ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಸಲ್ಲಿಸಿದ್ದ ಒಂದು ಸಾವಿರ ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ರಾಜ್ಯಪಾಲರು ಇತ್ತೀಚೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದು, ಕ್ರಿಯಾಯೋಜನೆಯಲ್ಲಿ ಪ್ರಸ್ತಾಪಿಸಿರುವಂತೆ ಎಲ್ಲ ಯೋಜನೆ, ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಲಾಗುವುದು ಎಂದು ಕೆಕೆಆರ್‍ಡಿಬಿ ಅಧ್ಯಕ್ಷ, ಶಾಸಕ ಡಾ. ಅಜಯಸಿಂಗ್ ತಿಳಿಸಿದರು.
ಶನಿವಾರ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಒಟ್ಟಾರೆ ಮೂರು ಸಾವಿರ ಕೋಟಿ ರೂ. ಅನುದಾನ ಬಳಕೆಗೆ ಅವಕಾಶವಿದ್ದು, ಅದರಂತೆ ಮಂಡಳಿ ಸಲ್ಲಿಸಿದ್ದ 1 ಸಾವಿರ ಕೋಟಿ ರೂ. ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದೆ, ಈ ಹಣ ಖರ್ಚಾದ ನಂತರ ಇನ್ನೂ 500 ಕೋಟಿ ರೂ.ಗಳವರೆಗೂ ಅನುದಾನ ಪಡೆದುಕೊಳ್ಳಬಹುದಾಗಿದೆ ಎಂದರು.
ಈಗ ಅನುಮೋದಿತ ಕ್ರಿಯಾಯೋಜನೆಯಲ್ಲಿ ಪ್ರಸ್ತಾಪಿಸಿರುವ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಕೂಡಲೇ ಜಿಲ್ಲಾ ಮಟ್ಟದಲ್ಲಿ ಶುರುವಾಗಲಿದ್ದು, ಫೆಬ್ರವರಿಯಲ್ಲಿ ಕೆಲಸ ಆರಂಭವಾಗಲಿದೆ. ಮೂರು ಸಾವಿರ ಕೋಟಿ ರೂ. ಬಂದಲ್ಲಿ ಅಲ್ಪಾವಧಿ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ ಎಂದರು.
ಮಂಡಳಿಗೆ ನಿಗದಿಯಾಗಿರುವ ಐದು ಸಾವಿರ ಕೋಟಿ ರೂ.ಗಳನ್ನು ಮುಂದಿನ ಆರ್ಥಿಕ ವರ್ಷ ಅಂದರೆ 2024-25ನೇ ಸಾಲಿನಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳಲು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕಾಗಿ ಕ್ರಿಯಾಯೋಜನೆ ರೂಪಿಸುವುದೂ ಸೇರಿದಂತೆ ಎಲ್ಲ ಆಡಳಿತಾತ್ಮಕ ಕ್ರಮಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು, ಈ ದಿಸೆಯಲ್ಲಿ ಪ್ರತಿ ವಾರವೂ ಪ್ರಗತಿ ಪರಿಶೀಲಿಸಲಾಗುವುದು, ಎಪ್ರಿಲ್ ಒಂದರೊಳಗೆ ಕ್ರಿಯಾ ಯೋಜನೆ ಸಿದ್ಧಗೊಂಡು ಸಲ್ಲಿಕೆಯಾಗುವಂತೆ ನೋಡಿಕೊಳ್ಳಲಾಗುವುದು. ಈ ವರ್ಷ ಮಾತ್ರ ಸಂಪೂರ್ಣ ಹಣ ಬಳಸಿಕೊಳ್ಳುವುದಕ್ಕೆ ತೊಂದರೆಯಾಗಲಿದೆ, ಮುಂದಿನ ವರ್ಷದಿಂದ ಎಲ್ಲವೂ ಸರಿಹೋಗಲಿದೆ ಎಂದರು.
ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ; ಕೆಕೆಆರ್‍ಡಿಬಿಯಲ್ಲೇ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಆರಂಭಿಸುವ ದಿಸೆಯಲ್ಲಿ ಆಡಳಿತಾತ್ಮಕ ಪ್ರಕ್ರಿಯೆ ನಡೆದಿದೆ. ಮಂಡಳಿಗೆ 221 ಇಂಜಿನಿಯರರನ್ನು ಒದಗಿಸುವಂತೆ ಕೋರಲಾಗಿತ್ತು. ಆದರೆ 23 ಇಂಜಿನಿಯರರನ್ನು ನಿಯೋಜಿಸಲಾಗಿದೆ ಎಂದರು.
65 PHC; ಕೆಕೆಆರ್‍ಡಿಬಿ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಹೊಸದಾಗಿ 65 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಒಂದು ಪಿಎಚ್‍ಸಿ ಸ್ಥಾಪನೆಗೆ 4 ಕೋಟಿ ರೂ. ವ್ಯಯಿಸಲಾಗುವುದು. ಇದರಿಂದ 21 ಲಕ್ಷ ಜನರಿಗೆ ಅನುಕೂಲವಾಗಲಿದೆ. ಆರೋಗ್ಯ ಇಲಾಖೆ 1.98 ಕೋಟಿ ರೂ. ನೀಡಿದರೆ, ಮಂಡಳಿಯು 2.2 ಕೋಟಿ ರೂ. ನೀಡಲಿದೆ. ಒಟ್ಟಾರೆ 4 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರಗಳು ಸ್ಥಾಪನೆಗೊಳ್ಳಲಿವೆ ಎಂದು ಡಾ. ಅಜಯಸಿಂಗ್ ಮಾಹಿತಿ ನೀಡಿದರು.
4 ಕೋಟಿ ರೂ.ಗಳಲ್ಲಿ 3.5 ಕೋಟಿ ರೂ. ಮೂಲಸೌಕರ್ಯಕ್ಕೆ ವ್ಯಯಿಸಿ, 50 ಲಕ್ಷ ರೂ.ಗಳನ್ನು ವೈದ್ಯಾಧಿಕಾರಿ, ಸಿಬ್ಬಂದಿಗಳ ವೇತನ ಮತ್ತು ಇತರೆ ವೆಚ್ಚಗಳಿಗೆ ಬಳಸಲಾಗುತ್ತದೆ. ಇದೇ ರೀತಿ 50 ಹೊಸ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗುವುದು ಎಂದರು.
ಯಡ್ರಾಮಿಯಲ್ಲಿ 100 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ತೆರೆಯಲಾಗುವುದು. ಹಣಕಾಸು ಇಲಾಖೆ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದರು.