ಸುರಪುರ:ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ನಗರದ ಶ್ರೀ ಪ್ರಭು ಕಾಲೇಜ್ ಮೈದಾನ ದಿಂದ 25 ಕಿಲೋ ಮೀಟರ್ ವರೆಗೆ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಸಲಾಗಿದೆ.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಸ್ಪರ್ಧೆಗೆ ತಹಸಿಲ್ದಾರ್ ಕೆ.ವಿಜಯಕುಮಾರ ಚಾಲನೆ ನೀಡಿ ಮಾತನಾಡಿ,ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ನಮ್ಮ ತಾಲೂಕಿನಲ್ಲಿ ಬಿಲ್ವಿದ್ಯೆ ಹಾಗೂ ಸೈಕ್ಲಿಂಗ್ ಸ್ಪರ್ಧೆ ನಡೆಸುವ ಮೂಲಕ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗಿದೆ,ಇಂದು ಸೈಕ್ಲಿಂಗ್‍ನಲ್ಲಿ ಭಾಗವಹಿಸಿರುವ ಎಲ್ಲಾ ಸ್ಪರ್ಧಾಳಗುಗಳು ಕ್ರೀಡಾ ಸ್ಫೂರ್ತಿಯನ್ನು ಮೆರೆಯುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಓ ಬಸವರಾಜ ಸಜ್ಜನ್,ಸಮಾಜ ಕಲ್ಯಾಣ ಇಲಾಖೆ ಎ.ಡಿ ಶೃತಿ,ಜಿಲ್ಲಾ ಕ್ರೀಡಾ ಇಲಾಖೆ ಅಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.ಸೈಕ್ಲಿಂಗ್ ಸ್ಪರ್ಧೆಯಲ್ಲಿ ವಿಜಯಪುರ,ಬಾಗಲಕೋಟ ಹಾಗೂ ಗದಗ ದಿಂದ 39 ಜನ ಪುರುಷ ಹಾಗೂ 27 ಜನ ಮಹಿಳಾ ಸೇರಿ ಒಟ್ಟು 66 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು.ಪುರುಷರು ಕೆಂಭಾವಿ ರಸ್ತೆಯಲ್ಲಿ 25 ಕಿಲೋ ಮೀಟರ್ ಹಾಗೂ ಮಹಿಳಾ ಸ್ಪರ್ಧಿಗಳು 15 ಕಿಲೋ ಮೀಟರ್ ಸೈಕ್ಲಿಂಗ್ ನಡೆಸಿದರು.
ಸೈಕ್ಲಿಂಗ್ ಸ್ಪರ್ಧೆಯಲ್ಲಿ ಉದಯ ಗುಳೆದ ಪ್ರಥಮ,ರಮೇಶ ಮಲಗುಂಡಿ ದ್ವೀತಿಯ ಹಾಗೂ ನಿತಿನ್ ಸರವರ್ ತೃತೀಯ ಸ್ಥಾನ ಪಡೆದರು.ಮಹಿಳಾ ಸ್ಪರ್ಧಿಗಳಲ್ಲಿ ಪಾಯಲ್ ಚವ್ಹಾಣ್ ಪ್ರಥಮ,ಜ್ಯೋತಿ ರಾಠೋಡ ದ್ವೀತಿಯ ಹಾಗೂ ಕೀರ್ತಿ ನಾಯಕ ತೃತೀಯ ಸ್ಥಾನ ಪಡೆದುಕೊಂಡರು.ವಿಜೇತ ಎಲ್ಲರಿಗೂ ಬಹುಮಾನ ವಿತರಿಸಿ,ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮಂಗಳವಾರ ನಡೆದ ಬಿಲ್ವಿದ್ಯೆಯಲ್ಲಿ ಸೀನಿಯರ್ ಬಾಲಕರ ವಿಭಾಗದಲ್ಲಿ ರಘು ಚಿಕ್ಕನಳ್ಳಿ ಪ್ರಥಮ,ಮೌನೇಶ ಚಿಕ್ಕನಳ್ಳಿ ದ್ವಿತೀಯ,ದೇವರಾಜ ತೃತೀಯ,ನರೇಶ ಚಾಮರಾಜನಗರ ನಾಲ್ಕನೇ ಸ್ಥಾನ ಹಾಗೂ ಅರುಣ್ ಮೈಸೂರ ಐದನೇ ಸ್ಥಾನ ಪಡೆದರು.
ಸೀನಿಯರ್ ಬಾಲಕಿಯರ ವಿಭಾಗ: ರೇಣುಕಾ ಚಿಕ್ಕನಳ್ಳಿ ಪ್ರಥಮ,ದೇವಮ್ಮ ದ್ವಿತೀಯ,ಲಕ್ಷ್ಮೀ ತೃತೀಯ,ನಾಗವೇಣಿ ನಾಲ್ಕನೇ ಸ್ಥಾನ ಪಡೆದರು.ಸಬ್ ಜೂನಿಯರ್ ಬಾಲಕರ ವಿಭಾಗ:ಮೌನೇಶ ಚಿಂಚೋಡಿ ಪ್ರಥಮ,ಬಲಭೀಮ ಕುಂಬಾರಪೇಟ ದ್ವಿತೀಯ ಸ್ಥಾನ ಪಡೆದರು.ಸಬ್ ಜೂನಿಯರ್ ಬಾಲಕಿಯರ ವಿಭಾಗ:ಭಾಗ್ಯಶ್ರೀ ಪ್ರಥಮ,ಅನ್ನಪೂರ್ಣ ದ್ವಿತೀಯ ಹಾಗೂ ಹುಲಗಮ್ಮ ತೃತೀಯ ಸ್ಥಾನ ಪಡೆದರು.