳಾಗದಂತೆ ಎಚ್ಚರವಹಿಸುವುದು, ಸಾವಯುವ ಬೇಸಾಯಕ್ಕೆ ಆದ್ಯತೆ ನೀಡಬೇಕು. ಪ್ರತಿವರ್ಷ ಹುಟ್ಟು ಹಬ್ಬದ ದಿನದಂದು ನೆನಪಿಗಾಗಿ ಒಂದು ಗಿಡ ನೆಟ್ಟು. ಪೋಷಿಸಬೇಕು. ಆಗ ಕೆಲವೇ ವರ್ಷಗಳಲ್ಲಿ ಹಸಿರುಮಯ ಭಾರತವಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಆಸ್ಮಾ ಜಬೀನ್, ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.