ಕಲಬುರಗಿ; ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಬುಧವಾರ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಭೇಟಿ ನೀಡಿ ನೀರಿನ ಲಭ್ಯತೆ ಪ್ರಮಾಣ ಕುರಿತು ನೀರಾವರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಹಳ್ಳ-ಕೊಳ್ಳಗಳು ತುಂಬಿಲ್ಲ. ಆಣೆಕಟ್ಟುಗಳು ಹೊರ ಹರಿವು ಕಂಡಿಲ್ಲ. ಈ ಮಧ್ಯೆ ಈಗಾಗಲೆ ಬೇಸಿಗೆ ಆರಂಭವಾಗಿದ್ದರಿಂದ ಜಿಲ್ಲೆಯಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ ಬಗ್ಗೆ ಅರಿಯಲು ಖುದ್ದು ಬ್ಯಾರೇಜಿಗೆ ಭೇಟಿ ನೀಡಿ ನೀರಾವರಿ ಇಲಾಖೆಯ ಎ.ಇ.ಇ. ಸಂತೋಷ ಸಜ್ಜನ್ ಅವರಿಂದ ಮಾಹಿತಿ ಪಡೆದರು.
ಪ್ರೊಬೇಷನರ್ ಐ.ಎ.ಎಸ್.ಅಧಿಕಾರಿ ಗಜಾನನ್ ಬಾಳೆ, ತಹಶೀಲ್ದಾರ ಸಂಜೀವ ಕುಮಾರ ದಾಸರ್, ಅಫಜಲಪೂರ ಮುಖ್ಯಾಧಿಕಾರಿ ವಿಜಯ ಮಹಾಂತೇಷ, ತಾಲೂಕ ಪಂಚಾಯತ್ ಇ.ಓ. ವೀರಣ್ಣ ಕೌಲಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೆ.ಇ. ಬಾಬುರಾವ ಜ್ಯೋತಿ ಈ ಸಂದರ್ಭದಲ್ಲಿ ಹಾಜರಿದ್ದರು.
ನಂತರ ಭಂಕಲಗಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಮತ್ತು ಗರ್ಭಿಣಿ ತಾಯಂದಿರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಕುರಿತು ಅಂಗನವಾಡಿ ಕಾರ್ಯಕರ್ತೆಯಿಂದ ಡಿ.ಸಿ. ಮಾಹಿತಿ ಪಡೆದರು. ಕರಜಗಿ ನಾಡ ಕಚೇರಿಗೂ ಭೇಟಿ ನೀಡಿ ಕಂದಾಯ ಸೇವೆಗಳ ಕುರಿತು ಪರಿಶೀಲನೆ ಕೈಗೊಂಡರು.
ಇದಕ್ಕು ಮುನ್ನ ಅಫಜಲಪೂರ ಪಟ್ಟಣದ ಸರ್ವೆ ನಂ.290/26 ಕೃಷಿಯೇತರ ಭೂಮಿ ಬದಲಾವಣೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದರು. ನಂತರ ಗಡಿ ಗ್ರಾಮ ಬಳ್ಳೂರ್ಗಿ ಗ್ರಾಮ ಪಂಚಾಯತ್ ಕಚೇರಿ ಮತ್ತು ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿದರು. ಗ್ರಾಮದಲ್ಲಿನ ಹರಿಜನ ವಾಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಕೇರಂ,ಚೆಸ್ ಆಡಿದ ಡಿ.ಸಿ: ಬುಧವಾರ ಅಫಜಲಪೂರ ತಾಲೂಕು ಪ್ರವಾಸ ಕೈಗೊಂಡಿದ್ದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಾಲೂಕಿನ ವಿವಿಧ ಗ್ರಾ.ಪಂ. ಅರಿವು ಕೇಂದ್ರಕ್ಕೆ ಭೇಟಿ ನೀಡಿದ್ದರು. ಚೌಡಾಪುರ ಡಿಜಿಟಲ್ ಗ್ರಂಥಾಲಯ ವೀಕ್ಷಿಸಿ ಅಲ್ಲಿಯೆ ಚೆಸ್ ಆಡಿದರೆ ಉಡಚಾಣ ಡಿಜಿಟಲ್ ಗ್ರಂಥಾಲಯದಲ್ಲಿ ಕೇರಂ ಆಡಿ ಖುಷಿಪಟ್ಟರು.