ಕಲಬುರಗಿ: ಸಿದ್ಧೇಶ್ವರ ಶ್ರೀಗಳು ದೈಹಿಕವಾಗಿ ಈಗ ನಮ್ಮೊಂದಿಗಿಲ್ಲ. ಆದರೆ ಅವರು ಹೇಳಿದ ಸಾರ್ವಕಾಲಿಕ ಸತ್ಯ ನಮ್ಮೊಂದಿಗಿದೆ. ಅವರ ಬದುಕಿನ ನೀತಿ ನಮ್ಮದಾಗಿಸಿಕೊಳ್ಳಬೇಕು ಎಂದು ರಾಜ್ಯಸಭೆಯ ಮಾಜಿ ಸದಸ್ಯ ಬಸ್ವರಾಜ ಪಾಟೀಲ ಸೇಡಂ ತಿಳಿಸಿದರು.
ಸದ್ಗುರು ಕಲಾ ಸಂಸ್ಥೆ ಗೋಕುಲ ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಜ್ಞಾನಯೋಗಿ ಲಿಂ. ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾರ್ಥನೆಯಿಂದ ಬದುಕಿನಲ್ಲಿ ನೆಮ್ಮದಿ ಕಟ್ಟಿಕೊಳ್ಳಬೇಕು ಎಂದು ಹೇಳಿದ ಸ್ವಾಮೀಜಿ ನಿಜಕ್ಕೂ ವಿಶ್ವ ಸಂತರಾಗಿದ್ದರು ಎಂದರು.
ನೆಗ್ಗಿ ಹೋದ ಲೋಕದ ನೆಮ್ಮದಿಗೆ ವಚನಾಂಜಲಿಯ ಪ್ರಾರ್ಥನೆ ಹೇಳಿಕೊಟ್ಟ ಸಿದ್ಧೇಶ್ವರ ಶ್ರೀಗಳ ಪ್ರವಚನ ಇಳೆಗೆ ಕಳೆ ತಂದಿವೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಪ್ರವಚನದ ಮೂಲಕ ಜನರನ್ನು ಗಂಟೆಗಟ್ಟಲೆ ಹಿಡಿದಿಡುವುದು ಬಹಳ ಕಷ್ಟ. ಆದರೆ ಸಿದ್ಧೇಶ್ವರ ಶ್ರೀಗಳ ಪ್ರವಚನಕ್ಕೆ ಲಕ್ಷಾಂತರ ಜನ ಸೇರುತ್ತಿದ್ದುದು ಸಣ್ಣ ಮಾತಲ್ಲ. ಆದರ್ಶಗಳು ಪುಸ್ತಕಗಳಲ್ಲಿ ಓದಲು ಭಾಷಣಗಳಲ್ಲಿ ಕೇಳಲು ಮಾತ್ರ ಸೀಮಿತವಾಗಿರುವ ಈ ಸಂದರ್ಭದಲ್ಲಿ ನಡೆ ನುಡಿ ಎರಡರಲ್ಲೂ ಸಾಮ್ಯತೆ ಕಾಪಾಡಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿಯವರ ಸರಳ, ಸಹಜ ಬದುಕು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಗುಣತೀರ್ಥ ಕಲ್ಯಾಣ ಮಹಾನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶರಣರ ಆಶಯದಂತೆ ಬಯಲಲ್ಲಿ ಬಯಲಾದ ಸಿದ್ಧೇಶ್ವರ ಸ್ವಾಮೀಜಿ ಈ ಶತಮಾನದ ಪ್ರವಾದಿ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿದರು. ಅತಿಥಿಗಳಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಣಮಂತ ಗುಡ್ಡಾ, ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಪಾಟೀಲ, ಉದ್ದಿಮೆದಾರ ಸುಖದೇವ ಪೂಜಾರಿ ಆಗಮಿಸಿದ್ದರು.
ಕಲ್ಯಾಣ ಕರ್ನಾಟಕದ ಹೆಸರಾಂತ ಆಕಾಶವಾಣಿ ಕಲಾವಿದರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು. ಅಣ್ಣಾರಾಯ ಮತ್ತಿಮಡು, ಸೈದಪ್ಪ ಸಪ್ಪನಗೋಳ, ಬಂಡಯ್ಯಶಾಸ್ತ್ರಿ, ಸಂಗಮೇಶ ಸೊಂತ, ಮೌನೇಶ ವಿಶ್ವಕರ್ಮ, ಬಸವಕುಮಾರ ಕೆಂಗನಾಳ, ವಿಜಯಲಕ್ಷ್ಮೀ ಕೆಂಗನಾಳ ಮತ್ತಿತರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು . ನಂತರ ಮನಸ್ವಿ ತಂಡದವರಿಂದ ವಚನ ನೃತ್ಯ ಜರುಗಿತು.
ನಾಗಲಿಂಗಯ್ಯ ಸ್ಥಾವರ ಮಠ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಎಂ. ಕೆಂಗನಾಳ ಸ್ವಾಗತಿಸಿದರು.
ಶರಣರ ಜೀವನ ಮರಣದಲ್ಲಿ ಕಾಣು ಎನ್ನುವಂತೆ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾದಾಗ ಅಪಾರ ಜನಸಮೂಹ ಸೇರಿರುವುದು ಅವರ ನಿರಾಡಂಬರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. -ಎ.ಕೆ. ರಾಮೇಶ್ವರ, ಮಕ್ಕಳ ಸಾಹಿತಿ, ಕಲಬುರಗಿ.