ಪ್ರಶಸ್ತಿ- ಪದವಿಗಳು ನೀವಲ್ಲ, ಎಂಬುದು ನೆನಪಿರಲಿ

0
404

ಯಾರೊಬ್ಬರೂ ಪ್ರಶಸ್ತಿ ಪದವಿಗಳಿಂದ ದೊಡ್ಡವರಾಗುವುದಿಲ್ಲ.‌ ಪದವಿ ಪ್ರಶಸ್ತಿಗಳು ನಮ್ಮ ಬೆಳವಣಿಗಾಗಿ ನೀಡುವ ಪಾರಿತೋಷಗಳೆ ಹೊರತು ಇನ್ನೇನು ಅಲ್ಲ. ವ್ಯಕ್ತಿಯ ಘನತೆ ಗೌರವಗಳು ಕ್ಷಣ ಕಾಲ ಪದವಿ- ಪ್ರಶಸ್ತಿಗಳು ತೋರಬಹುದು.‌ಆದರೆ ಪರೀಕ್ಷೆಗೆ ಒಳಪಟ್ಟಾಗ ಯೋಗ್ಯತೆ ಪ್ರದರ್ಶನವಾದಾಗ ವ್ಯಕ್ತಿ ತನ್ನ ಇದ್ದ ಮೌಲ್ಯವನ್ನು ಕಳಕೊಳ್ಳಬೇಕಾಗುತ್ತದೆ.

ಜೀವನವೆನ್ನು ಸುಖ ಸಂತೋಷದಿಂದ ಬಾಳುವುದಕ್ಕೆ ಹೊರತು ಪ್ರಶಸ್ತಿಗಳಿಗಾಗಿ ಅಲ್ಲ. ನೀವು ಮಾಡುವ ಕಾರ್ಯ ನಿಮಗೆ ಖುಷಿ ಕೊಡುತ್ತಿದ್ದರೆ, ಆ ಕೆಲಸದಲ್ಲಿ ನಿಮ್ಮನ್ನೇ ನೀವು ಮರೆತು ಒಂದಾಗುತ್ತಿದ್ದರೆ ಇದಕ್ಕಿಂತ ಮತ್ತೊಂದು ಪ್ರಶಸ್ತಿ ಅನಗತ್ಯ.

Contact Your\'s Advertisement; 9902492681

“ಮಾಡುವಂತಿರಬೇಕು ಮಾಡದಂತಿರಬೇಕು. ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು” ಎಂಬ ತಾಧ್ಯಾತ್ಮ ಬೆಳೆಸಿಕೊಂಡೆ ನೀವು ಗೆಲುವಿನ ಸೋಪಾನವನ್ನು ಸುಲಭವಾಗಿ ಏರಬಲ್ಲಿರಿ. ಕಷ್ಟದ ಹೆಜ್ಜೆಗಳನ್ನು ಇಟ್ಟು ಸಾಧಿಸದೆ ಪಡೆದ ಗೆಲುವು ಕ್ಷಣಿಕ ಸುಖವನ್ನು ನೀಡುತ್ತದೆ. ನಿಮ್ಮದೆ ಪರಿಶ್ರಮದ ಮೂಲಕ ಪಡೆದ ಯಶಸ್ಸು ನೀಡುವ ಆನಂದ ಯಾವ ಪ್ರಶಸ್ತಿಗಳೂ ನೀಡುವುದಿಲ್ಲ.

ಪದವಿ ಪ್ರಶಸ್ತಿಗಳ ಹಿಂದೆ ನಾವು ಬೆನ್ನು ಹತ್ತಬಾರದು. ಅದು ನಮ್ಮ ಗುರಿಯೂ ಆಗಬಾರದು. ನಮ್ಮ ವ್ಯಕ್ತಿತ್ವವೇ ಒಂದು ಪದವಿಯಾಗಬೇಕು, ಪ್ರಶಸ್ತಿಯಾಗಬೇಕು. ಹಲವರು ಪ್ರಶಸ್ತಿಗಳನ್ನು ದುಂಬಾಲು ಬಿದ್ದು ಪಡಕೊಳ್ಳುತ್ತಾರೆ.ಅದಕ್ಕಾಗಿ ಲಾಭಿ ಮಾಡುತ್ತಾರೆ. ಕೆಲವರಿಗೆ ಪ್ರಶಸ್ತಿಗಳೆ ಬೆನ್ನು ಹತ್ತುತ್ತವೆ. ಆಗಲೂ ಅವನ್ನು ಉಪೇಕ್ಷಿಸಿ ಮುನ್ನಡೆಯುತ್ತಾರೆ. ಆಗಲೂ ಆ ಪ್ರಶಸ್ತಿ ಪದವಿಗಳು ಅವರ ವ್ಯಕ್ತಿತ್ವದ ಮುಂದೆ ಮಂಡಿಯೂರಿ ನಿಲ್ಲುತ್ತವೆ. ವ್ಯಕ್ತಿಯಿಂದ ಪ್ರಶಸ್ತಿ- ಪದವಿಗೆ ಬೆಲೆ ಬರುವಂತಾಗಬೇಕೆ ಹೊರತು ,ಪದವಿ- ಪ್ರಶಸ್ತಿಗಳಿಂದ ವ್ಯಕ್ತಿಗೆ ಬೆಲೆ ಬರುವಂತಾಗಬಾರದು.

ನಮ್ಮ ನಾಡಿನ ಶ್ರೇಷ್ಠ ಚಿಂತಕ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರಿಗೆ ಯಾವ ಪ್ರಶಸ್ತಿಯ ಗರಿಯೂ ಇರಲಿಲ್ಲ. ಕನ್ನಡ ದೈತ್ಯ ಪತ್ರಕರ್ತ, ಚಿಂತಕ ಪಿ.ಲಂಕೇಶ್ ರಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆಕಾಡೆಮಿಗಳ ಪ್ರಶಸ್ತಿಯೂ ದೊರೆಯಲಿಲ್ಲ. ಪೂರ್ಣಚಂದ್ರ ತೇಜಸ್ವಿಯವರಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು. ಆಗಲೂ ಅವರು ಉಬ್ಬಿ ಹೋಗಲಿಲ್ಲ. ಅದನ್ನು ಪ್ರದರ್ಶನಕ್ಕೆ ಇಟ್ಟುಕೊಳ್ಳಲಿಲ್ಲ. ನಮ್ಮ ನಡುವೆ ಇಂದಿಗೂ ಇರುವ ದೇವನೂರ ಮಹಾದೇವ ಅವರಿಗೆ ಹುಡುಕಿಕೊಂಡು ಬಂದ ಅವಕಾಶಗಳು ಎಷ್ಟೋ. ಆ ಅವಕಾಶಗಳ ಬೆನ್ನು ಬೀಳದ ನಿರ್ಲಿಪ್ತವಾದ ಬದುಕು ಅವರದು. ಪ್ರಶಸ್ತಿ ಪದವಿಗಳೆ ಇಲ್ಲ ಎಂದು ದೇವನೂರರನ್ನು ಕಡೆಗಣಿಸಲು ಸಾಧ್ಯವೆ ?

ಯಾರಿಂದಲೋ ಪಡೆಯುವ ಪ್ರಶಸ್ತಿ ತಾನಾಗಿಯೆ ಆಯಾಚಿತವಾಗಿ ದೊರೆತರೆ ಜವಾಬ್ದಾರಿಯದೆಂದೆ ಸ್ವೀಕರಿಸಬೇಕು. ಅಹಂಕಾರದಿಂದ ಪದವಿಗಳ ತಲೆಗೆ ಏರಿಸಿಕೊಂಡರೆ ವಿಷವನ್ನು ಕುಡಿದಂತೆ ಆಗುತ್ತದೆ ಅಷ್ಟೆ. ಆದ್ದರಿಂದಲೆ ಬಸವಾದಿ ಶರಣರು ಇಂಥ ಪದವಿ ಪ್ರಶಸ್ತಿಗಳಿಂದ ಬಹುದೂರ ನಡೆದು ಹೋದರು.

ಶರಣರ – ಚಿಂತಕರ- ಸಮಾಜ ಪರಿವರ್ತಕರ – ಹೋರಾಟಗಾರರ ದಾರಿ ನಮಗೆ ಹೆದ್ದಾರಿಯಾಗಬೇಕು. ಆಗಲೇ ನಮ್ಮ ಬದುಕಿಗೆ ಅರ್ಥ ಬರುತ್ತದೆ. ಅಹಂಕಾರವಳಿದು ನಿರಂಹಕಾರಿಗಳಾಗಿ ಬದುಕು ನಡೆಸಿದಲ್ಲಿ ಸುಂದರವಾದ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಆಗ ಸಮಾಜದ ಇಂದಿನ ಪ್ರಶಸ್ತಿ- ಪದವಿಗಳೆಂಬ ಕೀರಿಟಗಳು ಕೆಳಕ್ಕೆ ಉರುಳಿ ಬೀಳುತ್ತವೆ. ಭ್ರಮೆಗಳು ಕಳಚಿ ಹೋಗುತ್ತವೆ.

ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ. ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ. ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಗಜೇಶ್ವರದೇವಾ, ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.

ಶರಣ ಗಜೇಶ ಮಸಣ್ಣಯ್ಯಗಳ ಗುರಿ ನಮ್ಮೆಲ್ಲರ ಗುರಿಯಾಗಬೇಕು. ಸತ್ಯವನ್ನು ಅರಿತು ನಡೆಯುವ ಪರಮ ಪದವಿ ಎಲ್ಲಾ ಪದಗಳಿಗಿಂತಲು ದೊಡ್ಡದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here