ಕಲಬುರಗಿ: ಯಡ್ರಾಮಿ ತಾಲೂಕಿನ ಆಲೂರ್ ಮತ್ತಿತರ 58 ಗ್ರಾಮಗಳಿಗೆ ಹಾಗೂ ಜೇವರ್ಗಿಯ 22 ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಬೇಕಾಗುವ 265 ಕೋಟಿ ರೂ ಅನುದಾನಕ್ಕೆ ರಾಜ್ಯ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯಸಿಂಗ್ ತಿಳಿಸಿದ್ದಾರೆ.
ಭೀಮಾ ನದಿಯಿಂದ ಈ ನೀರು ಪೂರೈಕೆಯಾಗಲಿದ್ದು, ಈ ಯೋಜನೆಯಿಂದ ತಾಂಡಾಗಳು ಸೇರಿ 100 ಗ್ರಾಮಗಳ ಕುಡಿವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಈ ಯೋಜನೆಗಾಗಿ 2015ರಿಂದಲೂ ಸರಕಾರದ ಮೇಲೆ ಒತ್ತಡ ಹಾಕುತ್ತಲೇ ಇದ್ದೆ. ಆದರೆ ಅದು ಸಾಕಾರ ಆಗಿರಲಿಲ್ಲ. ಆದರೆ ಈಗ ನಮ್ಮ ಸರಕಾರ ಇದನ್ನು ಈಡೇರಿಸಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.
ಭೀಮಾ ನದಿಯಿಂದ 14 ಎಂಎಲ್‌ಡಿ ನೀರು ಎತ್ತುವಳಿ ಮಾಡಲಾಗುತ್ತದೆ. ಕಲ್ಲೂರ್ ಬಿ.ಯಲ್ಲಿಜಾಕ್‌ವೆಲ್ ಇರಲಿದ್ದು, ಸೊನ್ನ ಕ್ರಾಸ್ ಹತ್ತಿರ ನೀರು ಶುದ್ಧೀಕರಣ ಘಟಕ ಅಳವಡಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಯಡ್ರಾಮಿ ತಾಲೂಕಿನ ಆಲೂರ, ಕರಕಿಹಳ್ಳಿ, ಕುಕನೂರ, ಸುಂಬಡ, ಕಾಚಾಪುರ, ಕಡಕೋಳ, ಅರಳಗುಂಡಗಿ, ಮಳ್ಳಿ,ಕುರಳಗೇರಾ, ಮಾಗಣಗೇರಾ, ಬಳಬಟ್ಟಿ, ಬಿಳವಾರ, ಇಜೇರಿ, ಸಾಥಖೇಡ್, ಯಲಗೋಡ ಗ್ರಾಮ ಪಂಚಾಯಿತಿಗಳು ಮತ್ತು ಜೇವರ್ಗಿ ತಾಲೂಕಿನ ನೆಲೋಗಿ, ಬಳೂಂಡಗಿ, ಜೇರಟಗಿ, ಕಲ್ಲಹಂಗರಗಾ, ನೇದಲಗಿ, ಹರನೂರ, ಹಿಪ್ಪರಗಾ ಎಸ್.ಎನ್ ಮತ್ತು ರಂಜಣಗಿ ಗ್ರಾಮ ಪಂಚಾಯಿತಿಗಳು ಈ ಯೋಜನೆ ವ್ಯಾಪ್ತಿಗೆ ಸೇರಿವೆ ಎಂದು ಹೇಳಿದ್ದಾರೆ.
ಜಲಜೀವನ್ ಮಿಷನ್ ಯೋಜನೆ ಅಡಿ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ. ಬಹುದಿನಗಳ ಬೇಡಿಕೆ ಈಡೇರಿದೆ. ಇದು ಸಾಕಾರವಾದರೆ ನನ್ನ ಮತಕ್ಷೇತ್ರದ ಎರಡು ತಾಲೂಕುಗಳಾದ ಜೇವರ್ಗಿ ಮತ್ತು ಯಡ್ರಾಮಿಯ ಕುಡಿವ ನೀರಿನ ಸಮಸ್ಯೆ ಬಹತೇಕ ನಿವಾರಣೆಯಾಗಲಿದೆ. -ಡಾ. ಅಜಯಸಿಂಗ್, ಅಧ್ಯಕ್ಷ, ಕೆಕೆಆರ್‌ಡಿಬಿ, ಶಾಸಕರು ಜೇವರ್ಗಿ