ಕಲಬುರಗಿ: ತಾವು ಎರಡು ವರ್ಷದವರಿದ್ದಾಗ ಕಣ್ಣುಗಳ ಕಳೆದುಕೊಂಡ ಪಂಡಿತ ಡಾ.ಪುಟ್ಟರಾಜ ಗವಾಯಿಗಳು ಬಾಹ್ಯವಾಗಿ ಕುರುಡರಾಗಿದ್ದು, ಆಂತರಿಕವಾಗಿ ಅಪಾರವಾದ ದೃಷ್ಟಿ ಹೊಂದಿದ್ದರು. ಸಂಗೀತ ಕ್ಷೇತ್ರದ ದಿಗ್ಗಜರಾಗಿ, ನೂರಾರು ಸಂಗೀತ ಕಲಾವಿದರ ಬದುಕು ಕಟ್ಟಿಕೊಟ್ಟಿದ್ದಾರೆ. ತ್ರಿಕಾಲ ಜ್ಞಾನಿ, ಸಾಹಿತಿ, ಸಮಾಜಕ್ಕೆ ಆದರ್ಶ ಗುರು, ಸಮಾಜ ಸುಧಾರಕರಾಗಿ ವಿವಿಧ ಆಯಾಮಗಳಿಂದ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಹಾಬಜಾರ ನಾಕಾ ಸಮೀಪವಿರುವ ‘ಸ್ವರಚಿತ್ರ ಮ್ಯೂಸಿಕ್ ಸ್ಟುಡಿಯೋ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಭಾನುವಾರ ಜರುಗಿದ ‘ಗಾನಯೋಗಿ ಪಂಡಿತ ಡಾ.ಪುಟ್ಟರಾಜ ಗವಾಯಿಗಳ 110ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪುಟ್ಟರಾಜ ಗವಾಯಿಗಳು ದೂರದೃಷ್ಟಿ ಹೊಂದಿದ್ದರು. ಪಂಚಾಕ್ಷರಿ ಗವಾಯಿಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದರು. ಬಸವ ಪುರಾಣವನ್ನು ಹಿಂದಿಗೆ ತರ್ಜುಮೆ ಮಾಡಿದರು. ಸಮಾಜದಲ್ಲಿದ್ದ ಅನೇಕ ಜನ ಬಡವರು, ಅನಾಥರು, ಕುರುಡರಿಗೆ ಆಶ್ರಯ ನೀಡಿದ್ದಾರೆ. ತಮ್ಮ 97ನೇ ವರ್ಷದವರೆಗೂ ವಯೋಲಿನ್, ಹಾರ್ಮೋನಿಯಂ, ತಬಲಾ ನುಡಿಸುವ ಮೂಲಕ ಸಂಗೀತ ಸೇವೆ ಮಾಡಿದ್ದು ಗಮನಿಸಿದರೆ, ಅವರಲ್ಲಿರುವ ಸಂಗೀತದ ಅಪ್ಪಟ ಭಕ್ತಿ ನಮಗೆ ಕಂಡುಬರುತ್ತದೆ ಎಂದರು.
ಸ್ಟುಡಿಯೋ ಮುಖ್ಯಸ್ಥೆ ಚಿತ್ರಲೇಖ ಗೋಲ್ಡಸ್ಮಿತ್ ಮಾತನಾಡಿ, ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಕಾರ್ಯಕ್ರಮದಲ್ಲಿ ಹವ್ಯಾಸಿ ಸಂಗೀತ ಕಲಾವಿದ ಪ್ರಕಾಶ ಸರಸಂಬಿ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಮಹಾಂತಪ್ಪ ಬದ್ದೋಲಿ, ಶಾಮರಾವ ಜೀವಣಗಿ, ಜಗನಾಥ ಹುನ್ನಳ್ಳಿ, ಶಿವಲಿಂಗಪ್ಪ ಚಿಂಚೋಳಿ, ಸಿದ್ದರಾಮ ರೆಡ್ಡಿ, ಪಿರೋಜಖಾನ್, ನಿಂಗಣ್ಣ ಮಾಸ್ಟರ, ರಮೇಶ ಗೋನಾಳ, ನಾಗೇಂದ್ರ ಭಜಂತ್ರಿ, ಅಂಬಾರಾಯ ಕಡಗಂಚಿ ಸೇರಿದಂತೆ ಮತ್ತಿತರರಿದ್ದರು.