ಸುರಪುರ:’ರಾಜಾ ವೆಂಕಟಪ್ಪ ನಾಯಕರು ಶ್ರೇಷ್ಠ ನಾಯಕರಾಗಿದ್ದರು. ಅವರು ಒಮ್ಮೆ ಮಾತು ಕೊಟ್ಟರೇ ಎಂದಿಗೂ ತಪ್ಪುತ್ತಿರಲಿಲ್ಲ. ಶಾಸಕರಾಗಿ ಅವರು ಜನಾನುರಾಗಿಯಾಗಿದ್ದರು. ಅವರು ಬಡವರ ಪರವಾಗಿ ಎಂದಿಗೂ ಕೆಲಸ ಮಾತಿದ್ದರು’ ಎಂದು ಹೈಕೋರ್ಟ ನ್ಯಾಯವಾದಿ ಜೆ.ಅಗಸ್ಟಿನ್ ಹೇಳಿದರು.ಅವರು ಸುರಪುರ ಕನ್ನಡ ಸಾಹಿತ್ಯ ಸಂಘದಲ್ಲಿ ಏರ್ಪಡಿಸಿದ್ದ ಇತ್ತಿಚೆಗೆ ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ ‘ನೇರ ನಿಷ್ಠುರ ಸ್ವಭಾವದ ರಾಜಾ ವೆಂಕಟಪ್ಪ ನಾಯಕರು ದಮನೀತರ ಪರವಾಗಿದ್ದರು. ಅವರು ಹಾಗೂ ಮಾಜಿ ಸಚಿವರಾಗಿದ್ದ ರಾಜಾ ಮದನಗೋಪಾಲ ನಾಯಕರು ಕೂಡಿ ಮಾಡಿದ್ದ ಯಾದಗಿರಿ ಜಿಲ್ಲಾ 3ನೆಯ ಸಾಹಿತ್ಯ ಸಮ್ಮೇಳನ ಇಲ್ಲಿ ನ ಭೂತೋ ನ ಭವಿಷ್ಯತಿ ರೀತಿಯಲ್ಲಿ, ರಾಜ್ಯ ಮಟ್ಟದ ಸಮ್ಮೇಳನದಂತೆ ನಡೆಯಿತು’ ಎಂದು ಹೇಳಿದರು.
‘ಬಡವನ ಪರ ಇರಲು ಮತ ಬ್ಯಾಂಕನ್ನು ಕೂಡ ಶಾಸಕರು ನೋಡುತ್ತಿರಲಿಲ್ಲ. ಅವರು ಅದಕ್ಕಾಗಿ ಎಲ್ಲ ಶಾಸಕರಲ್ಲಿ ಭಿನ್ನರಾಗಿ ನಮಗೆ ಕಾಣುತ್ತಾರೆ ‘ ಎಂದು ಸಾಹಿತಿ ಕನಕಪ್ಪ ವಾಗನಗೇರಿ ಹೇಳಿದರು.ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಬೀಲಾಲ ಮಕಾನದಾರ, ಪ್ರಕಾಶಚಂದ ಜೈನ, ಲಕ್ಷ್ಮಣ ಗುತ್ತೇದಾರ, ಪ್ರಕಾಶ ಬಣಗಾರ, ಶೇಖರಪ್ಪ, ಮಲ್ಲಿಕಾರ್ಜುನ ಹಿರೇಮಠ, ರಾಘವೇಂದ್ರ ಭಕ್ರಿ, ಶರಣಪ್ಪ ಕಮ್ಮಾರ, ಕಮಲಾಕರ, ಮೊದಲಾದವರು ಭಾಗವಹಿಸಿದ್ದರು.ಶ್ರೀಶೈಲ ಯಂಕಂಚಿ ಸ್ವಾಗತಿಸಿ ನಿರೂಪಿಸಿದರು. ದೇವು ಹೆಬ್ಬಾಳ ವಂದಿಸಿದರು.