ಸಿರಿಗೆರೆ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮತ್ತೆ ಕಲ್ಯಾಣ ಅಭಿಯಾನ ಆರಂಭಿಸಿದಾಗ ಹಲವಾರು ಅನುಮಾನಗಳು ಇದ್ದವು. ತಮ್ಮ ಪ್ರೌಢಿಮೆಯನ್ನು ಮರೆಯಲೊಸುಗ ರಾಜ್ಯದ ತುಂಬ ಸಂಚಾರ ಆರಂಭಿಸಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಹಲವಾರು ಖಾವಿಧಾರಿಗಳು ಪಂಡಿರಾಧ್ಯರಿಗೆ ಏನಾಗಿದೆ ? ಇಲ್ಲದೆ ಇರುವ ಕಡಿಯುವ ಹುಳವನ್ನು ತಮ್ಮೊಳಗೆ ಬಿಟ್ಟುಕೊಳ್ಳುತ್ತಿದ್ದಾರಲ್ಲ ! ಎಂದು ಒಳಗೊಳಗೆ ಅಂದುಕೊಂಡಿದ್ದರು. ವಿಚಾರವಾದಿಗಳ ಗುಂಪು ಇವರ ಜೊತೆ ಇದ್ದರೂ ಸದಾ ಅದು ಅದು ಸಕಾರಾತ್ಮಕ ಟೀಕೆ ಟಿಪ್ಪಣೆ ಮಾಡುತ್ತಲೆ ಅವರೊಂದಿಗೆ ಇತ್ತು. ಇದನ್ನು ಕಂಡ ಕೆಲವು ಜನ ಧಾರ್ಮಿಕ ಮುಖವಾಡ ಹೊತ್ತ ಗುಂಪುಗಳು ಪಂಡಿರಾಧ್ಯರು ನಿರಿಶ್ವರ ವಾದಿಗಳನ್ನು ಕಟ್ಟಿಕೊಂಡು ಅದೆಂತಹ ಕಲ್ಯಾಣ ಮಾಡಲು ಸಾಧ್ಯ ? ಎಂದು ಪ್ರಶ್ನಿಸಿದ್ದರು. ಆಹಾರ ಪ್ರಶ್ನೆಯನ್ನು ಬಹು ಹಗುರವಾಗಿ ಸ್ವೀಕರಿಸಿರುವ ಪಂಡಿತಾಧ್ಯರಿಗೆ ಮುಂದಿನ ಪಯಣ ಸುಖಕರವಾಗುವುದಿಲ್ಲ ಎಂಬ ಊಹೆ ಬಹಳ ಜನಕ್ಕೆ ಇತ್ತು.
ಆದರೆ ಇವೆಲ್ಲವುಗಳಿಗೂ ರಾಜ್ಯದ ತುಂಬೆಲ್ಲ ಸಂಚರಿಸಿ, ಸಂಚಲನ ಉಂಟು ಮಾಡಿದ ಮತ್ತೆ ಕಲ್ಯಾಣ ಉತ್ತರಗಳನ್ನು ಕೊಟ್ಟುಬಿಟ್ಟಿದೆ. ಪಂಡಿತಾರಾಧ್ಯರು ನಾನು ಬಲ್ಲಂತೆ ತುಂಬಾ ಕಟ್ಟು ನಿಟ್ಟಿನ ಮನುಷ್ಯರು. ಕಾಣಿಯಸೋಲ ಅರ್ಧಗಾಣಿಯ ಗೆಲ್ಲ ಎಂಬ ಜಾಯಮಾನದ, ನ್ಯಾಯ ನಿಷ್ಠುರಿಗಳು. ಲೋಕವಿರೋಧಿ ಶರಣ ಆರಿಗೂ ಅಚಿಲಾರ ಎಂಬ ವಚನದ ಮಾತನ್ನು ಬದುಕಾಗಿಸಿಕೊಂಡವರು ಎಂದು ಅವರ ಹಲವಾರು ಚಿಂತನಾತ್ಮಕ ಪುಸ್ತಕಗಳನ್ನು ಓದಿದ ನನಗೆ ಮನದಟ್ಟಾಗಿತ್ತು. ನಿಜವಾದ ಶರಣಾನುಭವಿ ಪ್ರಶ್ನೆಗಳಿಗೆ ಎದೆ ಕೊಟ್ಟು ಮುಂದೆ ಹೋಗುತ್ತಾನೆ ಹೊರತು, ಹಿಂದೆ ಸರಿಯುವುದಿಲ್ಲ ಎಂದು ನನಗೆ ಗೊತ್ತಿತ್ತು. ಅಂದಂತೆ ಪಂಡಿತಾರಾಧ್ಯರು ಆನೆ ನಡೆದುದೆ ದಾರಿ ಎಂಬಂತೆ ನಡೆದು ರಾಜ್ಯದ ಎಲ್ಲಾ ಚಿಂತನಶೀಲರಿಗೆ ಆ ದಾರಿಯನ್ನು ಮಾಡಿಕೊಟ್ಟಿದ್ದಾರೆ.
ಕರ್ನಾಟಕದ ಬಹುತೇಕ ಮಠಾಧೀಶರು ತಮ್ಮ ತಮ್ಮ ಪೀಠ ಪರಂಪರೆಯ ಹೆಸರಿನ ಮೇಲೆ ನಿರುಮ್ಮಳವಾಗಿ ಇದ್ದಾರೆ. ವರ್ಷಕ್ಕೊಂದು ಜಾತ್ರೆ, ಉತ್ಸವ, ಪಟ್ಟಾಭಿಷೇಕ, ಇತ್ಯಾದಿಗಳನ್ನು ಮಾಡುತ್ತಾರೆ. ಸಮಯ ಸಿಕ್ಕರೆ ಆಯಾ ಸಮುದಾಯದ ಭಕ್ತರ ಮನೆಗೆ ಹೋಗಿ ಅವರವರ ಸುಖ , ದುಃಖದಲ್ಲಿ ಪಾಲ್ಗೊಂಡು, ಅವರ ಅಂಗಡಿ ಮುಂಗಟ್ಟಿನ ಉದ್ಘಾಟನೆಗೆ ಹೋಗಿ ಬಂದರಂತೂ ಮುಗಿದೆ ಹೋಯಿತು. ತಿಂಗಳಿಗೊಂದು ಶಿವಾನುಭವ ಗೋಷ್ಠಿ ಅಂತ ಕರೆದು ಸುಳ್ಳೋ ಸೊಟ್ಟು ನಾಲ್ಕು ಮಾತಾಡಿ ಆಶೀರ್ವಚನ ಎಂದು ಹೇಳಿಬಿಟ್ಟರೆ ಆತನಂತಹ ಪ್ರಗತಿಪರ ಸ್ವಾಮಿ ಮತ್ತೊಬ್ಬರಿಲ್ಲ ಎಂಬ ಕಾಲ ಇದು.
ತಾಯಿಯ ಮೊಲೆ ಹಾಲೆ ನಂಜಾಗಿ ಕೊಲ್ಲುವ, ಏರಿಯೆ ನೀರನ್ನು ಕುಡಿಯುವ, ಮನೆಯೊಡತಿಯೆ ಮನೆಯಲ್ಲಿ ಕಳವು ಮಾಡುವಂಥಹ ಸಂದಿಗ್ಧ ಸಂದರ್ಭದಲ್ಲಿ ಸಾಣೆಹಳ್ಳಿಯ ರಂಗ ಜಂಗಮ, ಇಡೀ ರಾಜ್ಯದಲ್ಲಿ ಕಲ್ಯಾಣ ಶರಣರ ಕನಸುಗಳಿಗೆ ಪುನರಪಿ ನೆನಪು ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಧರ್ಮವೆಂದುಬುದು ಬಹು ಸೂಕ್ಷ್ಮವಾದುದು. ಯಾವ ಪ್ರಶ್ನೆಬೇಕಾದರೂ ಕೇಳಬಹುದು. ಆದರೆ ಧಾರ್ಮಿಕತೆಯ ಕುರಿತ ಪ್ರಶ್ನೆ ಕೇಳುವುದು ಸರಿಯಾದುದಲ್ಲ. ಗುರುಗಳಿಗೆ ಪ್ರಶ್ನೆ ಕೇಳುವುದೆ ಅಧರ್ಮ ಎಂಬ ಅಲಿಖಿತ ನಿಯಮವನ್ನು ಮುರಿದು ಹಾಕಿದ ಪಂಡಿತಾರಾಧ್ಯರು ನನ್ನನ್ನೂ ಪ್ರಶ್ನಿಸಬಹುದು ಎಂದು ತಮ್ಮನ್ನು ತಾವು ಪ್ರಶ್ನೆಗಳಿಗೆ ಒಡ್ಡಿಕೊಂಡು ಹೋದುದು ನಿಜಕ್ಕೂ ಶ್ಲಾಘನೀಯವಾದುದು.
ಲಿಂಗಾಯತ ಧರ್ಮದ ಮೂಲ ತಿರುಳೆ ಪ್ರಶ್ನಿಸುವಂಥದ್ದು. ಪ್ರಶ್ನೆಗಳಿಂದಲೆ ಸರಿಯಾದ ಉತ್ತರ ಸಿಗುತ್ತವೆ ಎಂಬ ವಾಗ್ವಾದ ಸಂಸ್ಕøತಿ ಬಸವಾದಿ ಶರಣರದು. ಬಸವಣ್ಣನವರು ಬಹುದೊಡ್ಡದಾದ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರನ್ನು ಸರಿಗಟ್ಟುವವರು ಯಾರೂ ಇರಲಿಲ್ಲ ಇದೆಲ್ಲ ನಿಜ. ಆದರೆ ಆ ಬಸವಣ್ಣನವರನ್ನು ಸಕಾರಣವಾಗಿ ಅಲ್ಲಗಳೆಯುವ ಸೌಹಾರ್ದಯುತವಾದ ವಾತಾವರಣ ಹನ್ನೆರಡನೆಯ ಶತಮಾನದಲ್ಲಿ ಇದ್ದದ್ದು ಸುಳ್ಳಲ್ಲ. ಬಸವಣ್ಣನವರು ತಮ್ಮ ಮಹಾಮನೆಯಲ್ಲಿ ಇಷ್ಟಲಿಂಗ ಪೂಜೆಯಲ್ಲಿ ತಲ್ಲೀನರಾಗಿರುವ ಸಂದರ್ಭದಲ್ಲಿ ಅಲ್ಲಿಗೆ ಅಲ್ಲಮಪ್ರಭುಗಳು ಬರುತ್ತಾರೆ. ಮಹಾಮನೆಗೆ ಬಂದ ಅಲ್ಲಮನನ್ನು ಗಮನಿಸದೆ ಇಷ್ಟಲಿಂಗ ಪೂಜೆಯಲ್ಲಿಯೆ ತಲ್ಲೀನನಾದ ಬಸವಣ್ಣನವರನ್ನು ಎಚ್ಚರಿಸಲು ಅಲ್ಲಮಪ್ರಭು :
ಜಂಗಮವೆ ಹೊರಗಿಲು ಲಿಂಗಾರ್ಚನೆ ಏವುದಯ್ಯಾ ?
ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ?
ಶರಣರು ಬಂದು ಬಾಗಿಲಲ್ಲಿ ನಿಂದಿರಲು
ತನ್ನ ತಾ ಮರೆದಿಪ್ಪವರ ಕಂಡಡೆ ನಮ್ಮ ಗುಹೇಶ್ವರ ಲಿಂಗ
ಒಡೆಯ ಹಾಯ್ಕದೆ ಮಾಣ್ಬನೆ ?
ಎಂದು ಬಸವಣ್ಣನವರನ್ನು ಎಚ್ಚರಿಸುವ ಮೂಲಕ ಸರಿಯಾದ ಮಾರ್ಗವನ್ನು ಬಸವ ತುಳಿಯಲು ಸಹಕರಿಸುತ್ತಾರೆ.ಪಂಡಿತಾಧ್ಯರು ಸಹ ಹಲವಾರು ಊರುಗಳಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಮ್ಮನ್ನು ಒಡ್ಡಿಕೊಂಡದ್ದರಿಂದ ಆ ಮಕ್ಕಳ ಪ್ರಶ್ನೆಗಳು ಅವರನ್ನು ಆತ್ಮವಲೋಕನಕ್ಕೆ ಹಚ್ಚಿವೆ. ಭಕ್ತ ಶ್ರೇಷ್ಠನೋ ? ಗುರು ಶ್ರೇಷ್ಠನೋ ? ಎಂಬ ಪ್ರಶ್ನೆಯ ಮೂಲಕ ಮಠಾಧೀಶರ ಅಸ್ತಿತ್ವವನ್ನೆ ಅಲುಗಾಡಿಸಿ ಬಿಡುತ್ತದೆ. ಬಸವಣ್ಣನವರು ಕಟ್ಟಿದ್ದು ಗುಡಿ ಸಂಸ್ಕøತಿ ಅಲ್ಲವಾದರೆ ಲಿಂಗಾಯತರು ಗುಡಿ ಸಂಸ್ಕøತಿಯತ್ತ ತಿರುಗಿದ್ದು ಏಕೆ ? ಎಂಬ ಪ್ರಶ್ನೆಗೆ ಉತ್ತರವಾಗಿ ಐತಿಹಾಸಿಕ ಸತ್ಯವನ್ನು ಮತ್ತೆ ಮತ್ತೆ ಮಕ್ಕಳಿಗೆ ಮನದಟ್ಟು ಮಾಡಿದಂತಾಗಿದೆ. ಕಾವಿಧರಿಸಿದವರೆಲ್ಲರೂ ಗುರುಗಳೆ ? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಕೊಂಡ ಮಕ್ಕಳ ಮನಸ್ಸು ನಿಜಕ್ಕೂ ಅರಳಿದ್ದನ್ನು ನಾನು ಕಂಡಿದ್ದೇನೆ. ಧರ್ಮವೆಂದರೆ ಕಟ್ಟು ಪಾಡು, ಧರ್ಮವೆಂದರೆ ಬರಿ ಆಚರಣೆ ನಂಬಿಕೆಗಳು ಎಂದು ನಂಬಿಸಿದವರ ಬುಡಕ್ಕೆ ಕೊಡಲಿ ಏಟುಕೊಡುವಂಥ ಪ್ರಶ್ನೆಗಳು ನೂರಾರು ಎದ್ದಿವೆ. ಎಲ್ಲವುಗಳಿಗೂ ಪಂಡಿತಾರಾಧ್ಯರು ಹಾಗೂ ಅಲ್ಲಲ್ಲಿಯ ವಚನ ಚಿಂತಕರು ಸಪರ್ಮಕವಾದ ಉತ್ತರ ನೀಡಿದ್ದಾರೆ.
ಧರ್ಮ ಮತ್ತು ಆಧ್ಯಾತ್ಮ ಮಕ್ಕಳಿಗೆ ಅಲ್ಲ. ಅದೆಲ್ಲ ವಯಸ್ಸಾದವರ ಸೊತ್ತು ಎಂಬ ನಂಬಿಕೆ ಜನ ಜನಿತವಾಗಿರುವ ಸಂದರ್ಭದಲ್ಲಿ ಧರ್ಮದ ತಳಹದಿಯ ಮೇಲೆಯೆ ಬಸವಣ್ಣನವರು ಅಂದು ಕಲ್ಯಾಣದಲ್ಲಿ ಕಟ್ಟಿದ್ದ ರಾಜ್ಯವನ್ನು ಮತ್ತೊಮ್ಮೆ ನೆನಪಿಸಿಕೊಡುವುದನ್ನು ಮತ್ತೆ ಕಲ್ಯಾಣ ಮಾಡಿತು. ಕೆಲವು ಕಡೆ ವೇದಿಕೆಯ ಮೇಲೆ ಅವರು ಭಾಗವಹಿಸಬಾರದಿತ್ತು, ಇವರು ಇರಬಾರದಿತ್ತು ಎಂಬ ಅಪಸ್ಪರಗಳು ಎಲ್ಲರನ್ನು ತಬ್ಬಿಕೊಳ್ಳಲು ಹೇಳಿದ ಶರಣರ ಆಶಯಕ್ಕೆ ವಿರುದ್ಧವಾದುದಾಗಿತ್ತು.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದಿನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ
ಪಾಪ ಕರ್ಮಗಳನ್ನು ಮಾಡಿದವರಿಗೆ ಸ್ವಾಗತಿಸಿ ಅವರನ್ನು ಮತ್ತೆ ಮತ್ತೆ ಸ್ವಾಗತಿಸಿದ ಬಸವ ಚಿಂತನೆಗಳಿರುವಾಗ ಯಾರೂ ವಜ್ರ್ಯವಾಗಲಿಲ್ಲ. ಎಲ್ಲರನ್ನೂ ಸ್ವಾಗತಿಸಿದರು. ಅವರು ಮಾತುಗಳಲ್ಲಿ ಸರಿಯಿಲ್ಲದಿರುವುದು ಗುರುತಿಸಿ ಅದೆ ವೇದಿಕೆಯ ಮೇಲೆ ಅವರಿಗೆ ಸರಿಯಾದ ಉತ್ತರ ಕೊಟ್ಟರು. ಚಿಕ್ಕಮಗಳೂರಿನ ಸಭೆಯಲ್ಲಿ ಸಿ.ಟಿ. ರವಿ ನೀಡಿದ ದೀರ್ಘ ಉದಾಹರಣೆಗೆ ಪಂಡಿತಾರಾಧ್ಯರು ಚುಟುಕಾಗಿಯಾದರೂ ಸ್ಪಷ್ಟವಾಗಿ ಉತ್ತರ ನೀಡಿದರು.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ
ನೋಡಯ್ಯಾ, ಮಹಾದಾನಿ ಕೂಡಲಸಂಗಮದೇವಾ
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ
ಎಂದು ವಚನ ಕಣ್ಮುಂದೆ ಇಟ್ಟಾಗ ಯಾರೂ ತುಟಿ ಎರಡು ಮಾಡಲಿಲ್ಲ. ಆಹಾರದ ಪ್ರಶ್ನೆ ಎದುರಾದಾಗಲೂ ಅಷ್ಟೆ : ಶರಣರು ಇಂತಿಂಥ ಆಹಾರ ಊಟ ಮಾಡಬಾರದು, ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಆಹಾರವೆಂಬುದು ವೈಯಕ್ತಿಕವಾದ ವಿಚಾರ ಎಂದು ಸ್ಪಷ್ಟ ಪಡಿಸಿದಾಗ ಹಲವರು ಹುಬ್ಬೇರಿಸಿದರು. ಕೆಲವರು ಗೊಣಗಿದರು. ವಾಸ್ತವವಾದಿಯಾದ ಶರಣರು ಮಾತ್ರ.
ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ
ನೀವು ಕೇಳಿರೆ, ಮದ್ಯವಲ್ಲವೆನು ಅಷ್ಟ ಮದಂಗಳು ?
ಮಾಂಸವಲ್ಲವೇನು ಸಂಸಾರ ಸಂಗ ?
ಈ ಉಭಯವನತಿಗಳದಾತನೆ, ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು
ವಚನವನ್ನು ಕನ್ನಡಿಯಾಗಿ ಇಟ್ಟಾಗ ಆಹಾರದ ಕೂಗು ಯಾವ ಗೊಂದಲವನ್ನು ಉಂಟು ಮಾಡಲಿಲ್ಲ. ರಾಜ್ಯದ ಎಲ್ಲಾ ಕಡೆಗೆ ಬಂದಿರುವ ಒಂದೆ ಒಂದು ಸಾಮಾನ್ಯ ಪ್ರಶ್ನೆ ಎಂದರೆ ಮೀಸಲಾತಿಯ ಕುರಿತಾದುದು. ಎಲ್ಲಿಯವರೆಗೆ ಈ ರಾಷ್ಟ್ರದಲ್ಲಿ ಜಾತಿಬೇಧ- ಪಂಕ್ತಿಬೇಧ, ಅಸ್ಪøಶ್ಯತೆ ಇರುತ್ತದೊ ಅಲ್ಲಿಯವರೆಗೆ ಮೀಸಲಾತಿ ತೆಗೆಯುವ ಪ್ರಶ್ನೆ ಉದ್ಭವಾಗದು ಎಂದು ಹೇಳಿದಾಗಲೂ ಸಮಾಧಾನವಾಗಲಿಲ್ಲ. ಆಗ ಅಂಕಿ ಅಂಶಗಳ ಪ್ರಕಾರ ಯಾವ ಯಾವ ಜಾತಿ ಮತ ಧರ್ಮಗಳಿಗೆ ಮೀಸಲಾತಿ ಸಿಕ್ಕಿದೆ ಎಂದು ಖುಲ್ಲಂಖುಲ್ಲಾ ಬಿಚ್ಚಿ ಹೇಳಿದಾಗ ಬೆಚ್ಚಿ ಬೀಳುವ ಸರದಿ ಕೇಳಿದವರಿಗೆ.
ಮಠಾಧೀಶರ ತಾಕತ್ತು, ವ್ಯಕ್ತಿತ್ವ ಇರುವುದೆ ಮಠೀಯ ಅಥವಾ ಸ್ಥಾವರ ವ್ಯವಸ್ಥೆಯಲ್ಲಿ. ಶರಣರ ವಿಚಾರಧಾರೆ ಸ್ಥಾವರಕ್ಕೆ ಎಂದಿಗೂ ವಿರೋಧ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬುದು ಅವರ ಚಿಂತನೆಯ ಗಟ್ಟಿಯಾದ ನಿಲುವು. ದೇವರ ಹಾಗೂ ಮೂಢನಂಬಿಕೆಯ ವಿರುದ್ಧವಾದ ನಿಲುವುಗಳನ್ನು ಪ್ರಕಟಪಡಿಸಲು ವಿವೇಚನೆ ತುಂಬಾ ಅಗತ್ಯವಾದುದು. ಆತ್ಮ ಪರಮಾತ್ಮ, ಸ್ವರ್ಗ- ನರಕ- ಮುಕ್ತಿ ಪದಗಳಿಗೆ ಶರಣರ ವಿಚಾರದ ಕನ್ನಡಿ ಹಿಡಿದಾಗ ಎಲ್ಲ ವಿದ್ಯಾರ್ಥಿಗಳು ತಬ್ಬಿಬ್ಬು. ಕರಿದಾರ ಚೀಟಿ ಕಟ್ಟುವುದು, ಮಂತ್ರಿಸಿ ತಾಯಿತ ಕಟ್ಟಿಕೊಳ್ಳುವುದು ಮೌಢ್ಯವೆಂದು ಸ್ಪಷ್ಟಪಡಿಸಿದ ಮೇಲೆ ಹಲವಾರು ವಿದ್ಯಾರ್ಥಿಗಳು ನಿರುಮ್ಮಳರಾದರು.
ಲಿಂಗವ ಪೂಜಿಸಿ ಫಲವೇನಯ್ಯಾ
ಸಮರತಿ, ಸಮಕಳೆ, ಸಮ ಸುಖವನರಿದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ
ನದಿ ಬೆರೆಸಿದಂತಾಗದನ್ನಕ್ಕ !
ಹೆಣ್ಣು ಗಂಡು ಬೇಧ, ಬಡವ ಬಲ್ಲಿದ ಬೇಧ, ಕಾಯಕದಲ್ಲಿ ಮೇಲೆ ಕೀಳು ಎಂಬ ಬೇಧ ಸಂಸ್ಕøತಿ ಲಿಂಗಾಯತರದ್ದಲ್ಲ , ಎಂದು ಹೇಳಿದ್ದು ಅವರವರ ಅರಿವಿನ ಕಣ್ಣು ತೆರೆಸಿತು.
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡು ಹಿಡಿದಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು
ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನು
ಎಂಬ ವಚನಕಾರ್ತಿ ಗೊಗ್ಗವ್ವೆಯ ಮಾತು ಹೆಣ್ಣು ಗಂಡಿನ ನಡುವೆ ಸತನಾತನ ಪರಂಪರೆ ನಡೆಸಿಕೊಂಡು ಬಂದ ಬೇಧ ಪರಂಪರೆಯ ಬೇರುಗಳನ್ನು ಕಿತ್ತಿ ಹಾಕಿತು. ಮತ್ತೆ ಕಲ್ಯಾಣದ ನೆಪದಲ್ಲಿ ಸಹಸ್ರಾರು ಜನ ಸಾಮೂಹಿಕವಾಗಿ ವಚನಕಾರರ ನಿಲವುಗಳನ್ನು ಅರಿತುಕೊಳ್ಳಲು ಸಹಾಯಕವಾಯಿತು. ವಚನಗಳು ಕೇವಲ ಲಿಂಗಾಯತ ಧರ್ಮದ ಸ್ವತ್ತಲ್ಲ ಎಂದು ಮನದಟ್ಟಾಯಿತು. ಮೂಲತಃ ಲಿಂಗಾಯವೆಂಬುದೆ ಒಂದು ಸಂಕರಗೊಂಡ ಕುಲ ಎಂದು ಸ್ಪಷ್ಟವಾಗಿ ತಳ ಸಮೂಹಗಳು ಮತ್ತೆ ಕಲ್ಯಾಣದತ್ತ ಅಡಿ ಇಟ್ಟವು.
ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ, ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು
ಅಲಂಕರಿಸಿದೆಯಾದಡೆ ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ
ಮಕ್ಕಳ ಬೌದ್ಧಿಕ ಚಟುವಟಿಕೆ ಆರಂಭಗೊಳ್ಳುತ್ತದೆ. ಜೀವನವೆನ್ನುವುದು ನಿಗೂಢವಾದುದು. ಶಿವಪಾರ್ವತಿ, ಗಣಪತಿ, ವಿಷ್ಣು ,ಮಹೇಶ, ರುದ್ರ ಇತ್ಯಾದಿ ದೇವರುಗಳು ಮೇಲೆ ಸ್ವರ್ಗದಲ್ಲಿ ಕುಳಿತು ಕಂಟ್ರೋಲ್ ಮಾಡುತ್ತಾರೆ ಎಂಬುದೆ ಹಾಸ್ಯಾಸ್ಪದ ಎಂಬ ಅರಿವು ಕನಸಿನ ದಾರಿಗೆ ನಮ್ಮನ್ನು ಎಳೆದೊಯ್ಯುತ್ತದೆ. ಇಡಿ ಒಂದು ತಿಂಗಳ ಪರ್ಯಂತ ಮಕ್ಕಳೊಂದಿಗೆ ಸಂವಾದ, ಅತ್ಯುತ್ತಮವಾದ ಚಿಂತನೆಗಳು, ಸಾಮರಸ್ಯದ ನಡಿಗೆಗಳು ಕನ್ನಡ ನಾಡು ಕಟ್ಟುವಲ್ಲಿ ಯಶಸ್ವಿಯಾದ ಪ್ರಯೋಗಗಳು.
ಮೊಟ್ಟ ಮೊದಲಿಗೆ ಮತ್ತೆ ಕಲ್ಯಾಣದ ಕುರಿತು ಪಂಡಿತಾರಾಧ್ಯರು ಹೆಜ್ಜೆ ಇಟ್ಟಿದ್ದಾರಾದರೂ ಈಗ ಸಾವಿರಾರು ಜನ ಯುವ ಮನಸ್ಸುಗಳು ಅವರೊಂದಿಗೆ ಹೆಜ್ಜೆ ಹಾಕಲು ಪ್ರೇರೇಪಣೆ ಹೊಂದಿದ್ದಾರೆ. ರಾಜ್ಯದ ತುಂಬೆಲ್ಲ ಈಗಾಗಲೆ ಮತ್ತೆ ಕಲ್ಯಾಣದ ಸಮಿತಿಗಳಿವೆ. ನೂರಾರು ಜನ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ವಚನ ಸಾಹಿತ್ಯದ ಕಡೆಗೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಮತ್ತೆ ಕಲ್ಯಾಣ, ನಿತ್ಯ ಕಲ್ಯಾಣವಾಗಬೇಕು, ಕ್ಷಣ ಕ್ಷಣಕ್ಕೂ ವಚನಗಳ ಆಶಯ ನಮ್ಮನ್ನು ತಟ್ಟಬೇಕು. ನಮ್ಮನ್ನು ಮುಟ್ಟಬೇಕು. ಆಗಲೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬ ಮಾತು ಮನದಟ್ಟಾಗುತ್ತಿದೆ.
ಶಿವಶರಣರ ಮೋಳಿಗೆಯ ಮಾರಯ್ಯನ ನಾಟಕ ಶರಣ ಚರಿತಾಮೃತದ ಸವಿಯನ್ನು ಉಣಬಡಿಸಿದೆ. ಸಾಣೆಹಳ್ಳಿಯ ಪಂಡಿತಾರಾಧ್ಯರು ತಮ್ಮ ಮಠವನ್ನು ಬಿಟ್ಟು ಜಂಗಮರಾಗಿ ನಮ್ಮೆಡೆಗೆ ಬಂದಿದ್ದಾರೆ. ಜಂಗಮ ತತ್ವವನ್ನು ನಾಡಿನ ಪ್ರಜ್ಞಾವಂತರು ಮತ್ತೆ ಮತ್ತೆ ಕಲ್ಯಾಣವನ್ನು ಅವರವರೆ ಮಾಡಿ ನಿತ್ಯ ಕಲ್ಯಾಣಕ್ಕೆ ಮಾರ್ಗ ಹಾಕಬೇಕಾಗಿದೆ.