ಕಲಬುರಗಿ: ರಾಜ್ಯ ಸರ್ಕಾರವು 2024-25ನೇ ಸಾಲಿನ ಅಯವ್ಯಯ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದು, ಜಿಲ್ಲೆಯಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಪ್ರಸ್ತಾಪಿಸಬಹುದಾದ ಯೋಜನೆಗಳ ಕುರಿತ ಸಮಗ್ರ ಪ್ರಸ್ತಾವನೆಗಳನ್ನು ಇದೇ ಜನವರಿ 12 ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಪ್ಪದೆ ಸಮಗ್ರ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಲಭ್ಯವಿರುವ ಬೀಜೋತ್ಪಾದನಾ ಕೇಂದ್ರಗಳಲ್ಲಿ ನವೀನ ತಾಂತ್ರಿಕತೆಗಳನ್ನು ಅಳವಡಿಸಿ ರೈತರಿಗೆ ಪ್ರಚುರಪಡಿಸುವ ನಿಟ್ಟಿನಲ್ಲಿ ಹಾಗೂ ಕೃಷಿ ಸಂಶೋದನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಕ್ಕೆ ನವೀನ ಕೃಷಿ ತಾಂತ್ರಿಕತೆ ಅಭಿವೃದ್ದಿ ಪಡಿಸಲು ಅವಶ್ಯಕತೆಗಾಗಿ ಬೇಕಾಗುವ ಪ್ರಸ್ತಾವನೆಗಳನ್ನು ಸಹ ಸಲ್ಲಿಸುವಂತೆ ಸಭೆಯಲ್ಲಿದ ಕೃಷಿ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೊಚಿಸಿದರು.
ಇದಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಸಹ ಮುಂಬರುವ ಸಾಲಿನಲ್ಲಿ ತೆಗೆದುಕೂಳ್ಳಬಹುದಾದ ಯೋಜನೆಗಳ ಕುರಿತು ವಿವರವಾದ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.
*ಸಿರಿಧಾನ್ಯ ಮೇಳ:*
ಜನೇವರಿ 26, 27 ಹಾಗೂ 28 ರಂದು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಬೃಹತ ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ, ಸಣ್ಣ ಕೈಗಾರಿಕೆಗಳ ಹಾಗೂ ಸ್ವ ಸಹಾಯ ಸಂಘಗಳ ಮಾರಾಟ ಮೇಳವನ್ನು ಆಯೋಜಿಸಲು ನಿರ್ಧರಿಸಿದ್ದು, ಈ ಕುರಿತು ಸೂಕ್ತ ಸ್ಥಳ ಆಯ್ಕೆ ಮಾಡಿ ಎಲ್ಲಾ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನ ಒಗ್ಗೂಡಿಸಿ ಹಾಗೂ ಮೇಳಕ್ಕೆ ಅವಶ್ಯವಿರುವ ಅಂದಾಜು ವೆಚ್ಚದ ಮಾಹಿತಿಯನ್ನು ಸಹ ಶುಕ್ರವಾರ ಸಂಜೆ ಒಳಗೆ ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ಕಲಬುರಗಿ ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ, ಕೃಷಿ ಉಪನಿರ್ದೇಶಕಿ ಅನುಸುಯಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ಡಿ.ಐ.ಸಿ. ಜಂಟಿ ನಿರ್ದೇಶಕ ಎಂ.ಸತೀಷಕುಮಾರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ಪಂಚಾಯತಿಯ ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಅಬ್ದುಲ್ ಅಜೀಮ್, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.