ಕಲಬುರಗಿ; ನಗರದ ಹೊರವಲಯದಲ್ಲಿರುವ ಕೋಟನೂರ್ (ಡಿ) ಗ್ರಾಮದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪತ್ಥಳಿಗೆ ಯಾರೋ ಕಿಡಿಗೇಡಿಗಳು ರಾತ್ರಿ ಹೊತ್ತು ಅಪಮಾನ ಮಾಡಿ ಹೋಗರುವ ಘಟನೆಯನ್ನು ಕಲಬುರಗಿ ದಕ್ಷಿಣ ಶಾಸಕ ಸ್ಥಾನದ ಜವಾಬ್ದಾರಿಯಲ್ಲಿರುವ ನಾನು ಉಗ್ರವಾಗ ಖಂಡಿಸುವೆ ಎಂದು ಅಲ್ಲಂಪ್ರಭು ಪಾಟೀಲರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಇಡೀ ದೇಶಕ್ಕೆ ಮಾನ್ಯವಾಗುವಂತಹ ಸಂವಿಧಾನ ಬರೆದು ಭಾರತೀಯರಿಗೆ ಮಹದುಪಕಾರ ಮಾಡಿರುವ ಮಾನವತಾವಾದಿ ಅಂಬೇಡ್ಕರ್ ಅವರು ಎಲ್ಲಾ ಜನಸಮುದಾಯವರಿಗೂ ಆರಾಧ್ಯರು ಆಗಿದ್ದಾರೆ. ಆದರೆ ಯಾರೋ ಕಿಡಿಗೇಡಿಗಳು, ಮತಿಹೀನರು ರಾತ್ರಿ ಹೊತ್ತಲ್ಲಿ ಹೋಗಿ ಅಂಬೇಡ್ಕರ್ ಪುತ್ಥಳಿಯನ್ನು ಅಪಮಾನಿಸಿ ದ್ರೋಹ ಎಸಗಿದ್ದಾರೆ.ಇಂತಹ ಮತಿಹೀನ ಕೆಲಸಗಳಿಂದ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಪ್ರಯತ್ನ ಕಿಡಿಗೇಡಿಗಳು ಮಾಡಿದ್ದಾರೆ.
ಕಲಬುರಗಿ ಪೊಲೀಸರು ಸದರಿ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಸಬೇಕು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬೇಕು. ಅಂಬೇಡ್ಕರ್ ಪುತ್ಥಳಿಗೆ ಮಾಡುವ ಅಪಮಾನ ಇಡೀ ನಾಗರಿಕ ಸಮಾಜಕ್ಕೆ ಮಾಡುವ ಅಪಮಾನವೆಂದು ನಾನು ಹೇಳಬಯಸುತ್ತೇನೆ. ಇಂತಹ ಅನಾಗರಿಕ ಪ್ರವೃತ್ತಿಯನ್ನು ನಾವು ಎಲ್ಲರೂ ಸೇರಿಕೊಂಡು ಉಗ್ರವಾಗಿ ಖಂಡಿಸಲೇಬೇಕು ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಹೇಳಿದ್ದಾರೆ.