ಆಲೋಚನೆಗಳೇ ವ್ಯಕ್ತಿತ್ವ ನಿರ್ಮಾಣದ ಭದ್ರ‌ ಬುನಾದಿ; ಸಿ.ಯು.ಕೆ. 7ನೇ ಘಟಿಕೋತ್ಸವ

0
22

ಕಲಬುರಗಿ; ನಮ್ಮ‌ ಆಲೋಚನೆಗಳೇ ನಮ್ಮ ವ್ಯಕ್ತಿತ್ವ ನಿರ್ಮಾಣದ ಭದ್ರ‌ ಬುನಾದಿಗಳಾಗಿವೆ. ಹೀಗಾಗಿ ಸಕಾರಾತ್ಮಕ, ಗುಣಾತ್ಮಕ ಆಲೋಚನೆಗಳನ್ನು ಹುಟ್ಟು ಹಾಕಿ ಅದರಂತೆ ಸಾಗಬೇಕಿದೆ‌ ಎಂದು ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ಶುಕ್ರವಾರ ಕಲಬುರಗಿ ಜಿಲ್ಲೆಯ ಆಳಂದ ರಸ್ತೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಸಿ.ಯು‌ಕೆ. ಏಳನೇ ಘಟಿಕೋತ್ಸವದಲ್ಲಿ‌ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಸಕಾರಾತ್ಮಕ ಅಲೋಚನೆಗಳು ನಿಮ್ಮ ನಂಬಿಕೆ‌ ಮೇಲೆ ಬರಲಿವೆ ಎಂಬುದನ್ನು ಮರೆಯದಿರಿ ಎಂದರು.

Contact Your\'s Advertisement; 9902492681

ದೇಶದಲ್ಲಿ ದಿನದಿಂದ‌ ದಿನಕ್ಕೆ ಭ್ರಷ್ಠಾಚಾರ, ಸೃಜನಪಕ್ಷಪಾತ, ದುರಾಡಳಿತ ಹೆಚ್ಚಳವಾಗುತ್ತಿದೆ. ಪರೀಕ್ಷಾ ಹಗರಣಗಳು, ನೇಮಕಾತಿ ಹಗರಣಗಳು ಎಲ್ಲೆಡೆ ಕೇಳಿಬರುತ್ತಿವೆ. ಇದಕ್ಕೆ ನಮ್ಮಲ್ಲಿ‌ ಮೊಳಕೆಯೊಡೆಯುತ್ತಿರುವ ಕೆಟ್ಟ ಆಲೋಚನೆಗಳೇ ಕಾರಣವಾಗಿವೆ. ಸ್ವಾರ್ಥ ಮತ್ತು ತಕ್ಷಣ ಯಶಸ್ಸು ಗಳಿಸಬೇಕೆಂಬ ಅನೈತಿಕವಾದ ಅಶುದ್ಧ ಆಲೋಚನೆಗಳು ಸಾಮಾಜಿಕ ಅವನತಿಗೆ ಕಾರಣವಾಗಿವೆ. ಇದರಿಂದ ಹೊರಬರಲು ನಮ್ಮಲ್ಲಿ ಶುದ್ಧ, ನೈತಿಕತೆ ಬೀಜ ಬಿತ್ತಬೇಕಿದೆ ಎಂದು ನ್ಯಾ. ಬಿ.ಎಸ್.ಪಾಟೀಲ ಒತ್ತಿ ಹೇಳಿದರು.

ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲಿ ಶೇ.50 ಸಾರ್ವಜನಿಕರಿಗೆ ಖರ್ಚಾದರೆ ಉಳಿದ ಹಣ ಭ್ರಷ್ಟಾಚಾರಿಗಳ ಕೈ ಸೇರುತ್ತಿದೆ. ಹೀಗಾದರೆ ದೇಶ ಪ್ರಗತಿ ಸಾಧಿಸುವುದಾದರು ಹೇಗೆ ಎಂದು ಪ್ರಶ್ನಿಸಿದ ಅವರು, ಸಾಋವಜನಿಕರು ಜಾಗರೂಕತೆಯಿಂದ ಇರಬೇಕಿದೆ. ಬದಲಾವಣೆ ಸಮಯ ಇದೀಗ ಬಂದಿದೆ. ಯುವ‌ ಜನತೆ ಸಕಾರತ್ಮಕ ಆಲೋಚನೆಗಳು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ದೇಶವು ಪ್ರತಿ ಪ್ರಜೆ, ವಿದ್ಯಾರ್ಥಿಗಳಿಂದ ಶ್ರೇಷ್ಟ ಪ್ರದರ್ಶನ ನಿರೀಕ್ಷಿಸುತ್ತದೆ. ಇದು ಶ್ರೇಷ್ಠ ಭಾರತವಾಗಲು ಪೂರಕವಾಗಿದೆ ಎಂದರು.

ಆಳವಾದ,ಶಕ್ತಿಯುತ ಆಲಿಕೆಗೆ ಒತ್ತು ಕೊಡಿ: ಪರಿಣಾಮಕಾರಿ ಕಲಿಕೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಬೇಕಾಗುತ್ತದೆ. ಕಲಿಸುವವರ ಮತ್ತು ಕಲಿಯುವವರ ನಡುವೆ ಸಂಪೂರ್ಣ ಸಮನ್ವಯ ಇರಬೇಕಾಗುತ್ತದೆ. ಶಿಕ್ಷಕನಾದವನು ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡು ತರಗತಿಗೆ ಬರಬೇಕು ಮತ್ತು ವಿದ್ಯಾರ್ಥಿಯಾದವನು ಸಂಪೂರ್ಣ ಮಗ್ನತೆಯಿಂದ ಶಿಕ್ಷಕರ ಪಾಠವನ್ನು ಆಲಿಸಲಿ ಸಿದ್ಧರಾಗಿ ಬರಬೇಕಿದೆ. ಹೀಗಾದಾಗ ಮಾತ್ರ ನಿಜವಾದ ಅರ್ಥದಲ್ಲಿ ಕಲಿಕೆ ಸಾಧ್ಯವಾಗುತ್ತದೆ. ಆಲಿಸುವ ಕಲೆ ಕಲಿಸುವ ಕಲೆಯಷ್ಟೇ ಮುಖ್ಯವೂ ಮಹತ್ವಪೂರ್ಣವೂ ಆಗಿದೆ. ಆಳವಾದ, ಶಕ್ತಿಯುತವಾದ ಆಲಿಸುವಿಕೆಯ ಪ್ರಕ್ರಿಯೆಯಲ್ಲಿ ನಿರ್ಣಾಯಕತ್ವ, ಸಿನಿಕತನ, ಭೀತಿ ಮೂರು ಅವಶ್ಯಕ ಸಂಗತಿಗಳನ್ನು ನಾವು ಗುರುತಿಸಬಹುದು. ವಾಸ್ತವಿಕವಾಗಿ ಈ ಸಂಗತಿಗಳೇ ಆಲಿಸುವ ಕಲೆಯ ತಿರುಳಾಗಿವೆ ಎಂದರು.

ನಿರ್ಣಾಯಕತ್ವ, ಸಿನಿಕತನ, ಭೀತಿ ಇವುಗಳು ಪರಿಣಾಮಕಾರಿಯಾದ ಕಲಿಕೆಯಲ್ಲಿ ಮತ್ತು ಉತ್ತಮವಾದ ಜೀವನ ನಡೆಸುವಲ್ಲಿ ತೊಂದರೆಗಳನ್ನು ಉಂಟು ಮಾಡುತ್ತವೆ. ಇದರ‌ ವಿರುದ್ದ ವಿದ್ಯಾರ್ಥಿ ಜಯ ಸಾಧಿಸುವ ಮೂಲಕ ತನ್ನ ಗಮನವನ್ನು ಸಂಪೂರ್ಣವಾಗಿ ಶಿಕ್ಷಕನ ಕಡೆಗೆ ಕೇಂದ್ರೀಕರಿಸಿ ಕಲಿಕೆಯಲ್ಲಿ ಗರಿಷ್ಠ ಮಟ್ಟದ ತಾದಾತ್ಯವನ್ನು ಹೊಂದಬೇಕು ಎಂದು ಬೋಧಿಸಿದರು.

ಇದಕ್ಕು ಮುನ್ನ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು‌ ವಿ.ವಿ. ಸಾಗಿ ಬಂದ ಹಾದಿ ಮತ್ತು ಪ್ರಗತಿ ವರದಿ‌ ಮಂಡಿಸಿದರು.

ಪದವಿ ಪ್ರದಾನ: ಇದೇ ಸಂದರ್ಭದಲ್ಲಿ ವಿವಿಧ ಅಧ್ಯಯನ ವಿಭಾಗದ 245 ಸ್ನಾತಕಪೂರ್ವ, 287 ಸ್ನಾತಕ್ಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದಲ್ಲದೆ 47 ಜನರಿಗೆ ಪಿ.ಎಚ್.ಡಿ, ನಾಲ್ವರಿಗೆ ಎಂ.ಫಿಲ್ ಪದವಿ ನೀಡಲಾಯಿತು. ವಿವಿಧ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ 41 ಜನರಿಗೆ ಚಿನ್ನದ ಪದಕವನ್ನು ಮತ್ತು ಪ್ರೊ. ಎ.ಎಂ.ಪಠಾಣ ಗೋಲ್ಡ್ ಮೆಡಲ್ ಆಫ್ ಇಯರ್ ಚಿನ್ನದ ಪದಕಕ್ಕೆ ಭಾಜನರಾದ ಮಾಸ್ಟ್ರರ್ ಇನ್ ಟೆಕ್ನೋಲಾಜಿ ಇನ್ ಇನ್ಫಾರ್ಮೇಷನ್ & ಕಮ್ಯುನಿಕೇಷನ್ ಟೆಕ್ನಾಲಾಜಿ ವಿದ್ಯಾರ್ಥಿನಿ ಬಾವಿಕಡಾ ದಿವ್ಯಾಜ್ಞಾ ಪರವಾಗಿ ಅವರ ಪೋಷಕರಿಗೆ ನ್ಯಾ. ಬಿ.ಎಸ್.ಪಾಟೀಲ ಸೇರಿದಂತೆ ಗಣ್ಯರು ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಿ.ಯು.ಕೆ. ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಕುಲಸಚಿವ ಪ್ರೊ.ಆರ್.ಆರ್.ಬಿರಾದರ ಸೇರಿದಂತೆ ಅಕಾಡೆಮಿಕ್, ಕಾರ್ಯನಿರ್ವಾಹಕ ಮಂಡಳಿ ಸದಸ್ಯರು, ವಿ.ವಿ. ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಸಾಕ್ಷಿಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here