ಸಂವಿಧಾನಕ್ಕೆ ಅಪಚಾರ: ಸೆಪ್ಟೆಂಬರ್ 10 ರಂದು ಸಂಸದ ಜಾಧವ್ ಕಚೇರಿ ಮುಂದೆ ದಲಿತರ ಧರಣಿ

0
61

ಕಲಬುರಗಿ: ಮೀಸಲಾತಿ ಕುರಿತು ತಪ್ಪು ಹೇಳಿಕೆ ಕೊಟ್ಟು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅಪಚಾರ ಎಸಗಿದ್ದನ್ನು ಖಂಡಿಸಿ ಸೆಪ್ಟೆಂಬರ್ 10 ರಂದು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರ ಕಚೇರಿಯ ಮುಂದೆ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಬೃಹತ್ ಧರಣಿಯನ್ನು ಹಮ್ಮಿಕೊಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ. ಸಜ್ಜನ್ ಮಲ್ಲೇಶಿ ಅವರು ಇಲ್ಲಿ ಹೇಳಿದರು.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗಿಂತ ಮೊದಲು ಬಂಜಾರಾ ಲಂಬಾಣಿ ಸಮುದಾಯಕ್ಕೆ ಮೈಸೂರು ರಾಜ್ಯದ ಕೃಷ್ಣರಾಜ್ ಒಡೆಯರ್ ಸರ್ಕಾರವು ಮೀಸಲಾತಿ ಕಲ್ಪಿಸಿತ್ತು ಎಂದು ಡಾ. ಜಾಧವ್ ಅವರು ತಪ್ಪು ಹೇಳಿಕೆ ನೀಡಿದ್ದಾರೆ. ಈ ಕುರಿತು ದಾಖಲೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಡಾ. ಅಂಬೇಡ್ಕರ್ ಅವರು ದುಂಡು ಮೇಜಿನ ಪರಿಷತ್ತಿನಲ್ಲಿ ಹಕ್ಕು ಒತ್ತಾಯಪಡಿಸಿ ಮಂಡಿಸಿದ ಮನವಿ ಮೇರೆಗೆ ಶೋಷಿತ ವರ್ಗಗಳಿಗೆ ಮೀಸಲಾತಿ ಕಾಯ್ದೆ ೧೯೩೬ರಲ್ಲಿ ಬ್ರಿಟಿಷರು ಮಂಜೂರು ಮಾಡಿ ಜಾರಿ ಮಾಡಿದ ಪೂರ್ವದಲ್ಲಿ ಒಕ್ಕೂಟದ ಯಾವುದೇ ರಾಜ್ಯದ ಅರಸರು ಅಥವಾ ಬ್ರಿಟಿಷರು ಭಾರತೀಯ ಯಾವುದೇ ರಾಜ್ಯ ಹಾಗೂ ಪ್ರಾಂತದಲ್ಲಿ ಯಾವುದೇ ಸರ್ಕಾರಗಳು ಮೀಸಲಾತಿ ಕಲ್ಪಿಸಿದ ಕುರಿತು ಆದೇಶದ ಪ್ರತಿಯನ್ನು ಬಿಡುಗಡೆ ಮಾಡಲಿ ಎಂದು ಸಂಸದರಿಗೆ ಅವರು ಸವಾಲು ಹಾಕಿದರು.

Contact Your\'s Advertisement; 9902492681

ಕೊಲ್ಲಾಪೂರ್ ಸಂಸ್ಥಾನದ ಛತ್ರಪತಿ ಶಾವು ಮಹಾರಾಜರು, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ್ ಒಡೆಯರು ತಮ್ಮ ಸಂಸ್ಥಾನದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ವಾಸ್ತವತೆಯನ್ನು ಮರೆಮಾಚಿ ಸಂಸದರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ೧೯೫೦ರ ಪರಿಶಿಷ್ಟ ಜಾತಿ ಕಾಯ್ದೆ ಜಾತಿ ಪಟ್ಟಿಯಲ್ಲಿ ಯಾವ ರಾಜ್ಯದಲ್ಲಿ ಇಲ್ಲದ ಬಂಜಾರಾ ಸಮುದಾಯವನ್ನು ದೇವರಾಜ್ ಅರಸು ಸರ್ಕಾರವು ಎಲ್.ಜಿ. ಹಾವನೂರು ವರದಿಯನ್ನು ಆಧರಿಸಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿರುವ ಇತಿಹಾಸ ಮರೆತಿರುವ ಸಂಸದರು, ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಸಂಸದರಾಗಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ಕೂಡಲೇ ಬೇಶರತ್ತಾಗಿ ಕ್ಷಮೆ ಕೇಳಬೇಕು. ಇಲ್ಲವೇ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಸಂಸದರು ಒಂದು ವೇಳೆ ಕ್ಷಮೆ ಕೇಳದೇ ಹೋದಲ್ಲಿ ಸೆಪ್ಟೆಂಬರ್ ೧೦ರಂದು ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ, ಲೋಕಸಭಾಧ್ಯಕ್ಷರಿಗೆ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿ, ಡಾ. ಉಮೇಶ್ ಜಾಧವ್ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲು ಆಗ್ರಹಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಆರ್. ಕೊಲ್ಲೂರ್, ಶ್ಯಾಮ್ ನಾಟೀಕಾರ್, ಸುರೇಶ್ ಮೆಂಗನ್, ಮಹಾದೇವ್ ಕೋಳಕೂರ್, ಅರ್ಜುನ್ ಗೊಬ್ಬೂರ್, ಭೀಮಶ್ಯಾ ಖನ್ನಾ, ಪಾಂಡುರಂಗ್ ಮದನಕರ್, ದತ್ತಾತ್ರೇಯ್ ಇಕ್ಕಳಕಿ, ಶ್ರೀನಿವಾಸ್ ಖೇಳಗಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here