ಕಲಬುರಗಿ : ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಇರುವಷ್ಟೇ ಭವಿಷ್ಯದ ಕುರಿತ ಕಾಳಜಿ ಶಿಕ್ಷಕರಿಗೂ ಮತ್ತು ಶಾಲಾ ಆಡಳಿತ ಮಂಡಳಿಗೂ ಇರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಚಿಂತಕ ಪ್ರೊ ಯಶವಂತರಾಯ ಅಷ್ಠಗಿ ಅಭಿಪ್ರಾಯ ಪಟ್ಟರು.
ನಗರದ ಕುಸನೂರ ರಸ್ತೆಯಲ್ಲಿರುವ ಎಂ ಎಂ ಗಾರಂಪಳ್ಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು, ಇದರಿಂದ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮಕ್ಕಳ ಶೈಕ್ಷಣಿಕ ಬದುಕಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ಮೊಬೈಲ್ ನಿಂದ ಮಕ್ಕಳನ್ನು ದೂರವಿಡಲು ಪೋಷಕರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಿಡಿಎ ತಾಂತ್ರಿಕ ವಿಶ್ವವಿದ್ಯಾಲಯ ಪ್ರೊ. ಶರಣು ಅಲ್ಲಂಪ್ರಭು ಪಾಟೀಲ್ ಮಾತನಾಡಿ, ಮಕ್ಕಳು ಹೆಚ್ಚಿನ ಸಮಯ ಶಿಕ್ಷಕ ರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು.
ಶಿಕ್ಷಣ ಇಲಾಖೆಯ ಬಿ ಆರ್ ಸಿ ನರಸಿಂಹ ಗೋಟೆ ಮಾತನಾಡಿ,
ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಕೂಡ ಅಷ್ಟೇ ಮುಖ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಲಾರಲಿಂಗ ಶೈಕ್ಷಣಿಕ ಹಾಗೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರಕುಮಾರ್ ಗಾರಂಪಳ್ಳಿ ಮಾತನಾಡಿ, ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯ ಹೊಂದುವಂತೆ ವಿಧ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಗುರುರಾಜ ಮತ್ತಿಮಡು, ಮಾಜಿ ಮಹಾಪೌರ ರವೀಂದ್ರ ಹೊನ್ನಳ್ಳಿ, ಸಮೀರ ಬಾಗವಾನ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ್ ಹೊನ್ನಳ್ಳಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರ ಗಾರಂಪಳ್ಳಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಿ ಎಸ್ ಪುಜಾರಿ, ಎಂ ಎಂ ಗಾರಂಪಳ್ಳಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ನಿರ್ಮಲಾ ಚಂದ್ರಾಮ ಪುಜಾರಿ, ಶಿಕ್ಷಕ ನಾಗೇಶ್ ಅಲ್ಬಾ, ಸೇರಿದಂತೆ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ವರ್ಗದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಶ್ರಮಪಟ್ಟು ಕಾರ್ಯ ನಿರ್ವಹಿಸುತ್ತಿರುವವುದು ಹೆಮ್ಮೆಯ ಸಂಗತಿ, -ನಿರ್ಮಲಾ ಚಂದ್ರಾಮ ಪುಜಾರಿ, ಪ್ರಾಂಶುಪಾಲೆ ಎಂ ಎಂ ಗಾರಂಪಳ್ಳಿ ಆಂಗ್ಲ ಮಾಧ್ಯಮ ಶಾಲೆ,ಕಲಬುರಗಿ.