ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಶಿಷ್ಯವೇತನ ಅವ್ಯವಹಾರದ ಕುರಿತು ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ತನಿಖೆ ಕೈಗೊಳ್ಳುವಂತೆ, ವಂಚಿಸಿದ ಶಿಷ್ಯವೇತನವನ್ನು ಮರಳಿಸಬೇಕು ಎಂದು ಒತ್ತಾಯಿಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬಸವೇಶ್ವರ್ ಆಸ್ಪತ್ರೆಯ ಆವರಣದಲ್ಲಿರುವ ಕಾಲೇಜು ದ್ವಾರದ ಮುಂದೆ ಪ್ರತಿಭಟನೆ ಮಾಡಿದರು.
ಕಾನೂನು ಬಾಹಿರವಾಗಿ ಕಾಲೇಜಿನ ಆಡಳಿತ ಮಂಡಳಿಯು ಶಿಷ್ಯವೇತನವನ್ನು ಪಡೆದುಕೊಂಡಿರುವ ಕುರಿತು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದ ವಿದ್ಯಾರ್ಥಿಗಳು, ಡಾ. ಭೀಮಾಶಂಕರ್ ಬಿಲಗುಂದಿ ಅವರ ನೇತೃತ್ವದ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದರು.
ಆಡಳಿತವು ಮುಂಗಡವಾಗಿ ವಿದ್ಯಾರ್ಥಿಗಳಿಂದ ಚೆಕ್ ಬರೆಸಿಕೊಂಡು ಹಣ ಲಪಟಾಯಿಸಿರುವುದು ಹೆಸರಾಂತ ವೈದ್ಯಕೀಯ ಕಾಲೇಜಿನಿಂದ ನಡೆಯುತ್ತಿರುವ ಕಳ್ಳ ದಂಧೆಯನ್ನು ಕಲ್ಯಾಣ ಕರ್ನಾಟಕದ ಯಾರೇ ಪ್ರಜ್ಞಾವಂತರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಕುರಿತು ಎಂದು ಸಾಮಾಜಿಕ ಕಾರ್ಯಕರ್ತ ಶರಣಬಸಪ್ಪ ತಂದೆ ಶ್ರೀಮಂತಪ್ಪ ಅಂಬೆಸಿಂಗೆ ಅವರು ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಶಿಷ್ಯವೇತನ ಹಗರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದರೂ ಸಹ ಪೋಲಿಸರು ಮಾತ್ರ ತನಿಖೆಯನ್ನು ಕೈಗೊಳ್ಳದೇ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ ಎಂದರು.
ಕಳೆದ 8ರಂದು ನಗರ ಪೋಲಿಸ್ ಆಯುಕ್ತರಿಗೆ ಖುದ್ದಾಗಿ ಭೇಟಿ ಮಾಡಿ ದೂರು ಸಲ್ಲಿಸಿದರೂ ಸಹ ಇಲ್ಲಿಯವರೆಗೆ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ. ಕಳೆದ 16ರಂದು ಬೆಂಗಳೂರಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಭೇಟಿ ಮಾಡಿ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿರುವೆ. ಅದೇ ದಿನ ಡಿಜಿಪಿ ಕಚೇರಿಗೆ ಭೇಟಿ ಮಾಡಿ ಎಐಜಿಪಿ ಶ್ರೀಮತಿ ಕಲಾಕೃಷ್ಣ ಅವರಿಗೂ ಸಹ ತನಿಖೆ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಆದಾಗ್ಯೂ, ಪೋಲಿಸ್ ಇಲಾಖೆಯವರು ಎಫ್‍ಐಆರ್ ದಾಖಲಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆಯವರಿಗೆ ಪೋಲಿಸರು ನೋಟಿಸ್ ಸಹ ಕೊಟ್ಟಿಲ್ಲ. ಕಳೆದ 12ರಂದು ಪೋಲಿಸ್ ನೋಟಿಸ್ ನೀಡಿ ದಾಖಲೆಗಳನ್ನು ಸಲ್ಲಿಸಲು ಕೋರಿದ್ದರಿಂದ ನಾನು ಅದರ ಪ್ರಕಾರ ಮರುದಿನವೇ 13ರಂದು ಪೂರಕ ದಾಖಲೆಗಳನ್ನೂ ಸಹ ಸಲ್ಲಿಸಿರುವೆ. ಅಷ್ಟಾದರೂ ಸಹ ತನಿಖೆ ಆಗದೇ ಇರುವುದು ರಾಜಕೀಯ ಪ್ರಭಾವ ಏನಾದರೂ ಬೀರುತ್ತಿದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು.
ಇಂತಹ ಹಗರಣ ಕೇವಲ ಒಂದೇ ಕಾಲೇಜಿಗೆ ಸೀಮಿತವಾಗಿಲ್ಲ. ರಾಜ್ಯದ ಹಲವು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಕಂಡುಬಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಈ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿಗಳ ಚೆಕ್ ಮೂಲಕ ಶಿಷ್ಯವೇತನ ಪಡೆದುಕೊಂಡ ಹಣವನ್ನು ಮರಳಿಸಬೇಕು ಎಂದು ಆಗ್ರಹಿಸಿದ ಅವರು, ಸಂಸ್ಥೆಯ ಸುಮಾರು 110 ವಿದ್ಯಾರ್ಥಿಗಳು ಕಳೆದ 25ರಂದು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡೀನ್ ಎಸ್.ಎಂ. ಪಾಟೀಲ್ ಅವರಿಗೆ ಭೇಟಿ ಮಾಡಿ ವಿದ್ಯಾರ್ಥಿಗಳ ಇಲ್ಲಿಯವರೆಗೆ ಚೆಕ್ ಮೂಲಕ ಪಡೆದಿರುವ ಹಣವನ್ನು ಮರಳಿ 48 ಗಂಟೆಗಳಲ್ಲಿ ಪಾವತಿಸಲು ಗಡುವು ನೀಡಿದ್ದಾರೆ. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮತ್ತು ಕಾನೂನು ಮೊರೆ ಹೋಗುವ ಎಚ್ಚರಿಕೆ ನೀಡಿದರೂ ಸಹ ಕ್ರಮ ಕೈಗೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹೋರಾಟ ಮಾಡಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನೇ ಪೋಲಿಸರು ಸಾಕ್ಷಿ ಎಂದು ಪರಿಗಣಿಸಿ ಕೂಡಲೇ ಎಫ್‍ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.