ಅಯೋಧ್ಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣಕ್ಕೆ ಹರ್ಷ

0
42

ರಾಯಚೂರು: ಸಮಸ್ತ ಹಿಂದೂಗಳ ಆರಾಧ್ಯ ದೈವ ಭಗವಾನ್‌ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಿರುವ ವಿಮಾನ ನಿಲ್ದಾಣಕ್ಕೆ ಆದಿಕವಿ, ರಾಮಾಯಣ ಕತೃ ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಿರುವುದಕ್ಕೆ ಸಮಸ್ತ ವಾಲ್ಮೀಕಿ ನಾಯಕ ಸಮುದಾಯ ಸ್ವಾಗತಿಸಿ, ಹರ್ಷ ವ್ಯಕ್ತಪಡಿಸುತ್ತದೆ ಎಂದು ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ಎನ್.ರಘುವೀರ ನಾಯಕ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ಮೊದಲ ಲೇಖಕ, ತತ್ವಜ್ಙಾನಿ ಮಹಾ ಮಾನವತಾವಾದಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಅಯೋಧ್ಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಣೆ ಮಾಡಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೂ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯ ನಾಥ ಅವರಿಗೂ ವಾಲ್ಮೀಕಿ ನಾಯಕ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.

Contact Your\'s Advertisement; 9902492681

ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥ ರಚಿಸಿ ರಾಮ ರಾಜ್ಯದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಶ್ರೀರಾಮನ ಬಗ್ಗೆ ಜಗತ್ತಿಗೆ ಪರಿಚಯ ಮಾಡಿದ ಮಹರ್ಷಿ ವಾಲ್ಮೀಕಿ ಅವರ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲವಲ್ಲ ಎಂಬ ಕೊರಗು ನಮಗೆ ಮೊದಲು ಇತ್ತು. ನಂತರ ಅಲ್ಲಿಯ ವಿಮಾನ ನಿಲ್ದಾಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೆಸರು ನಾಮಕರಣ ಮಾಡಿ ಅವರಿಂದಲೇ ಘೋಷಣೆಯಾಗಿರುವುದು ನಮಗೆ ತೀವ್ರ ಸಂತಸವನ್ನುಂಟು ಮಾಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಮಹರ್ಷಿ ವಾಲ್ಮೀಕಿ ಅವರು ರಾಮಾಯಣವೆಂಬ ಮಹಾನ್‌ ಗ್ರಂಥ ನೀಡಿದ್ದಾರೆ. ಅವರ ಹೆಸರಿನಲ್ಲಿರುವ ವಾಲ್ಮೀಕಿ ನಾಯಕ ಸಮುದಾಯ ಈ ದೇಶಕ್ಕಾಗಿ ಸಾಕಷ್ಟು ತ್ಯಾಗ ಬಲಿದಾನ ಮಾಡಿದೆ. ಅನೇಕ ಮಹಾನ್‌ ಸಾಂಸ್ಕೃತಿಕ ನಾಯಕರು ಈ ಸಮುದಾಯದಲ್ಲಿದ್ದಾರೆ. ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನರಾಗಿ ಬ್ರಿಟೀಷರ ವಿರುದ್ದ ಸೆಡ್ಡು ಹೊಡೆದು ಸ್ವಾತಂತ್ರ್ಯದ ಕಿಡಿ ಹಚ್ಚಿದ ಮಹಾನ್‌ ಸ್ವಾತಂತ್ರ್ಯ ಸೇನಾನಿಗಾಳಾದ ಹಲಗಲಿ ಬೇಡರು, ಕ್ರಾಂತಿವೀರ ಸಿಂಧೂರ ಲಕ್ಷ್ಮಣ, ಬ್ರಿಟೀಷರ ವಿರುದ್ದ ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಸೇನಾನಿಗಳ ತಂಡದ ನಾಯಕತ್ವ ವಹಿಸಿ ಹೋರಾಟ ಮಾಡಿದ ಸುರಪುರದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅವರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.

ಇದಕ್ಕಿಂತ ಪೂರ್ವದಲ್ಲಿ ನಮ್ಮ ಸಮುದಾಯದ ದೈವಾಂಶ ಸಂಭೂತ, ಮಹಾನ್‌ ಪರಾಕ್ರಮಿ ಗಂಡುಗಲಿ ಕುಮಾರರಾಮ ಅವರು ಪರನಾರಿ ಸಹೋದರ ಎನ್ನುವ ಕೀರ್ತಿ ಗಳಿಸಿ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಬುನಾದಿ ಹಾಕಿದ್ದಾರೆ. ಇದರ ಜೊತೆಗೆ ಚಿತ್ರದುರ್ಗದ ರಾಜವೀರ ಮದಕರಿ ನಾಯಕರು ಮಹಾನ್‌ ಪರಾಕ್ರಮಿಯಾಗಿ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.ಆದ್ದರಿಂದ, ಮುಂದಿನ ದಿನಗಳಲ್ಲಿ ಪರನಾರಿ ಸಹೋದರ ಗಂಡುಗಲಿ ಕುಮಾರರಾಮ, ಚಿತ್ರದುರ್ಗದ ರಾಜವೀರ ಮದಕರಿ ನಾಯಕ, ಸುರಪುರದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ, ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಹಾಗೂ ಹಲಗಲಿ ಬೇಡರು ಇವರ ಹೆಸರನ್ನೂ ಸಹಿತ ವಿವಿಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ, ರೈಲ್ವೆ ನಿಲ್ದಾಣಗಳಿಗೆ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಣಗಳಿಗೆ ಸೇರಿದಂತೆ ವಿವಿಧ ಸ್ಮಾರಕಗಳಿಗೆ ನಾಮಕರಣ ಮಾಡಿ ಇವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕು. ಜೊತೆಗೆ ಪ್ರಾಧಿಕಾರಗಳನ್ನೂ, ಥೀಮ್‌ ಪಾರ್ಕನ್ನೂ ರಚಿಸಿ ಇವರ ಧೈರ್ಯ ಸಾಹಸ ದೇಶ ಪ್ರೇಮದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನಗಳನ್ನು ದೇಶದ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ ನಾಯಕ, ಬೋಳಬಂಡಿ, ರಾಮಕೃಷ್ಣ ನಾಯಕ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here