ಸಚಿವ ಪ್ರಿಯಾಂಕ್ ಖರ್ಗೆಯಿಂದ 10 ಅಂಗನವಾಡಿ ಸೇರಿ ಪಾಲಿಕೆಯ 23 ಕೋಟಿ ರೂ‌. ಮೊತ್ತದ ಕಾಮಗಾರಿಗಳು ಉದ್ಘಾಟನೆ

0
20

ಕಲಬುರಗಿ: ಮಹಾನಗರ ಪಾಲಿಕೆಯಿಂದ 2022-23ನೇ ಸಾಲಿನ ಕೆ.ಕೆ.ಅರ್.ಡಿ.ಬಿ.ಯ ಮೆಗಾ ಮ್ಯಾಕ್ರೋ ಯೋಜನೆಯಡಿ ನಗರದಲ್ಲಿ ತಲಾ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 10 ಅಂಗನವಾಡಿ ಕಟ್ಟಡಗಳನ್ನು ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಿದರು.

ಕಲಬುರಗಿ ನಗರದ ಶೇಖ್ ರೋಜಾ ಪ್ರದೇಶದ ಆಳಂದ ಕಾಲೋನಿಯ ವಿಜಯನಗರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಪಾಲಿಕೆಯ 2022-23ನೇ ಸಾಲಿನ ಎಸ್.ಎಫ್.ಸಿ ಯೋಜನೆಯಡಿ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೌರ ಕಾರ್ಮಿಕರ ವಿಶ್ರಾಂತಿ ಕೋಣೆ ಹಾಗೂ 2019-20ನೇ ಸಾಲಿನ ಎಸ್.ಬಿ.ಎಮ್-1 ಯೋಜನೆಯಡಿ ಉದನೂರಿನಲ್ಲಿ ನಿರ್ಮಿಸಲಾದ 20 ಕೋಟಿ ರೂ. ವೆಚ್ಚದ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕವನ್ನು ಸಹ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

Contact Your\'s Advertisement; 9902492681

ಕಲಬುರಗಿ ನಗರ ಸಿ.ಡಿ.ಪಿ.ಓ ವ್ಯಾಪ್ತಿಯಲ್ಲಿನ ಶಹಾಬಜಾರ ತಾಂಡಾ-2,
ಶೇಖ ರೋಜಾ ಆಶ್ರಯ ಕಾಲೋನಿ-4, ಶೇಖ ರೋಜಾ ಆಶ್ರಯ ಕಾಲೋನಿ-5, ಖಬರಸ್ತಾನ ಏರಿಯಾ-1, ಶಿವ ನಗರ, ಶಿವಾಜಿ ನಗರ-6, ಮಾಣಿಕೇಶ್ವರಿ ಕಾಲೋನಿ-1, ಗಾಂಧಿ ನಗರದಲ್ಲಿ, ಸಂಜಯಗಾಂಧಿ ನಗರ-1 ಹಾಗೂ ಇಕ್ಬಾಲ ಕಾಲೋನಿ-2 ಇಂದಿಲ್ಲಿ ಉದ್ಘಾಟನೆಗೊಂಡ ಅಂಗನವಾಡಿ ಕಟ್ಟಡಗಳಾಗಿವೆ. ಕಟ್ಟಡವು ಪ್ರತ್ಯೇಕ ಅಡುಗೆ ಕೋಣೆ, ಸ್ಟೋರ್ ರೂಂ, ಶೌಚಾಲಯ, ಪಾಠದ ಕೋಣೆ ಹಾಗೂ ಮಕ್ಕಳಿಗೆ ಆಟದ ಸಾಮಾನುಗಳನ್ನು ಹೊಂದಿವೆ. ಕಟ್ಟಡಗಳಿಗೆ ಗುಲಾಬಿ ಬಣ್ಣ ಹಚ್ಚಲಾಗಿದ್ದು, ಮಕ್ಕಳನ್ನು ಆಕರ್ಷಿಸಲಿವೆ.

ಕಟ್ಟಡ ಉದ್ಘಾಟಿಸಿದ ನಂತರ ಸಚಿವರು, ಶಾಸಕರು ಅಂಗನವಾಡಿ ಕಟ್ಟಡ ಪವರ ಕಾರ್ಮಿಕರ ವಿಶ್ರಾಂತಿ ಗೃಹ ವೀಕ್ಷಿಸಿದರು. ಅಂಗನವಾಡಿ ಮಕ್ಕಳು ಸಚಿವ-ಶಾಸಕರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಅಂಗನವಾಡಿಯಲ್ಲಿ ಕಲಿತ ಗೀತೆಯನ್ನು ನೃತ್ಯ ಮೂಲಕ ಮಗುವೊಂದು ಪ್ರದರ್ಶಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ, ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಅವರು ಪೌರ ಕಾರ್ಮಿಕರಿಗೆ ಶಾಲು ಹೊಚ್ಚಿ ಸನ್ಮಾನಿಸಿದರು.

ನಂತರ ನಡೆದ ಸರಳ ಸಮಾರಂಭ ಉದ್ದೇಶಿಸಿ ಶಾಸಕಿ ಕನೀಜ್ ಫಾತಿಮಾ ಮಾತನಾಡಿ, 39 ರಲ್ಲಿ ಇದೀಗ 10 ಸುಸಜ್ಜಿತ ಅಂಗನವಾಡಿ ಕಟ್ಟಡಗಳು ಉದ್ಘಾಟಿಸಲಾಗಿದೆ. ಉಳಿದ ಅಂಗನವಾಡಿ ಕಟ್ಟಡಗಳು ಸೇರಿದಂತೆ ಎಲ್ಲಾ ಅಂಗನವಾಡಿಯಲ್ಲಿ ಇದೇ ರೀತಿಯ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ‌ ಅನುದಾನ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ‌ ಮನವಿ ಮಾಡಿಕೊಂಡರು.

ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹ್ಮದ್ ಸಿದ್ದಿಕ್ಕಿ, ಅಡಳಿತ ಪಕ್ಷದ ನಾಯಕ ಕೃಷ್ಣ ನಾಯಕ್, ವಿರೋಧ ಪಕ್ಷದ ನಾಯಕ ಅಜ್ಮಲ್ ಗೋಲಾ, ಸದಸ್ಯರಾದ ಸಚಿನ್ ಕಡಗಂಚಿ, ದಿಗಂಬರ ನಾಡಗೌಡ, ಅನುಪಮ ರಮೇಶ ಕಮಕನೂರ, ರೇಣುಕಾ ಪರಶುರಾಮ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಪಾಲಿಕೆ ಉಪ ಆಯುಕ್ತ (ಆಡಳಿತ) ಮಾಧವ ಗಿತ್ತೆ, ಉಪ ಅಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ ಇದ್ದರು. ಕಾರ್ಯನಿರ್ವಾಹಕ ಅಭಿಯಂತ ಶಿವಣ್ಣಗೌಡ ಪಾಟೀಲ ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ಉದನೂರ ಸಂಸ್ಕರಣ‌ ಘಟಕ ವೀಕ್ಷಣೆ: ನಂತರ ಸಚಿವ‌ ಪ್ರಿಯಾಂಕ್ ಖರ್ಗೆ ಅವರು ಶಾಸಕರು, ಅಧಿಕಾರಿಗಳೊಂದಿಗೆ ಉದನೂರ ಗ್ರಾಮದ ಸರ್ವೆ ನಂ-82/1ರಲ್ಲಿ ನಿರ್ಮಿಸಲಾದ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಉದನೂರು ಗ್ರಾಮಸ್ಥರಿಗೆ ಕಸದ ರಾಶಿಯಿಂದ ಹೊಲಸು ವಾಸನೆ, ಮಳೆಬಂದಾಗ ಕಸದಿಂದ ಸೋರಿ ಹೋಗುವ ನೀರು ಸುತ್ತಮುತ್ತಲಿನ ಪರಿಸರ ಹಾಳು ಮಾಡುತ್ತಿದೆ ಜೊತೆಗೆ ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ ಎಂಬ ಗ್ರಾಮಸ್ಥರ ದೂರಿದ್ದು, ಕೂಡಲೆ ಕಸದ ಗುಡ್ಡೆಯನ್ನು ವೈಜ್ಞಾನಿಕವಾಗಿ ವಿಲೇಮಾರಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here