ಕಲ್ಯಾಣ ಕರ್ನಾಟಕ ಕಚೇರಿಗಳ ಸ್ಥಳಾಂತರದಿಂದ ಭವಿಷ್ಯದಲ್ಲಿ 110 ಹುದ್ದೆಗಳು ಶಾಶ್ವತ ನಷ್ಟ

0
95

ಕಲಬುರಗಿ : ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ನಾಲ್ಕು ಕಚೇರಿಗಳು ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳಿಗೆ ಸ್ಥಳಾಂತರ ಮಾಡಲು ಸರಕಾರ ಆದೇಶಿಸಿರುವುದರಿಂದ ಕಲ್ಯಾಣ ಕರ್ನಾಟಕಕ್ಕೆ ಈ ನಾಲ್ಕು ಕಚೇರಿಗಳಿಗೆ ಮಂಜೂರಾಗಿರುವ 110 ಹುದ್ದೆಗಳು ಭವಿಷ್ಯದಲ್ಲಿ ಸೃಷ್ಟಿಯಾಗದೇ ಶಾಶ್ವತವಾಗಿ ನಷ್ಟವಾಗುತ್ತವೆ ಅಲ್ಲದೆ ರಾಯಚೂರು, ಯಾದಗಿರ, ಕಲಬುರಗಿ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಕಾರ್ಯಗಳು ಸ್ಥಗಿತವಾಗುತ್ತವೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಗೆ ಒಳಪಡುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹಸನಾಪೂರ ಹೊಲಗಾಲುವೆ ವಿಭಾಗ-2, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜೆ.ಬಿ.ಸಿ. ಉಪ ವಿಭಾಗ, ಭಾತಂಬ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ, ಜೆ.ಬಿ.ಸಿ. ಉಪ ವಿಭಾಗ, ಗೋಗಿ, ಕ್ಯಾಂಪ್ ಭೀಮರಾಯನ ಗುಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜೆ.ಬಿ.ಸಿ. ಉಪ ವಿಭಾಗ, ಭಾಲ್ಕಿ, ಹೀಗೆ ಈ ನಾಲ್ಕು ಕಚೇರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಸಮೇತ ವಿಜಯಪುರ ಮತ್ತು ಬಾಗಲಕೋಟೆಗೆ ಸ್ಥಳಾಂತರ ಮಾಡಲು ಜಲ ಸಂಪನ್ಮೂಲ ಇಲಾಖೆಯು ಆದೇಶ ಹೊರಡಿಸಿದೆ. ಈ ಆದೇಶದನ್ವಯ ಈಗಾಗಲೇ ಹಸನಾಪೂರ ವಿಭಾಗ-2 ಹೊರತುಪಡಿಸಿ ಮೂರು ಉಪ ವಿಭಾಗಗಳ ಕಚೇರಿಗಳು ಮತ್ತು ಸಿಬ್ಬಂದಿ ಸ್ಥಳಾಂತರವಾಗಿದ್ದಾರೆ.

Contact Your\'s Advertisement; 9902492681

ಕಿತ್ತೂರು ಕರ್ನಾಟಕದ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಉಪಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿರುವುದು ಖೇದಕರವಾದ ಸಂಗತಿಯಾಗಿದೆ. ಈ ಕಚೇರಿಗಳಿಂದ ನಮ್ಮ ಭಾಗದಲ್ಲಿ ಆಗಬೇಕಾದ ಬಹಳಷ್ಟು ಕೆಲಸಗಳು ಇದ್ದರೂ ಸಹ ರಾಜಕೀಯ ಒತ್ತಡದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಾಯಿ ಧೋರಣೆ ಮಾಡಿ ಕಚೇರಿ ಸ್ಥಳಾಂತರ ಮಾಡುತ್ತಿರುವುದು ಖಂಡನೀಯವಾಗಿದೆ.

ಸರಕಾರ ಒಂದು ಕಡೆ 371ನೇ(ಜೆ) ಕಲಂ ನಿಯಮದ ಪ್ರಕಾರ ಕಲ್ಯಾಣಕಾರಿ ದೃಷ್ಟಿಕೋನದಿಂದ ಇಲ್ಲಿಯ ಕಚೇರಿಗಳನ್ನು ಉಳಿಸಲು ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ವಿಶೇಷ ಸ್ಥಾನಮಾನದ ನಿಯಮ ಹೇಳಿದರೆ ಮತ್ತೊಂದು ಕಡೆ ಮೊದಲೇ ಕಡಿಮೆ ಹುದ್ದೆ ಇರುವಂತಹ ನಮ್ಮ ಪ್ರದೇಶದಲ್ಲಿನ ಕಚೇರಿಗಳು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಸ್ಥಳಾಂತರ ಮಾಡುತ್ತಿದ್ದಾರೆ.

ಪ್ರಸ್ತುತ ನಾಲ್ಕು ಕಚೇರಿಗಳ ಸ್ಥಳಾಂತರದಿಂದ ನಮ್ಮ ಭಾಗದ ಆ ನಾಲ್ಕು ಕಚೇರಿಗಳಿಗೆ ಮಂಜೂರಾಗಿರುವ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ಇನ್ನಿತರ ಕೆಳದರ್ಜೆಯ ಇಂಜಿನಿಯರಗಳು ಮತ್ತು ಇಂಜಿನಿಯರೇತರ ಸಿಬ್ಬಂದಿ ಸೇರಿ ಮಂಜೂರಾಗಿರುವ 110 ಹುದ್ದೆಗಳು ಭವಿಷ್ಯದಲ್ಲಿ ಸೃಷ್ಟಿಯಾಗದೇ ಶಾಶ್ವತವಾಗಿ ನಷ್ಟವಾಗುತ್ತವೆ.

ಹಸನಾಪೂರ ವಿಭಾಗ-2 ರಲ್ಲಿ ಸೇರಿದಂತೆ ಇನ್ನಿತರ ಮೂರು ಉಪ ವಿಭಾಗಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೊಲಗಾಲುವೆ ಕಾಮಗಾರಿಗಳ ನಿರ್ಮಾಣ, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಜೌಗು, ಸವಳು, ಜವಳು ಬಾಧಿತ ಪ್ರದೇಶವಾಗುತ್ತಿದ್ದು, ಸದರಿ ಪ್ರದೇಶವನ್ನು ಭೂ ಸುಧಾರಣೆ ಕಾರ್ಯಗಳು ಕೈಗೊಳ್ಳಲು ಕಚೇರಿಗಳು ಮತ್ತು ಸಿಬ್ಬಂದಿ ಅತಿ ಅವಶ್ಯವಾಗಿದೆ.

ಅದರಂತೆ 85 ಲಕ್ಷ ಸವಳು, ಜವಳು ಕಮಗಾರಿಗಳು ಚಾಲ್ತಿಯಲ್ಲಿರುತ್ತವೆ. ಅಷ್ಟೇ ಅಲ್ಲದೆ ಹಸನಾಪುರ ವಿಭಾಗೀಯ ಕಚೇರಿಯಿಂದ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ನೂರಾರು ಕೋಟಿಗಳ ಕಾಮಗಾರಿಗಳ ಕ್ರೀಯಾಯೋಜ ನೆಯ ಪ್ರಸ್ತಾವನೆಯನ್ನು ಸಹ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಸಲ್ಲಿಸಿರುತ್ತಾರೆ. ಹೀಗಿರುವಾಗ ಕಚೇರಿಗಳ ಸ್ಥಳಾಂತರ ಮಾಡುವುದು ಯಾವ ನ್ಯಾಯ? ಈ ಬಗ್ಗೆ ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರು, ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಲು ಸಮಿತಿ ಒತ್ತಾಯಿಸುತ್ತದೆ. ಅದರಂತೆ ಸರಕಾರ ಬಾಗಲಕೋಟ ಮತ್ತು ವಿಜಯಪುರದಲ್ಲಿ ಆಯಾ ಕಾಮಗಾರಿಗಳಿಗೆ ಹೊಸ ಕಚೇರಿಗಳ ನಿರ್ಮಾಣ ಮಾಡಿಕೊಳ್ಳುವುದರ ಬದಲು ಪದೆ ಪದೆ ಕಲ್ಯಾಣ ಕರ್ನಾಟಕದ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ.

ಈ ಬಗ್ಗೆ ಸಮಿತಿ ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂತಹ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ನಮ್ಮ ಹಕ್ಕಿನ ಹುದ್ದೆಗಳಿಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here