ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್

0
18

ಕೊಪ್ಪಳ : ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದರು.

ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೌರ್ಜನ್ಯ, ಗಲಭೆ ಪ್ರಕರಣಗಳಲ್ಲಿ ತನಿಖೆಯಲ್ಲಿ ಸಂತ್ರಸ್ತರೆಂದು ಸಾಬೀತಾದವರಿಗೆ ಸರ್ಕಾರದಿಂದ ನಿಗದಿಪಡಿಸಿದ ಪರಿಹಾರವನ್ನು ಒದಗಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಯಲ್ಲಿ ಅಗತ್ಯವಿರುವ ರಸ್ತೆ, ಕುಡಿಯುವ ನೀರು, ಶೌಚಾಲಯ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ದೂರು ಸಲ್ಲಿಸಲು ಬಂದಾಗ ಯಾವುದೇ ಕಾರಣ ನೀಡದೆ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಬೇಕು. ಪೊಲೀಸ್ ಠಾಣೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ನಿಯಮಾನುಸಾರ ವಿಲೇ ಮಾಡಲು ಕ್ರಮ ವಹಿಸಬೇಕು. ಸಮುದಾಯದ ಭವನಗಳ ನಿರ್ಮಾಣ, ಅಂಗನವಾಡಿಗಳ ದುರಸ್ಥಿ ಸೇರಿದಂತೆ ಯಾವುದೇ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬವಿಲ್ಲದೆ ತನಿಖೆ ನಡೆಯುತ್ತಿದ್ದು, ಸಂತ್ರಸ್ತರಿಗೆ ಅಗತ್ಯ ಪರಿಹಾರ ಒದಗಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲಿಯೂ ತಿಂಗಳ ಎರಡನೇ ಭಾನುವಾರದಂದು ಸಭೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು ತಳವಾರ ಮಾತನಾಡಿ, ಕಳೆದ ಸಭೆಯಲ್ಲಿ ಚರ್ಚಿಸಿದಂತೆ ಕೊಪ್ಪಳ ಕೇಂದ್ರ ಸ್ಥಾನದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಕಾಮಗಾರಿಯ ಅಂದಾಜು ಪತ್ರಿಕೆಯು ಸಲ್ಲಿಕೆಯಾಗಿದ್ದು, ಕೇಂದ್ರ ಕಚೇರಿಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯ ಪ್ರಾರಂಭಿಸುವ ಸಲುವಾಗಿ ಮೂಲಭೂತ ಸೌಕರ್ಯಗಳು ಮತ್ತು ಕಟ್ಟಡವನ್ನು ಭವನಕ್ಕಾಗಿ ಉಪಯೋಗಿಸುವಾಗ ಅನುಕೂಲವಾಗುವಂತ ಸ್ನಾನಗೃಹಗಳ ನಿರ್ಮಾಣಕ್ಕಾಗಿ ಕೆಆರ್‌ಐಡಿಎಲ್ ಕೊಪ್ಪಳ ಅವರು ರೂ.10 ಲಕ್ಷಗಳ ಅಂದಾಜು ಪತ್ರಿಕೆಯನ್ನು ಸಲ್ಲಿಸಿದ್ದು, ಅದರನ್ವಯ ತಾಲ್ಲೂಕು ಕಚೇರಿ ಪ್ರಾರಂಭಿಸಲು ಇಲಾಖೆಯ ಆಯುಕ್ತರಿಗೆ ಅನುಮತಿಗಾಗಿ ಕೋರಲಾಗಿದೆ. ಸಮಿತಿ ಸದಸ್ಯರು ಪ್ರಸ್ತಾಪಿಸಿದ ವಿವಿಧ ವಿಷಯಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

2023ನೇ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 37 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 9 ಪ್ರಕರಣಗಳು ಎಫ್‌ಐಆರ್, 22 ಪ್ರಕರಣಗಳು ಚಾರ್ಜ್ಶೀಟ್ ಹಂತದಲ್ಲಿದ್ದು, ಒಟ್ಟು 31 ಪ್ರಕರಣಗಳಲ್ಲಿ ರೂ.80,75,000 ಗಳ ಪರಿಹಾರಧನವನ್ನು ಮಂಜೂರಿಸಲಾಗಿದೆ. ಜಿಲ್ಲಾ ಹಂತದಲ್ಲಿ ಪರಿಹಾರ ಮಂಜೂರಾತಿಗಾಗಿ 6 ಪ್ರಕರಣಗಳು ಬಾಕಿ ಇವೆ. ಉಳಿದಂತೆ ಇದೇ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾರಂಭಿಕ ಶಿಲ್ಕು 268 ಹಾಗೂ 33 ಹೊಸ ಪ್ರಕರಣಗಳನ್ನು ಒಳಗೊಂಡAತೆ ಒಟ್ಟು 301 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ಇವುಗಳಲ್ಲಿ 58 ರಲ್ಲಿ ಬಿಡುಗಡೆ, 2 ರಲ್ಲಿ ಶಿಕ್ಷೆ, ಇತರೆ 2 ಸೇರಿದಂತೆ 62 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 206 ಪ್ರಕರಣಗಳು ಬಾಕಿ ಉಳಿದಿವೆ. ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬವಿಲ್ಲದೆ ಪರಿಹಾರಧನ ಮಂಜೂರಾತಿಗೆ ಕ್ರಮ ವಹಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಕೊಪ್ಪಳ ನಗರಸಭೆ ಪೌರಾಯುಕ್ತರಾದ ಗಣಪತಿ, ಕುಷ್ಟಗಿ ತಹಶೀಲ್ದಾರ ಶೃತಿ, ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ದ್ಯಾಮಣ್ಣ ಗೊಂದಿ, ಚಂದಾಲಿಂಗಪ್ಪ ಮಾದರ, ಸುಂಕಪ್ಪ ಕೆ.ಮಾಲಗಿತ್ತಿ, ಮರಳಸಿದ್ದಪ್ಪ ಪೂಜಾರ, ಮಾರುತಿ ಚಾಮಲಾಪುರ, ಚಂದ್ರಪ್ಪ ತಳೂರ, ಮಾಲತಿ ನಾಯಕ, ಸತೀಶ ಮೋರನಾಳ, ಸಿದ್ದು ಮಣ್ಣಿನವರ ಸೇರಿದಂತೆ ಇನ್ನಿತರ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here