ಕಲಬುರಗಿ: ಸ್ವತಂತ್ರ ಭಾರತವು ಶೇ 70ರಷ್ಟು ಸಾಕ್ಷರತೆಯನ್ನು ಸಾಧಿಸಿದ್ದು, ಇಂದಿನ ದಿನಗಳಲ್ಲಿ ಅಕ್ಷರ ಜ್ಞಾನ ಇರುವ ಮಂದಿಗೆ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸಬೇಕಾಗಿ ಬಂದಿರುವುದು ದುರ್ದೈವದ ಸಂಗತಿ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ.ಅಜೀಂ ಪಾಶಾ ಬೇಸರ ವ್ಯಕ್ತಪಡಿಸಿದರು.
ನಗರದ ಹಿಂದಿ ಪ್ರಚಾರ ಸಭಾದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅರಿವು ಮೂಡಿಸುವ ಕಾರ್ಯ ನಮ್ಮ ಮನೆಯಿಂದ ಆರಂಭವಾಗಿ ದೇಶದಾದ್ಯಂತ ವಿಸ್ತರಿಸಬೇಕಾದ ತುರ್ತು ಅಗತ್ಯವಿದೆ. ನಮ್ಮ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಅಂಬೇಡ್ಕರ್ ಅರಿವು ಮೂಡಿಸಬೇಕು ಎಂದು ಹೇಳಿದರು.
ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಅಂಬೇಡ್ಕರ್ ಹಾಗೂ ಬುದ್ಧನ ವಿಚಾರಗಳನ್ನು ಹೆಣ್ಣು ಮಕ್ಕಳಿಂದ ದೂರ ಇಟ್ಟಿರುವುದರಿಂದ ಅಂಬೇಡ್ಕರ್ ವಾದ ಯಶಸ್ಸು ಆಗದಿರಲು ಕಾರಣ. ಹಾಗಾಗಿ ಸುಶಿಕ್ಷಿತ ಮಹಿಳೆಯರ ಮೂಲಕ ಅಂಬೇಡ್ಕರ್ ವಿಚಾರಗಳನ್ನು ನಮ್ಮ ಮಕ್ಕಳಿಗೆ ತಲುಪಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡ ಶಿಕ್ಷಕರು, ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಪಂಡಿತ ಮದಗುಣಕಿ ಕಾರ್ಯಕ್ರಮ ನಿರೂಪಿಸಿದರು. ಡಾ.ಅನಿಲ ಟೆಂಗಳಿ, ಚಂದ್ರಶೇಖರ ಏಕಲೂರ ಹಾಜರಿದ್ದರು.