ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ತಾವು ಅಧ್ಯಕ್ಷರಾಗಿ ಬಂದ ನಂತರ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷರೂ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯಸಿಂಗ್ ಹೇಳಿದರು.
ಹಿಂದಿನ ಸರ್ಕಾರದಲ್ಲಿ ಮಂಡಳಿಯಿಂದ ಕೇವಲ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡಲಾಗಿತ್ತು. ಆದರೆ ನಾನು ಅಧಿಕಾರವಹಿಸಿಕೊಂಡಾಗಿನಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಕ್ಷರ ಆವಿಷ್ಕಾರ ಎಂಬ ಯೋಜನೆಯೊಂದನ್ನು ಸಿದ್ಧಪಡಿಸಿ ಈ ಭಾಗದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಫಲಿತಾಂಶ ಹೆಚ್ಚಳಕ್ಕಾಗಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಕಲಿಕಾ ಸಾಮಗ್ರಿ ಕೂಡ ವಿತರಿಸಲಾಗುವುದು. ಈ ಭಾಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 650 ಕೋಟಿ ನುದಾನ ಬಿಡುಗಡೆ ಮಾಡಲಾಗಿದ್ದು, ಆಯಾ ಶಸಕರಿಗೆ ಅನುದಾನ ಕೂಡ ನೀಡಲಾಗಿದೆ ಎಂದು ಹೇಳಿದರು.
ಅಕ್ಷರ ಆವಿಷ್ಕಾರದ ಜೊತೆಗೆ ಈಗ ಆರೋಗ್ಯ ಆವಿಷ್ಕಾರ ಎನ್ನುವ ಹೊಸ ಯೋಜನೆಯನ್ನು ಹಾಕಿಕೊಂಡಿದ್ದು, 250-300 ಕೋಟಿ ರೂ. ವ್ಯಯಿಸಲಾಗುವುದು. ಸಿಎಂ ಅವರು ನಮ್ಮ ಭಾಗದಲ್ಲಿ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‍ನಲ್ಲಿ ಅನುಮೋದನೆ ನೀಡಿದ್ದು, 2023-24ನೇ ಸಾಲಿನಲ್ಲಿ 33 ಪಿಎಚ್‍ಸಿಗಳಿಗೆ ಮೂರು ವರ್ಷಗಳ ಕಾಲ ಕೆಕೆಆರ್‍ಡಿಬಿಯಿಂದಲೇ ಹಣ ನೀಡಲಾಗುವುದು ಎಂದು ವಿವರಿಸಿದರು.
ಕಲಬುರಗಿಯಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯಸೌಧ ಕೂಡ ನಿರ್ಮಿಸಲಾಗುವುದು. 10 ಕೋಟಿ ರೂ. ಕೆಕೆಆರ್‍ಡಿಬಿ ಹಾಗೂ ಉಳಿದ ಹಣವನ್ನು ಸರ್ಕಾರ ಭರಿಸಲಿದೆ. ಇಲ್ಲಿನ ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 40 ಕೋಟಿ ರೂ. ಹಣ ನೀಡಲಾಗಿದ್ದು, ಹೃದ್ರೋಗ ತಡೆಯುವುದಕ್ಕಾಗಿ 48 ಅಂಬುಲೆನ್ಸ್‍ಗಳನ್ನು ಕೂಡ ಖರೀದಿ ಮಾಡಿ ಪ್ರತಿ ತಾಲ್ಲೂಕಿನಲ್ಲಿ ಓಡಿಸಲಾಗುವುದು. ಆರ್ಟ್ ಲೈನ್ ಸ್ಥಾಪಿಸುವ ಮೂಲಕ ಜನರ ಪ್ರಾಣ ರಕ್ಷಣೆಗೆ ಮುಂದಾಗಲಿದ್ದೇವೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ 7 ಜಿಲ್ಲೆಗಳ ಜನರು ಇದರ ಲಾಭ ಪಡೆಯುವಂತೆ ಅವರು ಮನವಿ ಮಾಡಿದರು. ಕೆಕೆಆರ್‍ಡಿಬಿ ಕಾರ್ಯದರ್ಶಿ ಸುಂದರೇಶಬಾಬು, ಉಪ ಕಾರ್ಯದರ್ಶಿ ಪ್ರಮಿಳಾ ಪೆರ್ಲ್ ಇದ್ದರು.
ಸಿಎಂಗೆ ಅಭಿನಂದನೆ; ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸುವುದಗಿ ತಿಳಿಸಿದ ಡಾ. ಅಜುಸಿಂಗ್ ಅವರು, ಶಾಸಕರಿಗೆ 50 ಕೋಟಿ ರೂ. ಆಪರ್ ಆಮಿಷವನ್ನು ಅಲ್ಲಗಳೆದರಲ್ಲದೆ ಸಿಎಂ ಈ ಮಾತು ಹೇಳಿರುವುದರಿಂದ ಬಿಜೆಪಿಯವರ ಹಿಂಬಾಗಿಲ ಕೈ ಚಳಕವನ್ನು ಅಲ್ಲಗಳೆಯುವಂತಿಲ್ಲ ಎಂದು ಆರೋಪಿಸಿದರು.