ಸುರಪುರ: ನಗರದ ಶ್ರೀಪ್ರಭು ಮಹಾ ವಿದ್ಯಾಲಯ ಮೈದಾನದಲ್ಲಿ ನಡೆದ ಗುಲಬರ್ಗಾ ವಿಶ್ವ ವಿದ್ಯಾಲಯ ಏಕ ವಲಯ ಮಟ್ಟದ ಖೋ ಖೋ ಪಂದ್ಯಾವಳಿಯನ್ನು ಶ್ರೀಪ್ರಭು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಗೆದ್ದು ಚಾಂಪಿಯನ್ನಾದರು.
ಮಂಗಳವಾರ ನಡೆದ ವಿಶ್ವ ವಿದ್ಯಾಲಯ ವ್ಯಾಪ್ತಿಯ ಬೀದರ,ಕಲಬುರ್ಗಿ,ಯಾದಗಿರಿ,ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ವಿವಿದ ಕಾಲೇಜುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ಶ್ರೀಪ್ರಭು ಕಾಲೇಜು ಮತ್ತು ಲಿಂಗಸೂಗುರಿನ ಎಸ್‌ಎಮ್‌ಎಲ್‌ಬಿ ಕಾಲೇಜು ಫೈನಲ್ ಹಂತ ತಲುಪಿ ನಂತರ ಶ್ರೀಪ್ರಭು ಕಾಲೇಜಿನ ವಿದ್ಯಾರ್ಥಿಗಳು ಗೆದ್ದು ಪ್ರಥಮ ಬಹುಮಾನ ಪಡೆದರೆ,ಲಿಂಗಸೂಗುರಿನ ಕಾಲೇಜು ವಿದ್ಯಾರ್ಥಿಗಳು ದ್ವತಿಯ ಸ್ಥಾನ ಪಡೆದು ರನ್ನರಪ್ ಆಗಿ ಹೊರ ಹೊಮ್ಮಿದರು. ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ಹೆಚ್.ಹೊಸ್ಮನಿ ಮಾತನಾಡಿ,ಒಂದು ವಿಶ್ವವಿದ್ಯಾಲಯ ಮಟ್ಟದ ಪಂದ್ಯಾವಳಿಯನ್ನು ಯಾವುದೆ ಸಮಸ್ಯೆಯಿಲ್ಲದಂತೆ ನಿರ್ವಹಿಸಿದ ಎಲ್ಲಾ ದೈಹಿಕ ಶಿಕ್ಷಕರಿಗೆ ಮತ್ತು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಮಹನಿಯರಿಗೆ ಧನ್ಯವಾದ ಅರ್ಪಿಸಿದರು.
ಕಾಲೇಜಿನ ಉಪ ಪ್ರಾಚಾರ್ಯ ವೇಣುಗೋಪಾಲ ಜೇವರ್ಗಿ ಮಾತನಾಡಿ,ಎಲ್ಲಾ ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮೆರೆದು ಸಾಮರ್ಥ್ಯ ಮೆರೆದು ಜಯಶೀಲರಾಗಿದ್ದೀರಿ.ಗೆದ್ದವರು ಆ ಸ್ಥಾನ ಉಳಿಸಿಕೊಳ್ಳುವುದು ಮುಖ್ಯವಾಗಿದೆ.ಅದರಂತೆ ಸೋತ ತಂಡ ಮುಂದೆ ಪ್ರಥಮ ಸ್ಥಾನ ಪಡೆಯುವತ್ತ ತರಬೇತಿ ಪಡೆದು ಜಯಗಳಿಸುವಂತೆ ಹಾರೈಸಿದರು.ಇದೇ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ಹಾಗು ಲಿಂಗಸೂಗುರಿನ ಎಸ್‌ಎಮ್‌ಎಲ್‌ಬಿ ಕಾಲೇಜಿನ ದೈಹಿಕ ನಿರ್ದೇಶಕ ವಿರೇಶ ಮಾತನಾಡಿದರು.ನಂತರ ವಿನ್ನರ್ ಹಾಗು ರನ್ನರಪ್ ಎರಡೂ ತಂಡಗಳಿಗೆ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.ಅಲ್ಲದೆ ಅತ್ಯೂತ್ತಮ ದಾಳಿಗಾರನಾಗಿ ಆಯ್ಕೆಯಾದ ಜಾವೇದ ಹುಸೇನ ಹಾಗು ಉತ್ತಮ ಓಡುಗಾರನಾಗಿ ಆಯ್ಕೆಯಾದ ಸಂತೋಷ ಲಿಂಗಸೂಗುರು ಇಬ್ಬರಿಗೂ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆ ಮೇಲೆ ಶ್ರೀಪ್ರಭು ಕಾಲೇಜಿನ ದೈಹಿಕ ನಿರ್ದೇಶಕ ರಮೇಶ್ ಶಹಾಪುರಕರ್,ವಾರೀಸ್ ಕುಂಡಾಲೆ,ಎಸ್.ಎಸ್.ಪಾಟೀಲ ಇದ್ದರು.ಡಾ:ಸಾಯಿಬಣ್ಣ ಮುಡಬೂಳ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.ಅನೇಕ ಜನ ದೈಹಿಕ ಶಿಕ್ಷಕರು, ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗು ಕ್ರೀಡಾಪಟುಗಳು ಭಾಗವಹಿಸಿದ್ದರು.