ಕಲಬುರಗಿ: ಕರ್ನಾಟಕದಲ್ಲಿ ಅದರಲ್ಲೂ ಜಿಲ್ಲೆಯಲ್ಲಿ ರೇಷ್ಮೇ ಬೆಳೆಗೆ ಹಾಗೂ ಮಾರುಕಟ್ಟೆಗೆ ಉತ್ತೇಜನ ನೀಡುವ ಉದ್ದೇಶದಿಂದ ಶಾಸಕಿ ಕನೀಜ್ ಫಾತೀಮಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಾರುಕಟ್ಟೆ ವಿಸ್ತರಣೆ ಸೇರಿದಂತೆ ರೇಷ್ಮೇ ಬೆಳೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಅವರ ಮೇಲಿದ್ದು ಸಚಿವರು ಹಾಗೂ ಸರ್ಕಾರ ಅವರೊಂದಿಗೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ರೇಷ್ಮೇ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ ಅವರನ್ನು ಅಭಿನಂದಿಸಿ ಮಾತನಾಡಿದ ಅವರು 18 ಶತಮಾನದಲ್ಲಿ ಟಿಪು ಸುಲ್ತಾನ ಅವರು ಮೈಸೂರಿನಲ್ಲಿ ರೇಷ್ಮೇ ಸುಲ್ತಾನ ಬುನಾದಿ ಹಾಕಿದ್ದು ಇದೂವರೆಗೆ ಬಂದಿದೆ. ಈಗ ನಮ್ಮ ಸರ್ಕಾರ ರೇಷ್ಮೇ ಬೆಳೆಗಾರರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ ಈ ಭಾಗದ ಶಾಸಕರಿಗೆ ಗುರುತಿಸಿ ಗೌರವಿಸಿದೆ ಎಂದರು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿಗೆ ತರುವ ಮೂಲಕ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆರ್ಥಿಕ ಸದೃಢತೆಗೆ ಸಹಕಾರಿಯಾಗಿ ವಾತಾವರಣ ನಿರ್ಮಾಣ ಮಾಡಲಾಗಿದೆ. ಆದರೂ ಬಿಜೆಪಿಗರೂ ಈ ಯೋಜನೆಗಳನ್ನು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಬಗ್ಗೆ ಹೆಚ್ಚು ಗಮನಕೊಡದೆ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಹಕಾರ ನೀಡುವ ಮೂಲಕ ಯಶಸ್ಸಿಗೆ ಕಾರಣೀಭೂತರಾಗಬೇಕು ಎಂದು ಕರೆ ನೀಡಿದರು.
ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಹಾಗೂ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ ಕನೀಜ್ ಫಾತಿಮಾ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನೀಜ್ ಫಾತಿಮಾ ಅವರು ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಹಾಗೂ ಸಿಎಂ ಮತ್ತು ಇತರೆ ಸಚಿವರ ಸಹಕಾರದಿಂದ ಕೆಲಸ ಮಾಡುವುದಾಗಿ ಹೇಳಿದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕನೀಜ್ ಫಾತಿಮಾ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇತರರು ಇದ್ದರು.