ಕಲಬುರಗಿ: ಲಿಂಗೈಕ್ಯ ತೋಂಟದ ಸಿದ್ದಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ನಾಲ್ಕು ದಶಕಗಳ ಕಾಲ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಶ್ರೀಮಠಕ್ಕಾಗಿ ಅವಿರತ ಸೇವೆ ಸಲ್ಲಿಸಿದ ತೋಂಟದಾರ್ಯ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಶಿವಾನಂದ ಪಟ್ಟಣಶೆಟ್ಟರದ್ದು ಸಾರ್ಥಕ ಸೇವೆಯಾಗಿದೆ ಎಂದು ಪ್ರಭಾಕರ ಕೋರೆ ಶ್ಲಾಘಿಸಿ ಅವರನ್ನು ಸನ್ಮಾನಿಸಿದರು.
ಅವರು ನಗರದ ಕೆ.ಎಲ್.ಇ ಯ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿ, ಗದುಗಿನ ಜೆ.ಟಿ. ಕಾಲೇಜು ನಮ್ಮ ಕೆ.ಎಲ್.ಇ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ 35 ಎಕರೆ ವಿಶಾಲವಾದ ಜಮೀನು ಹಾಗೂ ಭವ್ಯ ಕಟ್ಟಡಗಳನ್ನು ಹೊಂದಿದ ವಿಶೇಷ
ಕಾಲೇಜು ಆಗಿದೆ.
ಈ ಕಾಲೇಜು ಬೆಳವಣಿಗೆಗೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಕೂಡ ಕಾರಣವಾಗಿದೆ. ಶ್ರೀಗಳ ಅಪೇಕ್ಷೆಯಂತೆ ಗದುಗಿನಲ್ಲಿ ಕೆ.ಎಲ್.ಇ ಸಂಸ್ಥೆಯಿಂದ ಅಕ್ಕಮಹಾದೇವಿ ಮಹಿಳಾ ಕಾಲೇಜನ್ನು ಪ್ರಾರಂಭಿಸಲಾಯಿತು. ಅದಕ್ಕೆ ಪ್ರತ್ಯೇಕ ಜಮೀನು ಲಭ್ಯವಾಗದ ಕಾರಣ ಆ ಕಾಲೇಜನ್ನು ಕೋ-ಎಜುಕೇಶನ್ ಕಾಲೇಜನ್ನಾಗಿ ಪರಿವರ್ತಿಸಿದ ಇತಿಹಾಸ ಪಟ್ಟಣಶೆಟ್ಟರಿಗೆ ಗೊತ್ತಿರುವ ಸಂಗತಿ ಎಂದು ನೆನಪಿಸಿಕೊಂಡರು.
ಹಿಮಾಲಯ ಸದೃಶ ವ್ಯಕ್ತಿತ್ವ ಹೊಂದಿದ್ದ ತೋಂಟದ ಸಿದ್ದಲಿಂಗ ಶ್ರೀಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ಹಾನಿ ಉಂಟಾಗಿದೆ. ಶ್ರೀಗಳು ಕನ್ನಡ ನಾಡು – ನುಡಿ ಹಾಗೂ ಸಾಹಿತ್ಯ , ಪುಸ್ತಕ ಸಂಸ್ಕೃತಿ ಮತ್ತು ಶೈಕ್ಷಣಿಕ ರಂಗದಲ್ಲಿ ಶ್ರೇಷ್ಟ ಸಾಧನೆ ಮಾಡಿದ್ದಾರೆ. ಜಗದ್ಗುರು ತೋಂಟದಾರ್ಯ ಮಠದ ಹೆಸರನ್ನು ಬಾನೆತ್ತರಕ್ಕೆ ಬೆಳೆಸಿದ ಪೂಜ್ಯರ ಸ್ಮರಣೆಗಾಗಿ ಜಗದ್ಗುರು ತೋಂಟದಾರ್ಯ ಮಠದವರು ಅಥವಾ ಭಕ್ತರು ಗದಗ ಇಲ್ಲವೇ ಕುಕನೂರಿನಲ್ಲಿ ಜಮೀನು ದಾನ ನೀಡಿದರೆ ಪೂಜ್ಯರ ಹೆಸರಿನಲ್ಲಿ ಕೆ.ಎಲ್.ಇ ಸಂಸ್ಥೆ ವತಿಯಿಂದ ಕಾಲೇಜು ಪ್ರಾರಂಭಿಸಲಾಗುವುದು ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಪ್ರಭಾಕರ ಕೋರೆ ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಚ್. ವೈ ದೇಸಾಯಿಗೌಡರ ಗದಗ ನಗರದಲ್ಲಿ ಸುಸಜ್ಜಿತ ವಸತಿ ಶಾಲೆಯನ್ನು ನಿರ್ಮಿಸುವಂತೆ, ಎಸ್.ಎಸ್ ಪಟ್ಟಣಶೆಟ್ಟರು ಕೆ.ಎಲ್.ಇ ಸಂಸ್ಥೆಯಿಂದ ವಿವಿಧ ವಿಷಯಗಳ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವಂತೆ ಮತ್ತು ಡಾ.ಪವಾಡಶೆಟ್ಟರು ಗದಗ ನಗರದಲ್ಲಿ ಇನ್ನೊಂದು ಸುಸಜ್ಜಿತ ಪದವಿ ಪೂರ್ವ ವಿಜ್ಞಾನ ಕಾಲೇಜನ್ನು ಪ್ರಾರಂಭಿಸಲು ಪ್ರಭಾಕರ ಕೋರೆಯವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಎಲ್ಲ ಸದಸ್ಯರು, ಚೇಂಬರ್ ಆಫ್ ಕಾಮರ್ಸ ಪದಾಧಿಕಾರಿಗಳು ಹಾಗೂ ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಕಾಲೇಜುಗಳ ಪ್ರಾಚಾರ್ಯರು ಮತ್ತು ಸ್ಥಾನಿಕ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.