ಕಲಬುರಗಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂವಿಧಾನ ಕುರಿತು ಅರಿವು ಮೂಡಿಸಲು ಸಂಚರಿಸುತ್ತಿರುವ ಜಾಗೃತಿ ಜಾಥಾವು ರವಿವಾರ ದತ್ತನ ಶ್ರೀಕ್ಷೇತ್ರ ಸ್ಟೇಷನ್ ಗಾಣಗಾಪೂರ (ಗುಡೂರ್) ಗ್ರಾಮದ ಮೂಲಕ ಅಫಜಲಪೂರ ತಾಲೂಕು ಪ್ರವೇಶಿಸಿದೆ
ಗ್ರಾಮಕ್ಕೆ ಆಗಮಿಸಿದ ಜಾಗೃತಿ ಜಾಥಕ್ಕೆ ತಹಶೀಲ್ದಾರ ಸಂಜೀವಕುಮಾರ ದಾಸರ್, ತಾಲೂಕ ಪಂಚಾಯತ್ ಇ.ಓ. ವೀರಣ್ಣ ಕವಲಗಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ನಾಯಕ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲರ್ಪಾಣೆ ಮಾಡಿ ಸ್ವಾಗತಿಸಿದರು. ಗ್ರಾಮಸ್ಥರು ಡೊಳ್ಳು, ಹಲಿಗೆ ಬಾರಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಶಾಲಾ ಮಕ್ಕಳು, ಯುವಕರು ಕೈಯಲ್ಲಿ ನೀಲಿ ಧ್ವಜ ಹಿಡಿದು ಮೆರವಣಿಗೆಯುದ್ದಕ್ಕು ನೃತ್ಯ ಮಾಡುತ್ತಾ ಸಂಭ್ರಮಪಟ್ಟರು.
ನಂತರ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಭಾಗಿಯಾಗಿದ್ದರು. ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು. ಶಾಲಾ ಮಕ್ಕಳಿಗೆ ಬಹುಮಾನಸಹ ವಿತರಣೆ ಮಾಡಲಾಯಿತು. ನಂತರ ಸ್ತಬ್ದಚಿತ್ರ ವಾಹನ ಕೋಗನೂರ, ರೇವೂರ(ಬಿ), ಬಡದಾಳ, ಬಳ್ಳೂರಗಿಯಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಮತ್ತು ಅದರ ಮೂಲ ಆಶಯ ಕುರಿತು ಅರಿವು ಮೂಡಿಸಿತು.
ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಮಿರಿಯಾಣದಲ್ಲಿ ಜಾಥಾ ಅಬ್ಬರ: ಗಡಿ ತಾಲೂಕು ಚಿಂಚೋಳಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ರವಿವಾರ ಸಹ ಮುಂದುವರೆದಿದ್ದು, ತಾಲೂಕು ಪಂಚಾಯತ್ ಇ.ಓ. ಶಂಕರ ರಾಠೋಡ ನೇತೃತ್ವದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಮಿರಿಯಾಣ ಗ್ರಾಮದ ಪ್ರವೇಶ ಗಡಿಯಲ್ಲಿಯೇ ಬಣ್ಣ ಬಣ್ಣದ ರಂಗೋಲಿ ಹಾಕಿ ಜಾಥಾಕ್ಕೆ ಸ್ವಾಗತ ಕೋರಲಾಯಿತು.
ಸಂವಿಧಾನ ಶಿಲ್ಪಿ ಅಂಬೇಡ್ಕರ್, ಸಂವಿಧಾನ ಪ್ರಸ್ತಾವನೆ ಒಳಗೊಂಡ ಜಾಗೃತಿ ವಾಹನಕ್ಕೆ ಜೆ.ಸಿ.ಬಿ. ಯಂತ್ರದ ಮೂಲಕ ಪುಷ್ಪ ಮಳೆ ಸುರಿಸಿದರು.
ಇದೇ ಸಂದರ್ಭದಲ್ಲಿ ಮಾನವ ಸರಪಳಿ ನಿರ್ಮಿಸಿದಲ್ಲದೆ ಬೈಕ್ ರ‌್ಯಾಲಿ ಸಹ ಆಯೋಜಿಸಲಾಗಿತ್ತು. ಶಾಲಾ ಮಕ್ಕಳ ಲೇಜಿಮ್ ನೃತ್ಯ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮವನ್ನು ಬಲೂನ್ ಗಳನ್ನು ಅಕಾಶಕ್ಕೆ ಬಿಡುವ ಮೂಲಕ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ದರು. ಇದಕ್ಕು ಮುನ್ನ ಪೋಲಕಪಲ್ಲಿ, ಗರಗಪಲ್ಲಿ, ನಂತರ ಶಾದಿಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು.