ಕಲಬುರಗಿ: ಯಾವುದೇ ರಾಷ್ಟ್ರದಲ್ಲಿ ಕ್ರೀಡಾ ಕ್ಷೇತ್ರ ಬೆಳವಣಿಗೆಯಾಗಬೇಕಾದರೆ, ಅಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ಸೂಕ್ತವಾದ ಪ್ರೋತ್ಸಾಹ ನೀಡಿದರೆ ಮಾತ್ರ ಕ್ರೀಡಾ ಕೇತ್ರ, ಕ್ರೀಡಾಪಟುಗಳು ಬೆಳವಣಿಗೆ ಹೊಂದುವುದರ ಮೂಲಕ ದೇಶದ ಕೀರ್ತಿ ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ‘ಮೌಲಾನಾ ಆಜಾದ ಮಾದರಿಯ ಶಾಲೆ’ಯ ಆವರಣದಲ್ಲಿ ‘ನೆಹರು ಯುವ ಕೇಂದ್ರ’ ಮತ್ತು ‘ನಿಸರ್ಗ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಸೋಮವಾರ ಜರುಗಿದ ಪ್ರಮಾಣಪತ್ರಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆಯಲ್ಲಿ ದೊಡ್ಡದು-ಸಣ್ಣದು ಎಂಬುದಿಲ್ಲ. ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ, ಅದರ ನೀತಿ-ನಿಯಮಗಳ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು, ಪೂರ್ವಸಿದ್ಧತೆಯೊಂದಿಗೆ ತೊಡಗಬೇಕು. ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡುವುದರೊಂದಿಗೆ ನಮ್ಮ ಭಾಗ ಕಡಿಮೆಯಿಲ್ಲವೆಂದು ತೋರಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ನಿಸರ್ಗ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಪ್ರಾಂಶುಪಾಲೆ ಲಕ್ಷ್ಮೀ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕರಾದ ಅರುಣಕುಮಾರ, ದೇವಿಂದ್ರ, ಕಸ್ತೂರಬಾಯಿ, ಪರಶುರಾಮ, ಸದ್ದಾಮ ಹುಸೇನ್, ಉಮೇರಾ ತನ್ವೀರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.