ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕೂಲಿಕಾರನ ಸಾವು: 2 ಲಕ್ಷ ರೂ. ಪರಿಹಾರ, ಜೀವ ರಕ್ಷಕ ಸೌಲಭ್ಯಕ್ಕೆ ಆಗ್ರಹ

0
39

ಕಲಬುರಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಪ್ರಾಣಕ್ಕೆ ಕುತ್ತು ತರುವಂತಹ ಎನ್‍ಎಂಎಸ್ ರದ್ದುಗೊಳಿಸಿ, ಕಮಲಾಪುರದಲ್ಲಿ ಮೃತಪಟ್ಟ ಕೂಲಿಕಾರನ ಸಂತ್ರಸ್ತ ಕುಟುಂಬಕ್ಕೆ ಕೂಡಲೇ 2 ಲಕ್ಷ ರೂ.ಗಳ ಪರಿಹಾರ ನೀಡಿ, ದುಡಿಯುವ ಸ್ಥಳದಲ್ಲಿ ಜೀವ ರಕ್ಷಕ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಅವರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲಾಪುರ ತಾಲ್ಲೂಕಿನ ವಿ.ಕೆ. ಸಲಗರ್ ಗ್ರಾಮದ ನಿವಾಸಿ ಚನ್ನಪ್ಪ ತಂದೆ ನಾಗಪ್ಪ ಕಳೆದ 21ರಂದು ಬುಧವಾರದಂದು ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ತಲೆ ಸುತ್ತು ಬಂದು ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಾಗ ಆತನಿಗೆ ರಕ್ತದೊತ್ತಡ 195ರಷ್ಟು ಹೆಚ್ಚಳವಾಗಿತ್ತು. ವೈದ್ಯರು ಚಿಕಿತ್ಸೆ ಕೊಟ್ಟು ಮನೆಗೆ ಕಳಿಸಿದ್ದು ಮಧ್ಯರಾತ್ರಿ ಮೃತಪಟ್ಟರು ಎಂದು ಖೇದ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪ್ರಕರಣದ ಕುರಿತು ಚೆನ್ನಪ್ಪನ ಮನೆಗೆ, ಸರ್ಕಾರಿ ಆಸ್ಪತ್ರೆಗೆ ಹಾಗೂ ಗ್ರಾಮ ಪಂಚಾಯಿತಿಗೆ ಹೋಗಿ ಪರಿಶೀಲಿಸಿದಾಗ ಚನ್ನಪ್ಪ ಉದ್ಯೋಗ ಖಾತ್ರಿ ಕೆಲಸವನ್ನು ಪೂರ್ಣವಾಗಿ ಮಾಡಿದ್ದಾನೆ. ಅಲ್ಲಿಯೇ ತಲೆ ಸುತ್ತು ಬಂದಿರುವ ಕುರಿತು ತನ್ನ ಸಹುದ್ಯೋಗಿಗಳ ಮುಂದೆ ಹೇಳಿಕೊಂಡಿದ್ದಾನೆ. ಉಳಿದೆಲ್ಲ ಕಾರ್ಮಿಕರು ಮನರೇಗಾದ ವರದಿ ಮಾಡಿದರೂ ಒಂದು ಗಂಟೆಗೆ ಕೆಲಸದ ಕಡೆಯ ಭಾವಚಿತ್ರ (ಎನ್‍ಎಂಎಂಎಸ್) ತೆಗೆದಾದ ಮೇಲೆ ಮಧ್ಯಾಹ್ನ 2 ಗಂಟೆಗೆ ಮನೆಗೆ ಹೋಗಿದ್ದಾನೆ.

ಕೆಲಸ ಮುಗಿದ ಮೇಲೂ ಭಾವಚಿತ್ರಕ್ಕಾಗಿ ಕಾಯ್ದಿದ್ದಾನೆ. ಕೊನೆಯ ಭಾವಚಿತ್ರ ತೆಗೆದುಕೊಳ್ಳದೇ ಇದ್ದರೆ ಕೆಲಸ ಮಾಡಿದ ಕೂಲಿ ಸಿಗುವುದಿಲ್ಲ ಕೆಲಸಕ್ಕೆ ಹೋಗುವಾಗಲೂ ತಲೆಸುತ್ತು ಎಂದು ನರಳಿದ್ದಾನೆ. ಅಂದು ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಇದ್ದು, ಕೆಲಸದ ಸ್ಥಳದಲ್ಲಿ ಟೆಂಟ್ ಆಗಲಿ, ಕುಡಿಯುವ ನೀರಿನ ಟ್ಯಾಂಕ್ ಆಗಲಿ ಇಲ್ಲ. ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆಯೂ ಸಹ ಇಲ್ಲ ಎಂದು ಅವರು ಆರೋಪಿಸಿದರು.

ಕೆಲಸ ಮಾಡುವ ಸ್ಥಳವು ಚೆನ್ನಪ್ಪನ ಮನೆಯಿಂದ ಎರಡು ಕಿ.ಮೀಗಿಂತ ಹೆಚ್ಚು ದೂರವಿದೆ. ಹೋಗಿ ಬರುವ ಅಂತರ 4 ಕಿ.ಮೀ.ಗೂ ಹೆಚ್ಚು ಆಗಲಿದೆ. ಚನ್ನಪ್ಪನ ಸಾವಿಗೆ ನ್ಯಾಷನಲ್ ಮೊಬೈಲ್ ಮಾನಿಟಿರಿಂಗ್ ಸಿಸ್ಟಮ್ ಕಾರಣವಾಗಿದೆ. ನಾಲ್ಕು ತಾಸುಗಳ ನಂತರ ಕಾರ್ಯನಿರ್ವಹಿಸುವ ಮೊಬೈಲ್ ಆಪ್‍ಗಾಗಿ ಕಾಯಬೇಕು. ಇಲ್ಲದಿದ್ದರೆ ಕೂಲಿಯೇ ಬರುವುದಿಲ್ಲ. ಬೆವರು ಹೋಗಿ, ಬಿಸಿಲಲ್ಲಿ ಬಳಲಿ, ರಕ್ತದೊತ್ತಡದಲ್ಲಿ ಹೇರುಪೇರು ಆಗಿ ಅನಾಹುತಗಳು ಸಂಭವಿಸುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಳೆದ ವರ್ಷ ಸುಂಟನೂರು ಮತ್ತು ರುದ್ರವಾಡಿ ಗ್ರಾಮಗಳಲ್ಲಿಯೂ ಒಬ್ಬೊಬ್ಬ ಕಾರ್ಮಿಕ ಇಂತಹುದೇ ಪರಿಸ್ಥಿತಿಗೆ ಬಲಿಯಾಗಿದ್ದಾರೆ. ಆದಾಗ್ಯೂ, ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಉದ್ಯೋಗ ಖಾತ್ರಿ ಕಾಯ್ದೆ ಪ್ರಕಾರ ಮೃತ ಚನ್ನಪ್ಪನ ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು. ಮತ್ತು ಇಂತಹ ಜೀವಹಾನಿ ತಪ್ಪಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬೇಸಿಗೆಯ ಆರಂಭದಲ್ಲಿಯೇ ಇಂತಹ ಘಟನೆಗಳು ಸಂಭವಿಸುತ್ತಿವೆ. ಕೇಂದ್ರ ಸರ್ಕಾರವು ಅನಾವಶ್ಯಕವಾಗಿ ಜಾರಿಗೆ ತಂದಿರುವ ಎನ್‍ಎಂಎಂಎಸ್ ಅನಾಹುತಕ್ಕೆ ನೇರ ಕಾರಣವಾಗಿದೆ. ಹೈದ್ರಾಬಾದ್ ಕರ್ನಾಟಕದಲ್ಲಿ ಉರಿಬಿಸಿಲು ಇದೆ. ಇಂತಹುದರಲ್ಲಿ ನೆರಳಿಲ್ಲದ ಸ್ಥಳಗಳಲ್ಲಿ, ಆರೋಗ್ಯಕ್ಕೆ ಸಂಬಂಧಪಟ್ಟ ಸೌಲತ್ತುಗಳಿಲ್ಲದೇ ಕಾರ್ಮಿಕರು ಕೆಲಸ ಮಾಡುವ ಪರಿಸ್ಥಿತಿ ತಲೆದೋರಿದೆ.

ತಾಂತ್ರಿಕ ಕಾರಣಗಳಿಂದ ಅನೇಕ ಕೆಲಸಗಳ ಸ್ಥಳದಲ್ಲಿ ಬೆಳಿಗ್ಗೆ ಬಂದರೆ ಕಾರ್ಮಿಕರನ್ನು ಸಂಜೆಯವರೆಗೂ ಮತ್ತು ಮಧ್ಯಾಹ್ನದವರೆಗೂ ಕಾಯಿಸುತ್ತಾರೆ. ಮನೆಯಿಂದ ಕೆಲಸಕ್ಕೆ ಬರುವುದು, ಭಾವಚಿತ್ರಕ್ಕಾಗಿ ಕಾಯುವುದು, ಕೆಲಸ ಮಾಡಿದ ಮೇಲೂ ತಾಸುಗಂಟಲೇ ಭಾವಚಿತ್ರಕ್ಕಾಗಿ ಕಾಯುವುದು ಹೀಗೆ ಕನಿಷ್ಠ ಎಂಟು ತಾಸುಗಳಿಗಿಂತಲೂ ಹೆಚ್ಚು ಅವಧಿಯನ್ನು ಕಾರ್ಮಿಕರು ಕೊಡಬೇಕಾಗುತ್ತದೆ ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದರು.

ಕೂಲಿ ಮಾತ್ರ ಕೇವಲ 316ರೂ.ಗಳಾಗಿದೆ. ಪ್ರತಿ ದಿನ ಕೆಲಸ ಮಾಡಲು ಬಳಸುವ ಉಪಕರಣಗಳನ್ನು ಶಾರ್ಪನ್ ಮಾಡಲು ಹತ್ತು ರೂ.ಗಳನ್ನು ಕೊಡಲಾಗುತ್ತಿತ್ತು. ಅದನ್ನು ಕಳೆದ ಎರಡು ವರ್ಷಗಳಿಂದ ಕಡಿತ ಮಾಡಲಾಗಿದೆ. ಬಜೆಟ್‍ನಲ್ಲಿ ಶೇಕಡಾ 35ಕ್ಕಿಂತಲೂ ಅಧಿಕ ಕಡಿತ ಮಾಡಲಾಗಿದೆ. ಹೀಗಾಗಿ ಹಂತ, ಹಂತವಾಗಿ ಉದ್ಯೋಗ ಖಾತ್ರಿಯನ್ನು ಮುಗಿಸುವುದು ಕೇಂದ್ರ ಸರ್ಕಾರದ ಸಂಚಾಗಿದೆ ಎಂದು ಅವರು ದೂಷಿಸಿದರು.

ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ದೊರೆಯುವ ಮನರೇಗಾ ಕಾಯ್ದೆ ಒಂದೇ ಇದೆ. ಅದೊಂದು ಆಧಾರವೂ ಕಸಿಯುವಂತೆ ತಾಂತ್ರಿಕ ಶಡ್ಯಂತ್ರ ಹೆಣೆಯಲಾಗಿದೆ. ಆದ್ದರಿಂದ ಜನರು ಗುಳೆ ಹೋಗುತ್ತಿದ್ದಾರೆ. ಕೆಲಸವಿಲ್ಲದೇ ಇನ್ನಷ್ಟು ಬಡತನ ಹೆಚ್ಚುತ್ತಿದೆ. ಆದ್ದರಿಂದ ಜಿಲ್ಲೆಯಾದ್ಯಂತ ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು, ಟೆಂಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮುಂತಾದ ಸೌಲಭ್ಯಗಳನ್ನು ಆಯಾ ಗ್ರಾಮ ಪಂಚಾಯಿತಿಗಳು ಕಲ್ಪಿಸಬೇಕು. ಇಂತಹ ಬದ್ಧತೆಯನ್ನು ಪಂಚಾಯಿತಿಗಳು ತೋರುತ್ತಿಲ್ಲ ಎಂದು ಅವರು ಖಂಡಿಸಿದರು.

ಬರಗಾಲದ ಸಮಯದಲ್ಲಿ 150 ಮಾನವ ದಿನಗಳಿಗಾಗಿ ಆಗ್ರಹಿಸಿ ಹೋರಾಟಗಳು ನಡೆದಿವೆ. ಆದಾಗ್ಯೂ, ಕೇಂದ್ರ ಸರ್ಕಾರ ಮಂಜೂರು ಮಾಡಿಲ್ಲ. ಮಾಡಿದ ಕೆಲಸದ ಕೂಲಿಯ ಹಣವನ್ನೂ ಸಹ ನಿಯಮಿತವಾಗಿ ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿದೆ ಎಂದು ಅವರು ಆರೋಪಿಸಿದರು.

ಮೃತ ಕೂಲಿಕಾರನ ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ಗಳನ್ನು ಕೊಡುವಂತೆ, ದುಡಿಯುವ ಸ್ಥಳದಲ್ಲಿ ಎಲ್ಲ ಜೀವರಕ್ಷಕ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ, ಮಾರ್ಚ್ 31ರವರೆಗೆ ಕೆಲಸ ಬಯಸುವ ಎಲ್ಲ ಕುಟುಂಬಗಳು ಈಗಾಗಲೇ ಇರುವ 100 ಮಾನವ ದಿನಗಳನ್ನು ಒದಗಿಸುವಂತೆ, ಬಾಕಿ ಇರುವ ಕೂಲಿಯ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ, ದಿನದ ಕೂಲಿಯನ್ನು 700ರೂ.ಗಳಿಗೆ ಹೆಚ್ಚಿಸಿ, ಮಾನವ ದಿನಗಳನ್ನೂ ಸಹ 200 ದಿನಗಳಿಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಕೇವಲ 20 ಕಾಮಗಾರಿಗಳನ್ನು ಕೈಗೊಳ್ಳುವ ನಿರ್ಬಂಧನೆಯನ್ನು ಕೈಬಿಡುವಂತೆ, ಎನ್‍ಎಂಎಂಎಸ್ ರದ್ದುಪಡಿಸುವಂತೆ, ಬರಗಾಲದ ಈ ಸಂದರ್ಭದಲ್ಲಿ ಕೆಲಸದ ಪ್ರಮಾಣದಲ್ಲಿ ಕಡಿತ ಮಾಡುವಂತೆ, ಮನರೇಗಾದಲ್ಲಿನ ಎಲ್ಲ ಭ್ರಷ್ಟಾಚಾರವನ್ನು ಕೊನೆಗೊಳಿಸುವಂತೆ, ಜನರು ಕೆಲಸ ಬಯಸುವ ಅರ್ಜಿಗೆ ಕಡ್ಡಾಯವಾಗಿ ಸ್ವೀಕೃತಿ ಕೊಡುವಂತೆ ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಶ್ರೀಮತಿ ಚಂದಮ್ಮ ಗೋಳಾ, ರಾಜ್ಯ ಸದಸ್ಯೆ ಶ್ರೀಮತಿ ಪದ್ಮಿನಿ ಕಿರಣಗಿ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here