ಕಲಬುರಗಿ: ವಿದ್ಯಾರ್ಥಿಗಳು ಹೊಸ ವರ್ಷದಲ್ಲಿ ಹೊಸ ಸಂಕಲ್ಪ, ಕನಸಿನೊಂದಿಗೆ ಗುರಿ ಸಾಧಿಸಲು ನಿರಂತರ ಪರಿಶ್ರಮಪಟ್ಟು ಕನಸು ನನಸಾಗಿಸಿಕೊಳ್ಳಬೇಕು ಎಂದು ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯ ಎಂ.ಎನ್. ದೇಸಾಯಿ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ 2024ರ ವರ್ಷದ ಕ್ಯಾಲೆಂಡರ್, ಉದ್ಯೋಗ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಿಂದಲೇ ಉನ್ನತ ಗುರಿ ಇಟ್ಟುಕೊಂಡು ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಕಲಿತ ವಿದ್ಯಾಸಂಸ್ಥೆ, ಹೆತ್ತವರು ಮತ್ತು ಗುರುಗಳ ಹೆಸರು ತರುವಂತಾಗಬೇಕು. ಬದುಕು ಒಂದು ಪುಸ್ತಕವಿದ್ದಂತೆ, ವರ್ಷ ಉರುಳುತ್ತಿದ್ದಂತೆ ಒಂದು ಅಧ್ಯಾಯದ ಮುಗಿಸಿದಂತೆ ಎಂದ ಅವರು, ಸಮಯದ ಸದುಪಯೋಗ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.
ಉದ್ಘಾಟಿಸಿದ ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಬೈರಪ್ಪ, ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆದು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಈ ಕಾಲೇಜಿನ ಆಡಳಿತಾತ್ಮಕ ವಿಷಯಗಳು, ಸಮಸ್ಯೆಗಳಿಗೆ ಸ್ಪಂದಿಸಿ ನೆರವಿಗೆ ಬರುವುದಾಗಿ ಅಶ್ವಾಸನೆ ನೀಡಿದರು.
ಹಿರಿಯ ಪ್ರಾಧ್ಯಾಪಕ ಪ್ರೊ. ವಿ.ಎಂ. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಉನ್ನತ ಹುದ್ದೆಗಿಟ್ಟಿಸಿಕೊಂಡು ಉಜ್ವಲ ಬದುಕು ಕಟ್ಟಿಕೊಳ್ಳಬೇಕು. ಬ್ಯಾಂಕ್‍ಗಳಲ್ಲಿ ಕೆಲಸ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಒಳ್ಳೆಯ ಚಾಣಾಕ್ಷತೆ ಮೈಗೂಡಿಸಿಕೊಳ್ಳಬೇಕು. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ ಉನ್ನತ ಕೊಡುಗೆ ಕೊಡುವಂತರಾಗಬೇಕು ಎಂದು ತಿಳಿಹೇಳಿದರು.
ಕಾಲೇಜಿನ ಕಾರ್ಯದರ್ಶಿ ಜಗನ್ನಾಥ ನಾಗೂರ್ ಅಧ್ಯಕ್ಷತೆವಹಿಸಿದ್ದರು. ಶಿಕ್ಷಣ ಪ್ರೇಮಿ ವಿಜಯಲಕ್ಷ್ಮೀ ದೇಸಾಯಿ, ಎಕ್ಸಿಸ್ ಬ್ಯಾಂಕ್‍ನ ಅಧಿಕಾರಿ ಶ್ರೀನಿಧಿ ದೇಸಾಯಿ, ಎನ್‍ಎಸ್‍ಎಸ್ ಅಧಿಕಾರಿ ಮಂಜುನಾಥ ಬನ್ನೂರ್, ನಾಗರಾಜ ಪಟ್ಟಣಕರ್, ಆನಂದತೀರ್ಥ ಜೋಶಿ, ಅಂಬಿಕಾ ಕರಣಿಕ, ರಾಧಿಕಾ ಗುತ್ತೇದಾರ್ ಮತ್ತಿತರರಿದ್ದರು. ಮಹೇಶ ತೆಗ್ಗಳ್ಳಿ ಸ್ವಾಗತಿಸಿದರು. ಉಪನ್ಯಾಸಕ ಡಿ.ಪಿ. ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ರಡ್ಡಿ ನಿರೂಪಿಸಿದರು. ಸಂಧ್ಯಾರಾಣಿ ವಂದಿಸಿದರು.